ಚಾಕೇನಹಳ್ಳಿ ಹಿನ್ನೀರಿಗೆ ಬಾಗಿನ ಅರ್ಪಣೆ

ಹೊಳೆನರಸೀಪುರ: ತಾಲೂಕಿನ ಚಾಕೇನಹಳ್ಳಿ ಗ್ರಾಮದ ಚಾಕೇನಹಳ್ಳಿ ಕಟ್ಟೆಯ ಹಿನ್ನೀರಿಗೆ ಶಾಸಕ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ಬುಧವಾರ ಬಾಗಿನ ಅರ್ಪಿಸಿದರು.

ಬೆಳಗ್ಗೆ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಭವಾನಿ ರೇವಣ್ಣ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು. ನಂತರ ಎಚ್.ಡಿ.ರೇವಣ್ಣ, ಪ್ರಜ್ವಲ್ ರೇವಣ್ಣ, ತಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ಮಂಜುನಾಥ್ ಹಾಗೂ ಗ್ರಾಮದ ಹಿರಿಯರು ಬಾಗಿನ ಅರ್ಪಿಸಿದರು.

ಬಳಿಕ ಎಚ್.ಡಿ.ರೇವಣ್ಣ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಹತ್ತು ವರ್ಷಗಳ ನಂತರ ಕಟ್ಟೆಯು ತುಂಬಿದೆ. ಸಂಪ್ರದಾಯದಂತೆ ಬಾಗಿನ ಅರ್ಪಿಸಿದ್ದೇವೆ. ಯಾವ ಬೆಳೆ ಬೆಳೆದರೆ ರೈತರಿಗೆ ಅನುಕೂಲವಾಗಲಿದೆಯೆಂದು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ, ರೈತರಿಗೆ ತಿಳಿಸಲಾಗುವುದು ಎಂದರು.

ನಿಮ್ಮನ್ನು ನಿಂಬೆಹಣ್ಣು ರೇವಣ್ಣ ಎಂದು ಟೀಕಿಸುತ್ತಿದ್ದ ಬಿಜೆಪಿಯವರೇ ರಫೇಲ್ ಯುದ್ಧ ವಿಮಾನದ ಚಕ್ರಕ್ಕೆ ನಿಂಬೆಹಣ್ಣು ಇಟ್ಟಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣ ಮಾಡಲು ಯಾವ ಮಟ್ಟಕ್ಕೂ ಬೇಕಾದರೂ ಹೋಗುತ್ತಾರೆ. ಅವರನ್ನೇ ಕೇಳಿ ಎಂದು ನಕ್ಕರು.

ಮುಂದಿನ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೋಗುತ್ತೇನೆ. ಬಿಜೆಪಿ ಸರ್ಕಾರವನ್ನು ಉರುಳಿಸುವುದೇ ನಮ್ಮ ಗುರಿ ಎಂದು ತಿಳಿಸಿದರು.

 

Leave a Reply

Your email address will not be published. Required fields are marked *