ಸಕಲೇಶಪುರ: ಕಾಡಾನೆ ದಾಳಿಯಿಂದ ಮಾನವನ ಸಾವು ಸಂಭವಿಸದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಅರಣ್ಯ ಇಲಾಖೆಯ ಆರ್.ಆರ್.ಟಿ ಹಾಗೂ ಎಡಿಸಿ ಸಿಬ್ಬಂದಿಗೆ ಅಗತ್ಯ ಸೋಲಾರ್ ಲೈಟ್, ಶೂ, ಸಮವಸ್ತ್ರ, ಬೆಂಕಿ ನಂದಿಸುವ ಕೋಲು ಮತ್ತಿತರ ವಸ್ತುಗಳನ್ನು ವಿತರಿಸಿ ಮಾತನಾಡಿದರು. ಹಾಸನ ಜಿಲ್ಲೆಯಲ್ಲೇ ಅತಿ ಹೆಚ್ಚು ಅರಣ್ಯ ಪ್ರದೇಶ ಸಕಲೇಶಪುರ, ಬೇಲೂರು, ಆಲೂರು ತಾಲೂಕುಗಳ ವ್ಯಾಪ್ತಿಯಲ್ಲಿದ್ದು ಇಲ್ಲಿ ಕಾಡಾನೆಗಳ ಹಾವಳಿಯಿಂದ ಹಲವು ಸಾವು, ನೋವು ಸಂಭವಿಸಿದೆ ಎಂದು ತಿಳಿಸಿದರು.
ಸರ್ಕಾರ ಹಲವು ತಂತ್ರಜ್ಞಾನಗಳನ್ನು ಕಾಡಾನೆ ನಿಯಂತ್ರಣಕ್ಕೆ ಬಳಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಡಾನೆ ನಿಯಂತ್ರಣಕ್ಕೆ ಇರುವ ಸಿಬ್ಬಂದಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದು ಇವರಿಗೂ ಯಾವುದೇ ಸೌಲಭ್ಯಗಳು ಸರಿಯಾಗಿ ದೊರಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಸರ್ಕಾರ ಸರಿಯಾದ ಸಲಕರಣೆಗಳನ್ನು ನೀಡಬೇಕು ಹಾಗೂ ಸೂಕ್ತ ಸಂಬಳ ನೀಡಬೇಕು. ಈ ನಿಟ್ಟಿನಲ್ಲಿ ನಾನು ಅಧಿವೇಶನದಲ್ಲಿ ಪ್ರಸ್ತಾವನೆ ಮಾಡುತ್ತೇನೆ ಎಂದು ಹೇಳಿದರು.
ಅರಣ್ಯ ಇಲಾಖೆ ಕಾಡಾನೆಗಳನ್ನು ಹಿಡಿಯುವ ಬದಲು ರೈತರು ಕಡಿದಿರುವ ಸೌದೆಗಳನ್ನು ವಶಪಡಿಸಿಕೊಳ್ಳುವುದಕ್ಕೆ ಮುಂದಾಗುತ್ತಿದ್ದಾರೆ. ಇದರಿಂದ ರೈತರು ತೋಟದಲ್ಲಿ ಮರಗಸಿ ಮಾಡುವುದಕ್ಕೂ ಅಂಜುವಂತಾಗಿದೆ. ಇದೇ ರೀತಿ ವರ್ಷದಲ್ಲಿ 3 ತಿಂಗಳು ವ್ಯವಹಾರ ಮಾಡುವ ಇಟ್ಟಿಗೆ ಉದ್ಯಮಕ್ಕೂ ತೊಂದರೆ ಉಂಟಾಗುತ್ತಿದೆ. ಅಲ್ಲದೆ ಕಾಡಂಚಿನ ಜಾಗಗಳಲ್ಲಿ ತಲೆ ತಲಾಂತರಗಳಿಂದ ವಾಸವಿರುವ ಜನರಿಗೂ ತೊಂದರೆ ಕೊಡುತ್ತಿದ್ದಾರೆ ಎಂದು ತಿಳಿಸಿದರು.
ಜಮೀನು ಮಂಜೂರಾತಿಗೆ ಅರ್ಜಿ ಹಾಕಿದವರಿಗೂ ರಕ್ಷಿತಾರಣ್ಯ ಹೆಸರಿನಲ್ಲಿ ತೊಂದರೆ ಕೊಡುವುದು ಸರಿಯಲ್ಲ. ಅರಣ್ಯ ಇಲಾಖೆಯ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ನಾನು ಸಿದ್ಧನಿದ್ದೇನೆ. ಅರಣ್ಯ ಇಲಾಖೆಯವರು ಕಾನೂನಿಗಿಂತ ಜೀವ ದೊಡ್ಡದು ಎಂಬುದನ್ನು ಮನಗಾಣಬೇಕು. ಅರಣ್ಯ ಇಲಾಖೆ ಒತ್ತಾಸೆಯಂತೆ ನಾನೂ ಸರ್ಕಾರಕ್ಕೆ ಸ್ಪೆಷಲ್ ಎಕನಾಮಿಕ್ ಜೋನ್ ರೀತಿಯಲ್ಲಿ ಸ್ಪೆಷಲ್ ಎಲಿಫೆಂಟ್ ಜೋನ್ ಮಾಡಲು ಒತ್ತಾಯಿಸುತ್ತೇನೆ ಎಂದರು.
ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಅಲ್ಲದೆ ಸಿಬ್ಬಂದಿಗಾಗಿ ವಸತಿಗೃಹ ಇಲ್ಲ ಮತ್ತು ಇಲ್ಲಿದ್ದ ವಲಯ ಅರಣ್ಯಾಧಿಕಾರಿ ಮನೆಯನ್ನು ಕಾಡಾನೆ ಕಾರ್ಯಪಡೆ ಕಚೇರಿಗೆ ನೀಡಲಾಗಿದ್ದು ಇದೀಗ ಈ ಕಚೇರಿಯನ್ನೂ ಸ್ಥಳಾಂತರ ಮಾಡಲಾಗಿದೆ. ಹೀಗಾಗಿ ಈ ಕಟ್ಟಡವನ್ನು ಕೆಡವಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕ್ವಾರ್ಟರ್ಸ್ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಈ ಬಾರಿ ಕಳೆದ ಬಾರಿಗಿಂತ ಬೆಂಕಿ ಪ್ರಕರಣಗಳನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಗುರಿ ಹೊಂದಿದ್ದು ಈ ನಿಟ್ಟಿನಲ್ಲಿ ಸುಮಾರು 66 ಕಿ.ಮೀ. ದೂರ ಫೈರ್‌ಲೈನ್ ಮಾಡಲಾಗಿದ್ದು, ಮಾರನಹಳ್ಳಿಯಲ್ಲಿ 25 ಕಿ.ಮೀ, ಕಬ್ಬಿನಹಾಲೆಯಲ್ಲಿ 16 , ಮೂರು ಕಣ್ಣು ಗುಡ್ಡದಲ್ಲಿ 15, ಬ್ಯಾಕರವಳ್ಳಿಯಲ್ಲಿ 10 ಕಿ.ಮೀ.ದೂರ ಫೈರ್‌ಲೈನ್ ಮಾಡಲಾಗಿದ್ದು ಇದರಿಂದ ಅರಣ್ಯದಲ್ಲಿ ಕಾಳ್ಗಿಚ್ಚು ಪ್ರಕರಣಗಳು ಕಂಡು ಬಂದಾಗ ತಕ್ಷಣ ಬೆಂಕಿ ನಂದಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಕಾಡಂಚಿನ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗೆ ಸಿಲಿಂಡರ್ ವಿತರಣೆ ಮಾಡಲಾಯಿತು. ಯಸಳೂರು ವಲಯ ಅರಣ್ಯಾಧಿಕಾರಿ ಕೃಷ್ಣ, ಕಸಬಾ ಅರಣ್ಯಾಧಿಕಾರಿ ಮಹದೇವ್, ಆದಿವಾಸಿ ಮುಖಂಡ ನವೀನ್ ಸದಾ, ಡಿಆರ್‌ಎಫ್‌ಒಗಳಾದ ದರ್ಶನ್, ಮಂಜುನಾಥ್, ಬಿಜೆಪಿ ಮುಖಂಡರಾದ ಜಂಬರ್ಡಿ ಲೋಹಿತ್, ರಾಜ್‌ಕುಮಾರ್, ವಿನಯ್, ಪುರಸಭಾ ಸದಸ್ಯ ಪ್ರದೀಪ್, ಲೋಕೇಶ್ ಇತರರು ಇದ್ದರು.