
ಆರ್.ತುಳಸಿಕುಮಾರ್ ಬೆಂಗಳೂರು: ಭವಿಷ್ಯದಲ್ಲಿ ಬಡಾವಣೆ ರಚಿಸುವ ಪ್ರದೇಶಗಳಲ್ಲಿ ಅನಧಿಕೃತ ಮನೆಗಳ ನಿರ್ಮಾಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಅಂತಹ ಮನೆಗಳಿಗೆ ಕಲ್ಪಿಸಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಬಿಡಿಎಯಿಂದ ಬೆಸ್ಕಾಂಗೆ ಪತ್ರ ರವಾನೆಯಾಗಿರುವುದಕ್ಕೆ ರೈತರು ಸೇರಿ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಉದ್ದೇಶಿತ ಪಿಆರ್‌ಆರ್-2 ರಸ್ತೆ ಯೋಜನೆಯು ಮೈಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ ಹಾಗೂ ಕನಕಪುರ ರಸ್ತೆ ಮಾರ್ಗವಾಗಿ ಹೊಸೂರು ರಸ್ತೆಯನ್ನು ಸಂಪರ್ಕಿಸಲಿದೆ. ಈ ರಸ್ತೆಯು ಹಾದುಹೋಗುವ ಅಕ್ಕಪಕ್ಕದ ಪ್ರದೇಶದಲ್ಲಿ ಹೊಸ ಲೇಔಟ್‌ಗಳನ್ನು ರಚಿಸುವ ಆಶಯವನ್ನು ಬಿಡಿಎ ಹೊಂದಿದೆ. ಹಾಗಾಗಿ ಈ ಪ್ರದೇಶಗಳಲ್ಲಿನ ಗ್ರಾಮಗಳಲ್ಲಿ ಅನಧಿಕೃತ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕೊಡಬಾರದು ಎಂಬ ವಾದವನ್ನು ಬಿಡಿಎ ವಾದ ಮುಂದಿಟ್ಟಿದೆ. ಈ ಪತ್ರವನ್ನು ಬಿಡಿಎ ಕಾರ್ಯನಿವಾರ್ಹಕ ಇಂಜಿನಿಯರ್ ನೇರವಾಗಿ ಬೆಸ್ಕಾಂನ ಕೆಂಗೇರಿ ವಿಭಾಗದ ಎಇಇಗೆ ಪತ್ರ ಬರೆದಿದ್ದಾರೆ. ಇದನ್ನಾಧರಿಸಿ ಬೆಸ್ಕಾಂನ ಸ್ಥಳೀಯ ಅಧಿಕಾರಿಯು ಇತರ ಎಇಇ ಪ್ರತ್ಯೇಕ ಪತ್ರ ರವಾನಿಸಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಾಕೀತು ಮಾಡಿದ್ದಾರೆ.
ಸರ್ಕಾರದ ಯಾವುದೇ ಸಂಸ್ಥೆಯು ತನ್ನ ಸೂಚನೆಗಳನ್ನು ಪಾಲಿಸುವಂತೆ ಇನ್ನೊಂದು ಸಂಸ್ಥೆಗೆ ಮಾಹಿತಿ ರವಾನಿಸಬೇಕಿದ್ದ ಮುಖ್ಯಸ್ಥರೇ ಪತ್ರ ಬರೆಯುವುದು ವಾಡಿಕೆ. ಆದರೆ, ಈ ಪ್ರಕರಣದಲ್ಲಿ ಬಿಡಿಎನ ಇಇ ದರ್ಜೆಯ ಅಧಿಕಾರಿ ನೇರವಾಗಿ ಬೆಸ್ಕಾಂ ಎಇಇಗೆ ಪತ್ರ (ಜ.9) ಬರೆದು ಸೂಚನೆ ಪಾಲಿಸುವಂತೆ ತಿಳಿಸಿದ್ದಾರೆ. ಇದನ್ನಧರಿಸಿ ಬೆಸ್ಕಾಂ ಎಇಇ ಜ.17ರಂದು ಸಂಸ್ಥೆಯ ಇತರ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಈ ಪತ್ರ ಕೈಸೇರುತ್ತಿದ್ದಂತೆ ಬೆಸ್ಕಾಂ ಇಂಜಿನಿಯರ್‌ಗಳು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ. ಏಕಾಏಕಿ ಕ್ರಮ ಕೈಗೊಂಡಲ್ಲಿ ಮನೆ ನಿರ್ಮಿಸುವುದು ಹೇಗೆ ಎಂದು ನಾಗರಿಕರು ಅಳಲು ವ್ಯಕ್ತಪಡಿಸಿದ್ದಾರೆ.
ಬಿಡಿಎಗೆ ಅಧಿಕಾರ ಕೊಟ್ಟವರು ಯಾರು?:
ನಗರದ ಹೊರವಲಯದಲ್ಲಿ ಬಿಡಿಎ ಹೊಸ ಬಡಾವಣೆಗಳನ್ನು ನಿರ್ಮಿಸಲು ಮುಂದಾಗಿದೆ. ಇದಕ್ಕಾಗಿ ಆಯಾ ಗ್ರಾಮಗಳಲ್ಲಿ ಲಭ್ಯ ಜಮೀನಿನ ಸರ್ವೆ ಕೈಗೊಂಡಿದೆ. ಜತೆಗೆ ಡಿಪಿಆರ್ ಸಿದ್ಧಪಡಿಸುತ್ತಿದ್ದು, ಭೂಸ್ವಾಧೀನ ಪ್ರಕ್ರಿಯೆಯ ಆರಂಭಿಕ ಕಾರ್ಯಕ್ಕೂ ಚಾಲನೆ ನೀಡಿದೆ. ಆದರೆ, ಎಂದೋ ನಿರ್ಮಾಣವಾಗಲಿರುವ ಲೇಔಟ್‌ಗಳಿಗೆ ಈಗಲೇ ನಮ್ಮ ಸ್ವಂತ ಜಮೀನಿನಲ್ಲಿ ವಾಸಕ್ಕೆ ಮನೆ ನಿರ್ಮಿಸಿಕೊಳ್ಳಲು ತಡೆಯೊಡ್ಡುವುದು ಯಾವ ನ್ಯಾಯ. ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆ ವೇಳೆ ಇಂತಹ ನಿಯಮ ರೂಪಿಸುವುದು ಸರಿ. ಈಗಲೇ ನಿರ್ಮಾಣ ಹಂತದ ಕಟ್ಟಡಗಳಿಗೆ ಕಲ್ಪಿಸಿರುವ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸುವಂತೆ ಬಿಡಿಎಗೆ ಅಧಿಕಾರ ನೀಡಿರುವವರು ಯಾರೆಂದು ತಿಳಿಸಲಿ ಎಂಬುದಾಗಿ ರೈತರು ಸಿಟ್ಟು ವ್ಯಕ್ತಪಡಿಸಿದ್ದಾರೆ.
ಹಿಂದಿನ ವರ್ಷವೂ ಪತ್ರ ರವಾನೆ:
2024ರ ಫೆಬ್ರವರಿಯಲ್ಲಿ ಇದೇ ಮಾದರಿಯ ಪತ್ರವನ್ನು ಬಿಡಿಎ ಆಯುಕ್ತರು ಬೆಸ್ಕಾಂಗೆ ರವಾನಿಸಿದ್ದರು. ಶಿವರಾಮ ಕಾರಂತ ಲೇಔಟ್ ಸುತ್ತಲಿನ ಪ್ರದೇಶಗಳಲ್ಲಿ ರಚನೆಯಾಗಲಿರುವ ಬಡಾವಣೆಗಳ ಪ್ರದೇಶದಲ್ಲಿ ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬಾರದೆಂದು ಸೂಚಿಸಿದ್ದರು. ಇದನ್ನಾಧರಿಸಿ ಕೆಲ ದಿನಗಳ ಮಟ್ಟಿಗೆ ಬೆಸ್ಕಾಂ ಹೊಸದಾಗಿ ವಿದ್ಯುತ್ ಸಂಪರ್ಕ ನೀಡಿರಲಿಲ್ಲ. ಬಳಿಕ ರೈತ ಮುಖಂಡರು ನಿಯಮಾವಳಿಯನ್ನು ಮನವರಿಕೆ ಮಾಡಿಕೊಟ್ಟ ಬಳಿಕ ಸಂಪರ್ಕ ಮರುಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿತ್ತು.
ಸೌಲಭ್ಯ ನಿರಾಕರಿಸುವಂತಿಲ್ಲ:
ಭಾರತೀಯ ವಿದ್ಯುಚ್ಛಕ್ತಿ ಕಾಯ್ದೆಯ ನಿಯಮ 43ರ ಅನ್ವಯ ವ್ಯಕ್ತಿಯೊಬ್ಬ ಹೊಸದಾಗಿ ಮನೆ ನಿರ್ಮಿಸಿಕೊಳ್ಳಲು ಎಸ್ಕಾಂಗೆ ಅರ್ಜಿ ಸಲ್ಲಿಸಿದರೆ ಅದನ್ನು ಮಾನ್ಯ ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಆದರೀಗ ಸುಪ್ರೀಂಕೋರ್ಟ್ ಆದೇಶವನ್ನು ಮುಂದಿಟ್ಟು ಸ್ಥಳೀಯ ಸಂಸ್ಥೆಗಳು ಬೆಸ್ಕಾಂ ಮೇಲೆ ಒತ್ತಡ ಹೇರಿ ಎಲ್ಲ ರೀತಿಯ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸುವಂತೆ ಸೂಚಿಸುತ್ತಿವೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಗ್ರಾಪಂನಿಂದ ಅನುಮತಿ ಪಡೆದು ಕಟ್ಟಡ ನಿರ್ಮಿಸುತ್ತಿದ್ದು, ಅಂತಹವುಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತಿರುವುದು ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸಿದೆ ಎಂದು ರೈತ ಮುಖಂಡರೊಬ್ಬರು ದೂರಿದ್ದಾರೆ.
20 ಗ್ರಾಮಗಳಲ್ಲಿ ಸಮಸ್ಯೆ:
ಪಿಆರ್‌ಆರ್-2 ನಿರ್ಮಾಣವಾಗಲಿರುವ ಮಾರ್ಗದಲ್ಲಿ ಕೆಂಗೇರಿ, ಉತ್ತರಹಳ್ಳಿ, ಜಿಗಣಿ ಹಾಗೂ ಬೇಗೂರು ಹೋಬಳಿಗಳಿಗೆ ಸೇರಿದ 20 ಹಳ್ಳಿಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಕ್ಕೆ ಸೂಚಿಸಲಾಗಿದೆ. ಬಡಾಮನವರ್ತೆಕಾವಲ್, ಅಗರ, ಕಗ್ಗಲಿಪುರ, ಒ.ಬಿ.ಚೂಡಹಳ್ಳಿ, ಗುಲಕಮಲೆ, ಹುತ್ತರಿ, ಗುಡಿಮಾವು, ಕಂಬೀಪುರ, ದೇವಗೆರೆ, ಗಂಗಸಂದ್ರ, ಮಾರಗೊಂಡನಹಳ್ಳಿ, ಹುಲ್ಲಳ್ಳಿ, ಬಿಂಗೀಪುರ, ಹುಲಿಮಂಗಲ, ಬೆಟ್ಟದದಾಸಪುರ, ಯಲೇನಹಳ್ಳಿ, ಮೈಲಸಂದ್ರ, ಕಮ್ಮನಹಳ್ಳಿ, ಹೊಮ್ಮದೇವನಹಳ್ಳಿ ಹಾಗೂ ಬೇಗೂರು ಗ್ರಾಮಗಳು ಸಮಸ್ಯೆಗೆ ಸಿಲುಕಿವೆ.
ಎಂದೋ ರಚಿಸಲಿರುವ ಲೇಔಟ್‌ಗಾಗಿ ಈಗಿನಿಂದಲೇ ನಾಗರಿಕರಿಗೆ ವಿದ್ಯುತ್ ಸಂಪರ್ಕ ನಿರಾಕರಿಸುವುದು ಯಾರೂ ಒಪ್ಪುವಂತಹದ್ದಲ್ಲ. ರೈತರ ಮಕ್ಕಳು ಸ್ವಂತ ಉದ್ಯೋಗಕ್ಕಾಗಿ ಶೆಡ್ ನಿರ್ಮಿಸಲು ವಿದ್ಯುತ್ ನಿರಾಕರಿಸಲಾಗುತ್ತಿದೆ. ಸರ್ಕಾರಿ ಸಂಸ್ಥೆಗಳೇ ಗ್ರಾಪಂ ಮೇಲೆ ಒತ್ತಡ ಹೇರಿ ನಮ್ಮ ಹಕ್ಕುಗಳಿಗೆ ತಡೆ ಒಡ್ಡುತ್ತಿವೆ. ಇವರಿಗೆ ರೈತರ ಜಮೀನು ಬೇಕು, ಸೌಲಭ್ಯ ನೀಡುವುದಿಲ್ಲ ಎಂಬ ವಾದ ಸರಿಯಲ್ಲ. ಈ ಆದೇಶವನ್ನು ತಕ್ಷಣವೇ ವಾಪಸ್ ಪಡೆಯಬೇಕು.
– ಚನ್ನಪ್ಪ, ರೈತ ಮುಖಂಡ
ಅನಧಿಕೃತ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಬಹುದೆಂದು ಸುಪ್ರೀಂಕೋರ್ಟ್ ಆದೇಶ ಇದೆ. ಆದರೆ, ಬಿಡಿಎ ತನ್ನ ಹೊಸ ಲೇಔಟ್ ರಚನೆ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಗೆ ಪತ್ರ ಬರೆದಿದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
– ಮಹಾಂತೇಶ್ ಬೀಳಗಿ, ಬೆಸ್ಕಾಂ ಎಂಡಿ