ಆಯ್ಕೆ ಮಾಡಿಕೊಳ್ಳುವ ದಾರಿ ಮೌಲ್ಯಯುತವಾಗಿರಲಿ

ಚನ್ನರಾಯಪಟ್ಟಣ: ಭವಿಷ್ಯದ ದಾರಿ ಸುಂದರವಾಗಿರಬೇಕಾದರೆ ನಾವು ಆಯ್ಕೆ ಮಾಡಿಕೊಳ್ಳುವ ದಾರಿಯು ಮೌಲ್ಯದಿಂದ ಕೂಡಿರಬೇಕು ಎಂದು ಹಾಸನ ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಗಂಗಾಧರ್ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಟೈಮ್ಸ್ ಪಿಯು ಕಾಲೇಜು ವತಿಯಿಂದ ಗುರುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಪ್ರತಿಸ್ಪರ್ಧಿ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ಮಾತನಾಡಿ, ವಿದ್ಯಾದಾನ ಎಲ್ಲ ದಾನಕ್ಕಿಂತ ಮಹತ್ವವಾದದ್ದು. ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿ ಎಂದು ಹೇಳಿದರು.

2018-19 ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂಧಿಸಲಾಯಿತು. ಪ್ರಥಮ ವರ್ಷದ ಪಿಯುಗೆ ಸೇರ್ಪಡೆಯಾಗಿರುವ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಬಳಿಕ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪುರಸಭೆ ಸದಸ್ಯ ಸಿ.ಎನ್.ಶಶಿಧರ್, ವಾಸವಿ ವಸ್ತ್ರಾಲಯದ ಮಾಲೀಕ ಸಿ.ಆರ್.ರವಿ, ಪ್ರಾಂಶುಪಾಲ ಎ.ಬಿ.ಸುರೇಂದ್ರ ಕುಮಾರ್, ಇತರರು ಹಾಜರಿದ್ದರು.

Leave a Reply

Your email address will not be published. Required fields are marked *