ಜ್ಯೂಸ್ ಕುಡಿಯುವ ಮುನ್ನ ಎಚ್ಚರ

< ಸಂಸ್ಕರಿಸದ ನೀರಲ್ಲಿ ತಯಾರಿಸುತ್ತಾರೆ ಮಂಜುಗಡ್ಡೆ>

ಭರತ್‌ರಾಜ್ ಸೊರಕೆ ಮಂಗಳೂರು

ಬಿಸಿಲಿನ ತಾಪಮಾನ ಜೋರಾಗುತ್ತಿದ್ದಂತೆ ತಂಪು ಪಾನೀಯ ಕುಡಿಯುವ ಗ್ರಾಹಕರ ಪ್ರಮಾಣ ಹೆಚ್ಚಾಗುತ್ತಿದೆ. ಇದನ್ನೇ ಬಂಡವಾಳವಾಗಿಸಿಕೊಂಡು ಅಲ್ಲಲ್ಲಿ ಜ್ಯೂಸ್ ತಯಾರಿಸುವ ಘಟಕಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಈ ಘಟಕಗಳು ಬಳಸುವುದು ಸಂಸ್ಕರಿಸದ ನೀರು ಮತ್ತು ಮೀನಿಗೆ ಬಳಸುವ ಮಂಜುಗಡ್ಡೆ.

ಕಡಿಮೆಗೆ ಸಿಗುವ ಐಸ್: ಮೀನಿನ ಐಸ್ ಪ್ಲಾಂಟ್‌ಗಳಲ್ಲಿ 50 ಕೆ.ಜಿ.ಯ ಐಸ್ ಬ್ಲಾಕ್ 75 ರೂ.ಗಳಿಗೆ ದೊರೆಯುತ್ತದೆ. ಹೀಗಾಗಿ ತಂಪು ಪಾನೀಯ ತಯಾರಿಕಾ ಘಟಕಗಳು ಕಡಿಮೆ ಖರ್ಚಿನ ನೆಪದಲ್ಲಿ ಈ ಮೀನಿಗೆ ಬಳಸುವ ಐಸ್‌ಗಳನ್ನು ಬಳಸುತ್ತವೆ. ಕೆಲವು ಮಂಜುಗಡ್ಡೆ ತಯಾರಿಕಾ ಘಟಕಗಳು ಮಾತ್ರ ಟ್ಯಾಂಕರ್ ನೀರು, ಮನಪಾ ನೀರನ್ನು ಬಳಸಿದರೆ, ಇನ್ನು ಕೆಲವು ಸಂಸ್ಕರಿಸದ ನೀರನ್ನು ಬಳಸುತ್ತವೆ.

ಬಗೆಬಗೆಯ ಲೋಕಲ್ ಬ್ರಾಂಡ್: ಗ್ರಾಹಕರನ್ನು ಸೆಳೆಯಲು ಪ್ರಸ್ತುತ ಮಾರುಕಟ್ಟೆಯಲ್ಲಿ ಲೋಕಲ್ ಬ್ರಾಂಡ್‌ನಲ್ಲಿ ಬಗೆ ಬಗೆಯ ಜ್ಯೂಸ್‌ಗಳಿವೆ. ಮಾವು, ಚಿಕ್ಕು, ಬಾದಮ್, ಪುನರ್ಪುಲಿ, ಕಲ್ಲಂಗಡಿ ಮೊದಲಾದ ಹೆಸರಲ್ಲಿ ಸಣ್ಣ ಬಾಟಲಿಗಳಲ್ಲಿ ತುಂಬಿಸಿ ತಂಪು ಪಾನೀಯ ಮಾರಾಟವಾಗುತ್ತಿದೆ. ಬಹುತೇಕ ಮಂದಿ ಲೋಕಲ್ ಬ್ರಾಂಡ್ ಎಂದು ಇವುಗಳನ್ನು ಇಷ್ಟಪಟ್ಟು ಕುಡಿಯುತ್ತಾರೆ. ಇವುಗಳಿಗೆ ಬಳಸುವ ನೀರು, ರಾಸಾಯನಿಕ, ಐಸ್‌ಗಳ ಬಗ್ಗೆ ಯೋಚನೆಯನ್ನೇ ಮಾಡುವುದಿಲ್ಲ. ಆ ಬಾಟಲಿಯನ್ನು ಸರಿಯಾಗಿ ತೊಳೆಯದೆ ಬಾಯಲ್ಲಿ ಕಪ್ಪು ಕಲೆ ಹಿಡಿದಿರುತ್ತದೆ. ಎಲ್ಲದಕ್ಕಿಂತ ಮೊದಲಾಗಿ ಈ ಘಟಕಗಳಿಗೆ ಪರವಾನಿಗಿಯೇ ಇರುವುದಿಲ್ಲ.
ಮಂಗಳೂರು ಸ್ಟೇಟ್‌ಬ್ಯಾಂಕ್ ಸೇರಿದಂತೆ ಹಲವೆಡೆ ಕೈಗಾಡಿಗಳಲ್ಲಿ ದೊಡ್ಡ ಬಕೆಟ್‌ನಲ್ಲಿ ಕಲ್ಲಂಗಡಿ ಜ್ಯೂಸ್‌ಗಳಿಗೆ ಇನ್ನಷ್ಟು ಬಣ್ಣಬೆರೆಸಿ ಮಾರಾಟ ಮಾಡುತ್ತಿದ್ದಾರೆ. ಬಕೆಟ್‌ನ ಒಳಗೆ ದೊಡ್ಡ ಐಸ್ ಬ್ಲಾಕ್‌ಗಳನ್ನು ಇಟ್ಟು ಪಾನೀಯವನ್ನು ತಂಪು ಮಾಡುತ್ತಾರೆ.

ಕಬ್ಬಿನ ಜ್ಯೂಸ್‌ನ ಐಸ್ ಯಾವುದು: ಬಹುತೇಕ ಮಂದಿ ವಿಥ್ ಐಸ್ ಕಬ್ಬಿನ ಜ್ಯೂಸ್ ಇಷ್ಟಪಡುವವರು. ರಸ್ತೆ ಬದಿ ಕಬ್ಬಿನ ಜ್ಯೂಸ್ ಮಾರಾಟ ಮಾಡುವವರು ಗುಜರಿಯಿಂದ ತುಕ್ಕು ಹಿಡಿದ ಹಳೇ ಫ್ರಿಡ್ಜ್ ತಂದು ಅದರಲ್ಲಿ ಮೀನಿಸ ಐಸ್ ಬ್ಲಾಕ್ ಇಟ್ಟು ಕರಗದಂತೆ ಇಡುತ್ತಾರೆ. ಬಳಿಕ ಬೇಕಾದಂತೆ ತುಂಡು ಮಾಡಿ ಕಬ್ಬಿನ ಜ್ಯೂಸ್‌ಗೆ ಬೆರೆಸುತ್ತಾರೆ. ಮೀನಿಗೆ ಬಳಸುವ ಐಸನ್ನು ಸಹ ಒಳ್ಳೆಯ ನೀರಿನಿಂದ ತಯಾರಿಸುವುದು ಎಲ್ಲ ಐಸ್ ಪ್ಲಾಂಟ್‌ಗಳ ಕರ್ತವ್ಯ. ಯಾಕೆಂದರೆ ಮೀನು ಸಹ ಆಹಾರ ವಸ್ತುವಲ್ಲವೇ ಎನ್ನುತ್ತಾರೆ ಐಸ್ ಪ್ಲಾಂಟ್ ಮಾಲೀಕರು.

ಮನೆಯಿಂದಲೇ ನೀರು ಒಯ್ಯಿರಿ: ರೆಡಿಮೇಡ್ ಜ್ಯೂಸ್, ತಂಪುಪಾನೀಯಕ್ಕಿಂತ ಹಣ್ಣಿನ ರಸ ಕುಡಿಯುವುದು ಉತ್ತಮ. ಮನೆಯಿಂದಲೇ ಬಾಟಲಿಗಳಲ್ಲಿ ಕುದಿಸಿ, ಆರಿಸಿದ ನೀರನ್ನು ಒಯ್ಯಬಹುದು. ಐಸ್ ಬಳಸದೆ ಕಬ್ಬು ಜ್ಯೂಸ್ ಕುಡಿಯಿರಿ.

ಐಸ್ ಜ್ಯೂಸ್ ಕುಡಿಯುವುದರಿಂದ ಸೈನಸ್ ಸಮಸ್ಯೆ ಇರುವವರಿಗೆ ತೊಂದರೆ ಹೆಚ್ಚಾಗಬಹುದು. ಗಲೀಜು ನೀರಿನಿಂದ ಬ್ಯಾಕ್ಟೀರಿಯಾ ಹರಡುವ ಪ್ರಮಾಣ ಹೆಚ್ಚಾಗಿ ಗಂಟಲು, ಮೂಗು, ಕಿವಿಗೆ ಅನಾರೋಗ್ಯ ಕಾಡಬಹುದು. ಜಾಂಡಿಸ್ ಮೊದಲಾದ ರೋಗ ಉಲ್ಬಣಕ್ಕೂ ಕಾರಣವಾಗಬಹುದು. ನೀರನ್ನು ಕುದಿಸಿ, ಆರಿಸಿ ಕುಡಿಯುವುದೇ ಉತ್ತಮ.
ಡಾ.ಕೆ.ಆರ್.ಪುರಾಣಿಕ್, ತಜ್ಞ ವೈದ್ಯರು