ಬೆಂಗಳೂರು: ರಾಜ್ಯದಲ್ಲಿ ವಿಷಪೂರಿತ ಮೆಥನಾಲ್ ಹೊಂದಿರುವ ಮದ್ಯ ಹಾಗೂ ಕಳ್ಳಭಟ್ಟಿ ಬಗ್ಗೆ ಅಧಿಕಾರಿಗಳ ಎಚ್ಚರಿಕೆ ವಹಿಸುವಂತೆ ಅಬಕಾರಿ ಇಲಾಖೆ ಆದೇಶಿಸಿದೆ.

ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಮತ್ತು ಕಳಭಟ್ಟಿ ಸೇವಿಸಿ ಅಂದಾಜು 21 ಮಂದಿ ಮೃತಪಟ್ಟಿದ್ದಾರೆ. ಅಂಥ ಘಟನೆ ರಾಜ್ಯದಲ್ಲಿ ಮರುಕಳಿಸದಂತೆ ಅಬಕಾರಿ ಜಂಟಿ ಆಯುಕ್ತರು, ಉಪ ಆಯುಕ್ತರು, ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಅಬಕಾರಿ ಕಾಯ್ದೆ 1965ರ ಜಾರಿ ಮತ್ತು ತನಿಖಾ ಸಂಬಂಧಿತ ಕೈಪಿಡಿಯನ್ವಯ ನಿರ್ದಿಪಡಿಸುವ ಕರ್ತವ್ಯ ನಿರ್ವಹಿಸಬೇಕೆಂದು ಇಲಾಖೆ ಸೂಚಿಸಿದೆ.
ಕಳ್ಳಭಟ್ಟಿ ಕೇಂದ್ರಗಳ ಮೇಲೆ ನಿಗಾ ಇಟ್ಟು ಯಾವುದೇ ರೀತಿಯ ಕಳ್ಳಭಟ್ಟಿ ತಯಾರಿಕೆಯಾಗದಂತೆ ಕ್ರಮವಹಿಸಬೇಕು. ಕಳ್ಳಭಟ್ಟಿ ತಯಾರಿಸಲು ಕಚ್ಚಾವಸ್ತುಗಳು ಸಿಗದಂತೆ ನೋಡಿಕೊಳ್ಳಬೇಕು. ಕಳ್ಳಭಟ್ಟಿ ತಯಾರಿಕರು, ಮಾರಾಟಗಾರರ ಮೇಲೆ ಗಮನಹರಿಸಬೇಕು. ಚಾಲ್ತಿಯಲ್ಲಿರುವ, ವಿಚಕ್ಷಣೆಯಲ್ಲಿರುವ ಕಳ್ಳಭಟ್ಟಿ ಕೇಂದ್ರಗಳ ಮೇಲೆ ವಿಶೇಷ ಗಮನಹರಿಸಿ, ಕ್ರಿಯಾ ಯೋಜನೆ ರಚಿಸಿ ನಿರಂತರವಾಗಿ ಸಾಮೂಹಿಕವಾಗಿ ದಾಳಿ ನಡೆಸಬೇಕು. ಈ ಮೂಲಕ ಕಳ್ಳಭಟ್ಟಿ ಕೇಂದ್ರಗಳ ನಿಮೂರ್ಲನೆಗೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದೆ.
ಕಳ್ಳಭಟ್ಟಿ ತಯಾರಿಕೆಯಲ್ಲಿ ತೊಡಗಿರುವ ಹಳೆಯ ಆರೋಪಿಗಳಿಂದ ಮುಚ್ಚಳಿಕೆ ಪಡೆಯಬೇಕು. ಜಿಲ್ಲಾಧಿಕಾರಿಗಳು ನೇತೃತ್ವದಲ್ಲಿ ಅಬಕಾರಿ ಉಪ ಆಯುಕ್ತರು, ಜಂಟಿ ಆಯುಕ್ತರು, ಸಮನ್ವಯ ಸಭೆ ನಡೆಸಿ ಪೊಲೀಸ್, ಕಂದಾಯ ಇಲಾಖೆಗಳ ಸಹಕಾರ ಪಡೆಯಬೇಕು. ಮೆಥನಾಲ್ ಲೈಸೆನ್ಸ್ ಹೊಂದಿರುವ ಕೆಮಿಕಲ್ ಘಟಕ ಮತ್ತು ಮೆಥನಾಲ್ ಉಪಯೋಗಿಸುವ ಕಾರ್ಖಾನೆಗಳಿಗೆ ಭೇಟಿ ನೀಡಬೇಕು. ಮೆಥನಾಲ್ ಎಂಬುದು ವಿಷಕಾರಿ ದ್ರವ್ಯವೆಂಬ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಮದ್ಯದಂಗಡಿಗಳ ತಪಾಸಣೆಯನ್ನು ಇನ್ನಷ್ಟು ತೀವ್ರಗೊಳಿಸಿ ಮಾದರಿಯನ್ನು ತೆಗೆದು ರಾಸಾಯನಿಕ ಪರೀಕ್ಷೆ ನಡೆಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
15 ದಿನಕ್ಕೊಮ್ಮೆ ವರದಿ ಸಲ್ಲಿಸಿ: ವಲಯ, ಉಪ ವಿಭಾಗ ಸೇರಿ ಇತರೆ ಜಾರಿ ಮತ್ತು ತನಿಖಾ ತಂಡದ ಅಬಕಾರಿ ಸಿಬ್ಬಂದಿ, ಅಧಿಕಾರಿಗಳು ಜಿಲ್ಲೆಯ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ಅಗತ್ಯ ಕ್ರಮಕೈಗೊಂಡಿರುವ ಬಗ್ಗೆ ಅನಸರಣಾ ವರದಿಯನ್ನು ವಿಭಾಗದ ಅಬಕಾರಿ ಜಂಟಿ ಆಯುಕ್ತರಿಗೆ ಸಲ್ಲಿಸಬೇಕು. ವಿಭಾಗೀಯ ಅಬಕಾರಿ ಜಂಟಿ ಆಯುಕ್ತರು, ತಮ್ಮ ವ್ಯಾಪ್ತಿಯಲ್ಲಿ ಜಾರಿ ಮತ್ತು ತನಿಖಾ ಚುಟುವಟಿಕೆಗಳ ಮೇಲುಸ್ತುವಾರಿ ವಹಿಸಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ಕ್ರಮ ತೆಗೆದುಕೊಂಡು, ಜಿಲ್ಲಾವಾರು ಕ್ರೂಢಿಕೃತ ವರದಿಯನ್ನು ಮೇ 31ರೊಳಗೆ ಮುಖ್ಯ ಆಯುಕ್ತರ ಕಚೇರಿಗೆ ಸಲ್ಲಿಸಬೇಕು. ಅಲ್ಲದೆ, ಪ್ರತಿ 15 ದಿನಕ್ಕೊಮ್ಮೆ ಅನುಸರಣಾ ವರದಿಯನ್ನು ಸಲ್ಲಿಸಬೇಕು ಎಂದು ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.
ಡಿಸ್ಟ್ರಿಲರಿ, ಬ್ರಿವರಿ ಬಾಟ್ಲಿಂಗ್ ಪರವಾನಗಿ ಶುಲ್ಕವೂ ಹೆಚ್ಚಳ: ಕರಡು ಅಧಿಸೂಚನೆ ಹೊರಡಿಸಿದ ಸರ್ಕಾರ