2008ರ ಆಗಸ್ಟ್ 27ರ ಸಂಜೆ 7 ಗಂಟೆಗೆ ಗಂಗಾಧರ್ ಎನ್ನುವವರು ನಂಜನಗೂಡು ನಗರ ಪೊಲೀಸ್ ಠಾಣೆಗೆ ಬಂದು, ‘ನನ್ನ ಒಬ್ಬನೇ ಮಗ ಶರಣ್ಗೆ ಒಂಬತ್ತು ವರ್ಷ. ಆತ ಇದೇ ಊರಿನಲ್ಲಿರುವ ಖಾಸಗಿ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದಾನೆ, ಬೆಳಿಗ್ಗೆ ಎಂದಿನಂತೆ ಆತ ಶಾಲೆಯ ವ್ಯಾನಿನಲ್ಲಿ ಶಾಲೆಗೆ ಹೋದ. ಸಂಜೆ ವ್ಯಾನಿನಲ್ಲಿ ಮನೆಗೆ ಹಿಂತಿರುಗಿ ಬರಲಿಲ್ಲವಾದ್ದರಿಂದ ಅವನನ್ನು ಹುಡುಕಿಕೊಂಡು ಶಾಲೆಗೆ ಹೋದೆವು. ಆತ ಮನೆಗೆ ಹೋದ ಎಂದು ಕಾವಲುಗಾರ ಹೇಳಿದ. ಅಷ್ಟರಲ್ಲಿ ಅವನ ವ್ಯಾನು ಶಾಲೆಗೆ ವಾಪಸ್ ಬಂದಿತು. ಅದರ ಚಾಲಕನನ್ನು ವಿಚಾರಿಸಿದಾಗ ಶಾಲೆ ಬಿಟ್ಟ ನಂತರ ಶರಣ್ಗಾಗಿ ಕಾಯುತ್ತಿದ್ದ ಯಾರೋ ಒಬ್ಬರು ಅವನನ್ನು ತಮ್ಮ ಮೋಟರ್ ಸೈಕಲ್ನಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋದರು, ಅವರು ನಿಮ್ಮ ಮನೆಯವರಿರಬೇಕೆಂದು ನಾನು ಸುಮ್ಮನಾದೆ ಎಂದ. ನಾವು ವ್ಯಾನಿನಲ್ಲಿ ಬರುವ ಇತರ ವಿದ್ಯಾರ್ಥಿಗಳನ್ನು ವಿಚಾರಿಸಿದೆವು. ಮೋಟರ್ ಸೈಕಲ್ನಲ್ಲಿ ಬಂದ ವ್ಯಕ್ತಿ ಸುಮಾರು 35ರಿಂದ 40 ವರ್ಷ ವಯಸ್ಸಿನವನೆಂದು ಅವರು ತಿಳಿಸಿ, ಆ ವಾಹನ ಕರಿಯ ಬಣ್ಣದ್ದಾಗಿತ್ತು ಎಂದರು. ಯಾರೋ ನಮ್ಮ ಮಗನನ್ನು ಅಪಹರಿಸಿದ್ದಾರೆ. ದಯವಿಟ್ಟು ಹುಡುಕಿಕೊಡಿ’ ಎಂದು ದೂರನ್ನು ನೀಡಿದರು.
ಬಾಲಕ ಕಾಣೆಯಾಗಿದ್ದಾನೆ ಎನ್ನುವ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡರು. ಶರಣ್ನ ತಾಯಿ ಪಾರ್ವತಿ ಮಗ ಸ್ಕೂಲಿನ ಸಮವಸ್ತ್ರ ಧರಿಸಿದ್ದ, ಎಂದಿನಂತೆ ಬ್ಯಾಗ್, ಟಿಫಿನ್ ಕ್ಯಾರಿಯರ್ ತೆಗೆದುಕೊಂಡು ಹೋಗಿದ್ದ ಎಂದು ತಿಳಿಸಿ ಮಗನ ಇತ್ತೀಚಿನ ಭಾವಚಿತ್ರವನ್ನು ನೀಡಿದರು. ಶರಣ್ ಶಾಲೆ ಮುಗಿದ ಬಳಿಕ ವ್ಯಾನಿನ ಬಳಿ ಬರುತ್ತಿದ್ದಾಗ ಕರಿಯ ಬಣ್ಣದ ಅಪಾಚೇ ಮೋಟರ್ ಸೈಕಲ್ನಲ್ಲಿ ಬಂದ ವ್ಯಕ್ತಿ ಆತನನ್ನು ಕರೆದ, ಅವನು ನಗುನಗುತ್ತಲೇ ಆ ಮೋಟರ್ ಸೈಕಲ್ ಏರಿ ಹೊರಟುಹೋದ. ಎಲ್ಲಿಗೆ ಹೋದನೆಂದು ಗೊತ್ತಿಲ್ಲ ಎಂದು ಶಾಲೆಯಲ್ಲಿನ ಸಾಕ್ಷಿಗಳು ಹೇಳಿದರು. ಈ ಮಾಹಿತಿಯಿಂದ ತಿಳಿದುಬಂದದ್ದೇನೆಂದರೆ ಮೋಟರ್ ಸೈಕಲ್ನ ಸವಾರ ಶರಣ್ಗೆ ಪರಿಚಿತ ಎನ್ನುವುದು.
ಶಾಲೆಯ ಹೊರಗಡೆಯ ರಸ್ತೆಯಲ್ಲಿ ಯಾವುದೇ ಸಿ.ಸಿ.ಟಿ.ವಿ ಕ್ಯಾಮರಾಗಳು ಇರದಿದ್ದುದು ತನಿಖೆಗೆ ಹಿನ್ನಡೆಯನ್ನುಂಟುಮಾಡಿತು. ಕರಿಯ ಮೋಟರ್ ಸೈಕಲ್ ಹೊಂದಿರುವ ಗಂಗಾಧರನ ಸ್ನೇಹಿತರು ಹಾಗೂ ಸಂಬಂಧಿಕರನ್ನು ವಿಚಾರಿಸಿದಾಗ ಯಾವುದೇ ಉಪಯುಕ್ತ ಮಾಹಿತಿ ದೊರೆಯಲಿಲ್ಲ. ಕುಟುಂಬದ ಬಗ್ಗೆ ದ್ವೇಷವಿದ್ದ ಯಾರದಾದರೂ ಕೈವಾಡವಿದೆಯೇ ಎಂಬ ನಿಟ್ಟಿನಲ್ಲಿಯೂ ನಡೆದ ತನಿಖೆ ಫಲಕಾರಿಯಾಗಲಿಲ್ಲ.
ಮಕ್ಕಳನ್ನು ಅಪಹರಿಸಿ ಮರಾಟ ಮಾಡುವ ಗ್ಯಾಂಗುಗಳ ಕೈವಾಡವಿರುವ ಬಗ್ಗೆ ಶಂಕಿಸಲಾದ್ದರಿಂದ ಬಾಲಕ ಶರಣ್ನ ಫೋಟೋ ಹಾಗೂ ಇತರ ವಿವರಗಳನ್ನೊಳಗೊಂಡ ಭಿತ್ತಿಪತ್ರಗಳನ್ನು ಮಾಡಿಸಿ ಸುತ್ತಮುತ್ತಲ ಪ್ರದೇಶದಲ್ಲಿ ಹಂಚಲಾಯಿತು.
ಏತನ್ಮಧ್ಯೆ, ಪೊಲೀಸರು ಕೊಟ್ಟ ಜಾಹೀರಾತನ್ನು ನೋಡಿದ ಹಲವಾರು ಜನರು ತಾವು ಆ ವಿವರಗಳನ್ನುಹೋಲುವ ಬಾಲಕನನ್ನು ನೋಡಿದ್ದೇವೆ ಎಂದು ಮಾಹಿತಿ ನೀಡತೊಡಗಿದರು. ಗೋವಾದಿಂದ ಒಬ್ಬ ವ್ಯಕ್ತಿ ಕರೆ ಮಾಡಿ ತಾನು ಪಣಜಿಯ ಹೋಟೆಲ್ ಒಂದರಲ್ಲಿ ನಿಮ್ಮ ಬಾಲಕನನ್ನು ಹೋಲುವವನನ್ನು ನೋಡಿದೆ ಎಂದಾಗ ಗಂಗಾಧರ್ ಪೊಲೀಸರ ಜತೆಗೆ ಕೂಡಲೇ ಗೋವಾಕ್ಕೆ ಹೋಗಿ ಪರಿಶೀಲಿಸಿದಾಗ ಅಲ್ಲಿ್ಲ್ದ ಬಾಲಕ ಶರಣ್ ಆಗಿರಲಿಲ್ಲ. ಆ ವ್ಯಕ್ತಿ ಸಾರ್ವಜನಿಕ ಟೆಲಿಫೋನ್ ಬೂತ್ನಿಂದ ಕರೆ ಮಾಡಿದ್ದರಿಂದ ತನಿಖೆಯ ದಿಕ್ಕು ತಪ್ಪಿಸಲು ಯಾರೋ ಕಿಡಿಗೇಡಿಗಳು ಹೀಗೆ ಮಾಡಿದ್ದಾರೆ ಎಂದು ಪೊಲೀಸರು ತೀರ್ವನಿಸಿದರು.
ಅಪಹರಣವಾಗಿ ಒಂದು ವಾರ ಕಳೆದು, ಶರಣ್ನ ಕ್ಷೇಮದ ಬಗ್ಗೆ ಎಲ್ಲರೂ ಆತಂಕಗೊಂಡರು. ಒಂದು ವೇಳೆ ಒತ್ತೆಹಣಕ್ಕಾಗಿ ಅಪಹರಿಸಿದ್ದರೆ ಇಷ್ಟೊತ್ತಿಗೆ ಅಪಹರಣಕಾರರು ಹಣಕ್ಕೆ ಬೇಡಿಕೆ ಇಡಬೇಕಿತ್ತು. ಒತ್ತೆಹಣಕ್ಕಾಗಿ ಬೇಡಿಕೆ ಬರದೇ ಹೋದಲ್ಲಿ ಅಂತಹ ಅಪಹರಣಗಳು ಬೇರೆ ದೇಶಗಳಿಗೆ ಮಕ್ಕಳ ಕಳ್ಳಸಾಗಾಣಿಕೆಗಾಗಲೀ, ಇಲ್ಲವೇ ಮಕ್ಕಳನ್ನು ಭಿಕ್ಷಾಟನೆಗೆ ಅಥವಾ ಬಲವಂತ ಕಾರ್ವಿುಕ ಕೆಲಸಕ್ಕೆ ಹಾಕುವುದಕ್ಕಾಗಲೀ, ಲೈಂಗಿಕ ಶೋಷಣೆಗಾಗಲೀ, ಅಂಗಾಂಗ ಕದಿಯಲಿಕ್ಕಾಗಲೀ, ಇಲ್ಲವೇ ಭೂಮಿಯಲ್ಲಿ ಹುದುಗಿರುವ ನಿಧಿ ನಿಕ್ಷೇಪಗಳಿಗಾಗಿ ಬಲಿಕೊಡುವುದಕ್ಕಾಗಲೀ ನಡೆಯುತ್ತವೆ. ಈ ನಿಟ್ಟಿನಲಿಯೂ ತನಿಖೆ ನಡೆದಾಗ ಯಾವುದೇ ಸುಳಿವು ಸಿಗಲಿಲ್ಲ.
ಸುಮಾರು ಆರು ತಿಂಗಳಾದರೂ ಯಾವುದೇ ಮಾಹಿತಿ ಸಿಗದ್ದರಿಂದ, ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿದರು. ಇದರಿಂದ ಅತೃಪ್ತನಾದ ಗಂಗಾಧರ್ ಮೈಸೂರು ವಲಯದ ಐಜಿಪಿಯನ್ನು ಕಂಡು ಸಹಾಯ ಕೋರಿದಾಗ ಮನಕರಗಿದ ಆ ಅಧಿಕಾರಿ ಪ್ರಕರಣದ ಮರುತನಿಖೆಗೆ ತಮ್ಮ ಕಚೇರಿಯಲ್ಲಿನ ಒಬ್ಬ ಯುವ ಅಧಿಕಾರಿಗೆ ಆದೇಶಿಸಿದರು.
ತನಿಖಾಧಿಕಾರಿ ಶರಣ್ನ ಕುಟುಂಬಕ್ಕೆ ಹತ್ತಿರವಾಗಿದ್ದ ಎಲ್ಲರ ವಿವರ ಪಡೆದರು. ಆ ಕುಟುಂಬದವರ ಮೇಲೆ ಯಾರಿಗಾದರೂ ದ್ವೇಷವಿತ್ತೇ, ಗಂಗಾಧರ್ ಇತ್ತೀಚೆಗೆ ಯಾರೊಡನೆಯಾದರೂ ವ್ಯಾಜ್ಯಕ್ಕೆ ಇಳಿದಿದ್ದರೇ, ಶರಣ್ ಯಾರ ಜತೆಗೆ ಸಲಿಗೆ ಹೊಂದಿದ್ದ ಇತ್ಯಾದಿ ಮಾಹಿತಿ ಕಲೆಹಾಕಿದರು.
ಕುಟುಂಬಕ್ಕೆ ಹತ್ತಿರವಾಗಿ ನಂಜನಗೂಡು ಮತ್ತು ಆಸುಪಾಸಿನಲ್ಲಿ ವಾಸಿಸುತ್ತಿದ್ದವರನ್ನು, ಅವರಲ್ಲಿ ಮೋಟರ್ ಸೈಕಲ್ ಹೊಂದಿದ್ದವರನ್ನು ವಿಶೇಷವಾಗಿ ಪ್ರಶ್ನಿಸಲಾಯಿತು. ಯಾರಾದರೂ ಬೇರೆಯವರಿಂದ ಮೋಟರ್ ಸೈಕಲ್ ಎರವಲು ಪಡೆದಿದ್ದರೇ ಎಂದು ಕೇಳಲಾಯಿತು. ತನಿಖಾಧಿಕಾರಿ ಮುಂದೆ ಹಾಜರಾದವರಲ್ಲಿ ಮಹದೇವ ಕುಮಾರ್ ಎನ್ನುವವನು ಸಮರ್ಪಕ ಉತ್ತರವನ್ನು ಕೊಡಲಿಲ್ಲ ಎನಿಸಿದಾಗ ಅವನ ಹಿನ್ನೆಲೆ ಪರಿಶೀಲಿಸಲಾಯಿತು. ಅವನು ಸಣ್ಣ ಅಂಗಡಿ ಇಟ್ಟುಕೊಂಡು ಶೋಕಿಜೀವನ ನಡೆಸುತ್ತಿದ್ದ; ಸ್ಥಳೀಯ ಮಠವೊಂದರಲ್ಲಿ ವಾಹನ ಚಾಲಕನಾಗಿಯೂ ಕೆಲಸ ಮಾಡುತ್ತಿದ್ದ ಎಂಬ ಅಂಶ ಬೆಳಕಿಗೆ ಬಂತು. ಆತನನ್ನು ಪ್ರಶ್ನಿಸಿದಾಗ, ‘ನಾನೇನೂ ಮಾಡಿಲ್ಲ, ನನಗೆ ಈ ವಿಷಯದ ಬಗ್ಗೆ ಏನೂ ಗೊತ್ತಿಲ್ಲ’ ಎಂದ. ಅವನ ಸೆಲ್ ಫೋನ್ ಕರೆಗಳ ವಿವರ ಪರಿಶೀಲಿಸಿದಾಗ ಅಪಹರಣವಾದ ದಿನ ಆತ ಶರಣ್ನ ಶಾಲೆಯ ಬಳಿ ಇದ್ದುದು ಗೊತ್ತಾಯಿತು. ಇದಲ್ಲದೇ ಆತ ಲೇವಾದೇವಿ ವ್ಯವಹಾರವನ್ನು ಮಾಡುತ್ತಿದ್ದ ವಿಷಯವೂ ತಿಳಿದು ಬಂದು ಅವನತ್ತ ಸಂಶಯದ ಸೂಜಿ ಬೊಟ್ಟು ಮಾಡಿತು.
ಮತೊಮ್ಮೆ ಮಹದೇವನನ್ನು ತೀವ್ರ ವಿಚಾರಣೆ ಮಾಡಿದಾಗ ಆತ, ‘ನನಗೆ ಆ ಸಮಯದಲ್ಲಿ ಸಾಕಷ್ಟು ಸಾಲವಿತ್ತು, ಶರಣ್ನನ್ನು ಅಪಹರಿಸಿದರೆ ಗಂಗಾಧರ್ ಹಣವನ್ನು ಕೊಟ್ಟೇ ಕೊಡುತ್ತಾನೆಂದು ತಿಳಿದಿದ್ದೆ. ಮೈಸೂರಿನ ಸ್ನೇಹಿತನೊಬ್ಬನಿಂದ ಅವನ ಮೋಟರ್ ಸೈಕಲನ್ನು ಒಂದು ದಿನಕ್ಕಾಗಿ ಎರವಲು ಪಡೆದು, ಶರಣ್ನನ್ನು ಪುಸಲಾಯಿಸಿ ನನ್ನ ಮನೆಗೆ ಕರೆದುಕೊಂಡು ಬಂದೆ. ಆದರೆ ಗಂಗಾಧರ್ಗೆ ಒತ್ತೆಹಣಕ್ಕೆ ಫೋನ್ ಮಾಡಲು ಹೆದರಿಕೆಯಾಯಿತು. ಏಕೆಂದರೆ ನನ್ನ ಧ್ವನಿ ಆತನಿಗೆ ಚೆನ್ನಾಗಿ ತಿಳಿಯುತ್ತಿತ್ತು. ಏತನ್ಮಧ್ಯೆ, ಶರಣ್ ಬಾಯಿಗೆ ಬಟ್ಟೆ ತುರುಕಿ ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದೆ. ಆದರೆ ಆತ ಪದೇಪದೆ ಕಿರುಚುತ್ತಿದ್ದುದರಿಂದ ನೆರೆಹೊರೆಯವರಿಗೆ ನನ್ನ ಕೃತ್ಯ ತಿಳಿಯಬಹುದೆಂದು ಹೆದರಿ ಅವನ ಕತ್ತನ್ನು ಹಿಸುಕಿ ಕೊಲೆ ಮಾಡಿ ಅದೇ ರಾತ್ರಿ ನದಿಯಲ್ಲಿ ಶವವನ್ನು ಬಿಸಾಕಿದೆ. ನನ್ನ ಅದೃಷ್ಟಕ್ಕೆ ಬಾಲಕನ ಶವ ಪತ್ತೆಯಾಗಲಿಲ್ಲ. ಹೀಗಾಗಿ ಆತ ಮೃತಪಟ್ಟಿದ್ದಾನೋ ಅಥವಾ ಬದುಕಿದ್ದಾನೋ ಎಂದು ಯಾರಿಗೂ ತಿಳಿಯಲಿಲ್ಲ’ ಎಂದು ಹೇಳಿದ. ಆರೋಪಿಯ ತಪ್ಪೊಪ್ಪಿಗೆ ಹೇಳಿಕೆಯ ಮೇರೆಯಿಂದಲೇ ಆರೋಪಪಟ್ಟಿ ಸಲ್ಲಿಸಲು ಸಾಧ್ಯವಿಲ್ಲದಿರುವುದರಿಂದ ಬಾಲಕನ ಶವಕ್ಕಾಗಿ ನದಿಪಾತ್ರದಲ್ಲಿ ಹುಡುಕಾಟ ನಡೆಸಲಾಯಿತು. ಒಂದು ಗ್ರಾಮದಲ್ಲಿ ವರ್ಷವೊಂದರ ಹಿಂದೆ ನದಿಯಲ್ಲಿ ತೇಲಿ ಬಂದ ಟಿಫನ್ ಕ್ಯಾರಿಯರ್ ಮತ್ತು ನೀರಿನ ಬಾಟಲ್ ಕುರಿಗಾಹಿಯೊಬ್ಬನಿಗೆ ಸಿಕ್ಕಿದೆ ಎನ್ನುವ ಮಾಹಿತಿ ದೊರಕಿತು. ಆ ವ್ಯಕ್ತಿಯನ್ನು ಪತ್ತೆಮಾಡಿ ವಿಚಾರಿಸಿದಾಗ ಆತ ನದಿಯಲ್ಲಿ ಸಿಕ್ಕ ಪ್ಲಾಸ್ಟಿಕ್ ಲಂಚ್ ಬಾಕ್ಸ್ ಮತ್ತು ಬಾಟಲನ್ನು ತನ್ನ ಮನೆಯಲ್ಲಿ ಉಪಯೋಗಿಸುತ್ತಿದ್ದೇನೆ ಎಂದು ಹೇಳಿದ. ಅವನ್ನು ಗಂಗಾಧರ್ನ ಕುಟುಂಬದವರು ಗುರುತಿಸಿದರು. ಕೊನೆಗೂ ಕಾಣೆಯಾದ ಪ್ರಕರಣ ಕೊಲೆ ಪ್ರಕರಣವಾಗಿ ಪರಿವರ್ತನೆಯಾಯಿತು. ಬಾಲಕ ಶರಣ್ ಜೀವಂತವಾಗಿದ್ದಾಗ ಕಟ್ಟಕಡೆಯಲ್ಲಿ ಅವನ ಜತೆಗಿದ್ದುದು ಮಹದೇವನೇ ಎಂದು ಸಾಕ್ಷಿಗಳು ಹೇಳಿದ್ದರಿಂದ ಸಾಂರ್ದಭಿಕ ಸಾಕ್ಷ್ಯದ ಆಧಾರದ ಮೇಲೆಯೇ ಅವನಿಗೆ ಐದು ವರ್ಷಗಳ ಕಾರಾಗೃಹವಾಸದ ಶಿಕ್ಷೆಯಾಯಿತು.
ಮಕ್ಕಳನ್ನು ಶಾಲೆಗೆ ವ್ಯಾನಿನಲ್ಲಿ ಕಳಿಸಿದರೆ, ವ್ಯಾನಿನಲ್ಲಿಯೇ ವಾಪಸ್ ಕಳಿಸಬೇಕೆಂದೂ ಮಾತಾಪಿತರ ಹೊರತಾಗಿ ಬೇರೆ ಯಾರ ಜೊತೆಗೂ ಮಕ್ಕಳನ್ನು ಕಳಿಸಬಾರದೆಂದೂ ಶಾಲೆಗೆ ಸೂಚಿಸಬೇಕು. ಪರಿಚಿತರಾಗಲೀ ಅಪರಿಚಿತರಾಗಲೀ ಯಾವುದೇ ಆಮಿಷ ನೀಡಿ ಕರೆದರೂ ಅವರೊಡನೆ ಹೋಗಬಾರದು, ಪರರು ಕೊಟ್ಟ ತಿನಿಸುಗಳನ್ನು ಶಿಕ್ಷಕರ ಅನುಮತಿಯಿಲ್ಲದೆ ತಿನ್ನಬಾರದು, ಪರರು ಮೈಮುಟ್ಟಲು ಬಿಡಬಾರದು ಎಂದು ಮಕ್ಕಳಿಗೆ ಚಿಕ್ಕಂದಿನಿಂದಲೇ ಹೇಳಿಕೊಡಬೇಕು. ಮಕ್ಕಳ ದೈಹಿಕ ಹಾಗೂ ಮಾನಸಿಕ ಸ್ಥಿತಿಯನ್ನು ಪ್ರತಿದಿನವೂ ಗಮನಿಸಿ ಯಾವುದೇ ವ್ಯತ್ಯಾಸ ಕಂಡರೂ ಕ್ರಮ ಕ್ಯೆಗೊಳ್ಳಬೇಕು. ಈಚೆಗೆ ಜಿಪಿಎಸ್ ಇರುವ ಮಣಿಕಟ್ಟಿನ ಬ್ಯಾಂಡುಗಳು ಮಾರುಕಟ್ಟೆಯಲ್ಲಿ ಬಂದಿವೆ. ಇವುಗಳ ಮೂಲಕ ಮಕ್ಕಳು ಎಲ್ಲಿದ್ದಾರೆ ಎಂದು ತಿಳಿಯಬಹುದು.
‘ಸಮಾಜದ ಅತಿ ದುರ್ಬಲ ನಾಗರಿಕರಾದ ಮಕ್ಕಳಿಗೆ ಭಯ ಹಾಗೂ ಹಿಂಸೆಯ ವಾತಾವರಣವಿಲ್ಲದಿರುವ ಜೀವನವನ್ನು ನೀಡುವುದು ನಮ್ಮ ಕರ್ತವ್ಯ’ ಎಂದರು ನೆಲ್ಸನ್ ಮಂಡೇಲಾ. ರಾಜ್ಯದಲ್ಲಿ ದಿನವೂ ಇಂತಹ ಸುಮಾರು 10 ಪ್ರಕರಣಗಳು ನಡೆಯುವುದರಿಂದ ಮಕ್ಕಳನ್ನು ಹೊರಗೆ ಕಳುಹಿಸುವಾಗ ಎಚ್ಚರದಿಂದಿರಬೇಕು.