ಮೈಸೂರು: ಜಯದೇವ ಸಂಸ್ಥೆಗೆ ಒಳ್ಳೆಯ ಹೆಸರು ಬರಲು ನರ್ಸ್‌ಗಳ ನಿಸ್ವಾರ್ಥ ಸೇವೆ ಕಾರಣವಾಗಿದ್ದು, ಜಯದೇವ ಆಸ್ಪತ್ರೆ ಎಂದರೆ ಜನರಲ್ಲಿ ನಂಬಿಕೆ ಮೂಡಿದೆ. ಆ ನಂಬಿಕೆಯನ್ನು ಪ್ರತಿಯೊಬ್ಬ ಸಿಬ್ಬಂದಿ ಉಳಿಸಿಕೊಳ್ಳಬೇಕು ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಕೆ.ಎಸ್. ರವೀಂದ್ರನಾಥ್ ಸಲಹೆ ನೀಡಿದರು.
ಮೈಸೂರಿನ ಜಯದೇವ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ವಿಶ್ವ ದಾದಿಯರ ದಿನಾಚರಣೆ ಅಂಗವಾಗಿ ಕೇಕ್ ಕತ್ತರಿಸಿ ನರ್ಸ್‌ಗಳಿಗೆ ಶುಭ ಹಾರೈಸಿದರು.
ಜಯದೇವ ಆಸ್ಪತ್ರೆಗಳಲ್ಲಿ ಸುಮಾರು ಒಂದು ಸಾವಿರ ಗುತ್ತಿಗೆ ದಾದಿಯರಿದ್ದು 10 ವರ್ಷ ಸೇವೆ ಮಾಡಿದವರನ್ನು ಕಾಯಂ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ನಿಮಗೆ ಈಗಾಗಲೇ ಹೆರಿಗೆ ರಜೆ 6 ತಿಂಗಳಿಗೆ ಹೆಚ್ಚಿಸಿದ್ದೇವೆ. ಪಿಎಫ್ ನೀಡುತ್ತಿದ್ದು, ವಿಮೆ ಸಹ ಇದೆ ಎಂದರು.
ನರ್ಸ್‌ಗಳು ರೋಗಿಗಳೊಂದಿಗೆ ಅನುಕಂಪದಿಂದ, ಸೌಜನ್ಯದಿಂದ ವರ್ತಿಸಬೇಕು. ಏಕೆಂದರೆ ನೀವು ವೈದ್ಯರಿಗಿಂತ ಹೆಚ್ಚಿನ ಸಮಯ ರೋಗಿಗಳೊಂದಿಗೆ ಕಳೆಯುವುದರಿಂದ ಪ್ರೀತಿಯಿಂದ ನೋಡಿಕೊಳ್ಳಿ. ದಾದಿಯರಿಗೆ ಪ್ರಪಂಚದಾದ್ಯಂತ ಸೇವೆ ಮಾಡಲು ಬೇಡಿಕೆ ಇದೆ. ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ ನಿಮಗೆಲ್ಲಾ ಶುಭವಾಗಲಿ ಎಂದರು.
ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ ಮಾತನಾಡಿ, 2024ರಲ್ಲಿ 19047 ಕ್ಯಾತ್‌ಲ್ಯಾಬ್ ಪ್ರೊಸಿಜರ್ಸ್ ನಡೆದಿದೆ. ಆಂಜಿಯೋಗ್ರಾಂ 11,375 ಜನರಿಗೆ ಮಾಡಲಾಗಿದೆ. ಅದರಲ್ಲಿ 6267 ಜನರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. 892 ರೋಗಿಗಳಿಗೆ ಸರ್ಜರಿ ಮಾಡಲಾಗಿದೆ. ಹೊರರೋಗಿಗಳಾಗಿ 2,32,129 ಜನ ಚಿಕಿತ್ಸೆ ಪಡೆದಿದ್ದಾರೆ. ಒಳರೋಗಿಗಳಾಗಿ 20286 ಜನ ಚಿಕಿತ್ಸೆ ಪಡೆದಿದ್ದಾರೆ. 1,82,963 ಜನರಿಗೆ ಇ.ಸಿ.ಜಿ. ಮಾಡಲಾಗಿದೆ, 8594 ಜನ ರೋಗಿಗಳಿಗೆ ಟಿ.ಎಂ.ಟಿ. ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಯದೇವ ಆಸ್ಪತ್ರೆಯ ಆರ್ಥಿಕ ಸಲಹೆಗಾರ ಅವಿನಾಶ್ ಜೆರಾಲ್ಡ್, ಆರ್‌ಎಂಓ ಡಾ. ಪಶುಪತಿ, ವೈದ್ಯರಾದ ಡಾ. ದಿನೇಶ್, ಡಾ. ಜಯಪ್ರಕಾಶ್, ಡಾ. ರಾಜೀತ್, ಡಾ. ಶ್ರೀನಾಥ್, ಡಾ. ಜಯಶೀಲನ್, ಡಾ. ರಶ್ಮಿ, ಡಾ. ದೇವರಾಜ್, ಯೋಗಲಕ್ಷ್ಮಿ, ಹರೀಶ್‌ಕುಮಾರ್, ಪಿಆರ್‌ಓ ವಾಣಿಮೋಹನ್, ಚಂಪಕಮಾಲಾ ಇತರರಿದ್ದರು.
