ಟೀಮ್ ಇಂಡಿಯಾದಲ್ಲಿ ಕನ್ನಡಿಗರಿಗೆ ಅನ್ಯಾಯ?

ಭಾರತೀಯ ಕ್ರಿಕೆಟ್​ನಲ್ಲಿ ಕರ್ನಾಟಕದ ಕ್ರಿಕೆಟಿಗರ ಕೊಡುಗೆ ಅಪಾರವಾದದ್ದು. ಆದರೆ ಹಾಲಿ ತಂಡದಲ್ಲಿ ಕರ್ನಾಟಕದ ಆಟಗಾರರಿಗೆ ಸೂಕ್ತ ಅವಕಾಶದ ಕೊರತೆ ಕಾಡುತ್ತಿದೆ. ಮುಂದಿನ ವರ್ಷದ ಏಕದಿನ ವಿಶ್ವಕಪ್​ಗೆ ತಂಡ ಕಟ್ಟುತ್ತಿರುವ ವಿರಾಟ್ ಕೊಹ್ಲಿ-ರವಿಶಾಸ್ತ್ರಿ ಒಳಗೊಂಡ ಟೀಮ್ ಮ್ಯಾನೇಜ್​ವೆುಂಟ್​ನಿಂದ ಕನ್ನಡಿಗರಿಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ. ಮತ್ತೊಂದೆಡೆ ಟೆಸ್ಟ್ ತಂಡದಲ್ಲೂ ಆಡುವ ಅವಕಾಶಕ್ಕಾಗಿಯೇ ಪರದಾಡುವ ಸ್ಥಿತಿಯನ್ನು ಕನ್ನಡಿಗರು ಎದುರಿಸುತ್ತಿದ್ದಾರೆ. ಆಯ್ಕೆಗಾರರ ಗೊಂದಲದ ನಿರ್ಧಾರಗಳು ಮತ್ತು ತಂಡದಲ್ಲಿನ ಅಸ್ಥಿರ ನಿರ್ವಹಣೆಗಳಿಗೆ ರಾಜ್ಯದ ಆಟಗಾರರು ಬಲಿಯಾಗುತ್ತಿರುವುದು ವಿಪರ್ಯಾಸವೆನಿಸಿದೆ. ‘ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಕನಿಷ್ಠ 3 ಟ್ಯಾಟೂ, ಪ್ರತಿ ತಿಂಗಳು ಕೇಶವಿನ್ಯಾಸ ಬದಲಾವಣೆ, ವೃತ್ತಿಪರ ಮಾಡೆಲ್ ಒಬ್ಬಳ ಜತೆ ಫೋಟೋಶೂಟ್, ಅನುಷ್ಕಾ ಶರ್ಮರ ಸಿನಿಮಾ ಬಿಡುಗಡೆಯಾದಾಗ ಅದನ್ನು ನೋಡಿ ಟ್ವಿಟರ್​ನಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿರಬೇಕು ಮತ್ತು ಆಗಾಗ ಕ್ರಿಕೆಟ್ ಆಡುತ್ತಿರಬೇಕು!!!’ -ಇದು ಟೀಮ್ ಇಂಡಿಯಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಜೋಕ್ಸ್. ಆದರೆ ಕೆಲವೊಮ್ಮೆ ಇವು ನಿಜವಿರಬಹುದೇ ಎಂದು ಅನುಮಾನ ಮೂಡಿಸುವಂಥ ಬೆಳವಣಿಗೆಗಳು ಆಗುತ್ತಿರುತ್ತವೆ. ಅತ್ತ ಭಾರತ ತಂಡಕ್ಕೆ ಆಯ್ಕೆಯಾದರೂ ಅವಕಾಶ ಸಿಗದೆ, ಇತ್ತ ಕರ್ನಾಟಕ ಕ್ರಿಕೆಟ್​ಗೂ ಸೇವೆ ಸಲ್ಲಿಸಲು ಲಭ್ಯರಾಗದೆ ಅತಂತ್ರವಾಗಿ ನಿಂತಿರುವ ದುಃಸ್ಥಿತಿ ಕನ್ನಡಿಗರದ್ದಾಗಿದೆ.

ಕೆಎಲ್ ರಾಹುಲ್

ಟೆಸ್ಟ್ ತಂಡದಲ್ಲಿ ಆರಂಭಿಕನಾಗಿ ಮನ್ನಣೆ ಸಿಕ್ಕರೂ, ಸೀಮಿತ ಓವರ್ ಕ್ರಿಕೆಟ್ ತಂಡದಲ್ಲಿ ಅವಕಾಶದ ಕೊರತೆ ಕಾಡುತ್ತಿದೆ. ಹಿಂದೆ ಕೆಲಬಾರಿ ಮಧ್ಯಮ ಕ್ರಮಾಂಕದಲ್ಲಿ ಆಡಿಸಿದ ಬಳಿಕ, ರೋಹಿತ್ ಶರ್ಮ ಮತ್ತು ಶಿಖರ್ ಧವನ್​ಗೆ ಬ್ಯಾಕ್​ಅಪ್ ಆರಂಭಿಕರನ್ನಾಗಿ ಕೆಎಲ್ ರಾಹುಲ್​ರನ್ನು ತಂಡದಲ್ಲಿ ಕಾಯ್ದಿರಿಸಲಾಗಿದೆ ಎಂದು ಟೀಮ್ ಮ್ಯಾನೇಜ್​ವೆುಂಟ್ ವಿವರಣೆ ನೀಡಿತ್ತು. ಆದರೆ ಧವನ್ ಸತತ ವೈಫಲ್ಯ ಕಾಣುತ್ತಿದ್ದರೂ, ಏಕದಿನ-ಟಿ20 ತಂಡದಲ್ಲಿ ಅವರಿಗೆ ಆಡುವ ಅವಕಾಶವೇ ಸಿಗುತ್ತಿಲ್ಲ. ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಈ ಬಗ್ಗೆ ಟೀಮ್ ಮ್ಯಾನೇಜ್​ವೆುಂಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಮಿಂಚುತ್ತಿದ್ದರೂ, ಕಳೆದ ಎರಡೂವರೆ ವರ್ಷಗಳಲ್ಲಿ ರಾಹುಲ್ ಆಡಿರುವುದು 13 ಏಕದಿನ ಮತ್ತು 19 ಟಿ20 ಪಂದ್ಯ ಮಾತ್ರ.

ಮಯಾಂಕ್ ಅಗರ್ವಾಲ್

ಕಳೆದ 2 ವರ್ಷದಿಂದ ದೇಶೀಯ ಕ್ರಿಕೆಟ್​ನಲ್ಲಿ ರನ್ ಪ್ರವಾಹವನ್ನೇ ಹರಿಸಿದರೂ, ರಾಷ್ಟ್ರೀಯ ತಂಡದ ಪರ ಆಡುವ ಅವಕಾಶವೇ ಲಭಿಸಿಲ್ಲ. ಭಾರತ ಎ ತಂಡದ ಇಂಗ್ಲೆಂಡ್ ಪ್ರವಾಸದಲ್ಲಿ ಮಯಾಂಕ್ ಗಮನಾರ್ಹ ನಿರ್ವಹಣೆಯನ್ನೇ ತೋರಿದ್ದರೂ, ಆಯ್ಕೆಗಾರರ ಕಣ್ಣಿಗೆ ಬಿದ್ದಿದ್ದು ಮುಂಬೈ ಕಿರಿಯ ಬ್ಯಾಟ್ಸ್​ಮನ್ ಪೃಥ್ವಿ ಷಾ ಆಟ ಮಾತ್ರ. ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಗೆ ಕೊನೆಗೂ ಕಾಟಾಚಾರಕ್ಕೆ ಆಯ್ಕೆಯಾದರೂ ಆಡುವ ಅವಕಾಶವೇ ಲಭಿಸದೆ ತಂಡದಿಂದ ಹೊರಬಿದ್ದಿದ್ದಾರೆ.

ಕರುಣ್ ನಾಯರ್

ಇಂಗ್ಲೆಂಡ್ ಬೌಲರ್​ಗಳನ್ನು ಬೆಂಡೆತ್ತಿದ ಕನ್ನಡಿಗ ಕರುಣ್ ನಾಯರ್ ತ್ರಿಶತಕದ ಸಾಧನೆ ಟೀಮ್ ಇಂಡಿಯಾಗೆ ನೆನಪಾಗು ವುದೇ ಇಲ್ಲ. ಕರುಣ್ ಕಳೆದ ಒಂದೂವರೆ ವರ್ಷದಿಂದ ಯಾವುದೇ ಟೆಸ್ಟ್ ಆಡಿಲ್ಲ. ಕಳೆದ ಇಂಗ್ಲೆಂಡ್ ಪ್ರವಾಸದ 5 ಟೆಸ್ಟ್ ಸರಣಿಗೆ ಪೂರ್ತಿ ತಂಡದಲ್ಲಿದ್ದರೂ, ಆಡುವ ಅವಕಾಶ ಸಿಗಲಿಲ್ಲ. ಪ್ರವಾಸದ ನಡುವೆ ತಂಡ ಸೇರಿದ ಹನುಮ ವಿಹಾರಿ ಅವಕಾಶ ಪಡೆದರೆ, ಸರಣಿಯ ಆರಂಭದಿಂದಲೂ ತಂಡದಲ್ಲಿದ್ದ ಕರುಣ್ ಕಾಣಲೇ ಇಲ್ಲ. ಒಂದು ತಿಂಗಳು ಪೂರ್ತಿ ಬೆಂಚ್ ಕಾಯಿಸಿದ್ದರಿಂದ ಸಹಜವಾಗಿಯೇ ದೇಶೀಯ ಕ್ರಿಕೆಟ್​ನಲ್ಲೂ ಅವರ ಫಾಮ್ರ್ ಕುಸಿತಕ್ಕೊಳಗಾಗುವಂತಾಯಿತು. ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಯಾವುದೇ ಪ್ರಥಮ ದರ್ಜೆ ಪಂದ್ಯ ಆಡದೆಯೂ ರೋಹಿತ್ ಶರ್ಮ ಟೆಸ್ಟ್ ತಂಡ ಸೇರಿರುವುದು ಕನ್ನಡಿಗರ ತುಳಿತಕ್ಕೆ ಪುರಾವೆ.

ಮನೀಷ್ ಪಾಂಡೆ

ಸೀಮಿತ ಓವರ್ ತಂಡದಲ್ಲಿ ಅತ್ಯಧಿಕ ತುಳಿತಕ್ಕೊಳಗಾಗಿರುವ ಆಟಗಾರ ಮನೀಷ್ ಪಾಂಡೆ. ವಿಶ್ವಕಪ್​ಗೆ ಮಧ್ಯಮ ಕ್ರಮಾಂಕವನ್ನು ಬಲಪಡಿಸುವ ಕೆಲಸವನ್ನು ಟೀಮ್ ಇಂಡಿಯಾ ಮಾಡುತ್ತಿದೆ. ಆದರೆ ಮನೀಷ್​ಗೆ ಮಾತ್ರ ಈ ನಿಟ್ಟಿನಲ್ಲಿ ಸಾಮರ್ಥ್ಯ ನಿರೂಪಿಸಲು ಅವಕಾಶವೇ ಲಭಿಸುತ್ತಿಲ್ಲ. ಇತ್ತೀಚೆಗಷ್ಟೇ ಮಧ್ಯಮ ಕ್ರಮಾಂಕದ ರೇಸ್​ಗೆ ಬಂದ ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ರಿಷಭ್ ಪಂತ್​ಗೆ ಅವಕಾಶ ನೀಡಲಾಗುತ್ತಿದೆ. ಬದಲಿ ಫೀಲ್ಡರ್ ಆಗಿ ಮನೀಷ್​ರ ಚುರುಕಿನ ಫೀಲ್ಡಿಂಗ್​ನಿಂದ ಆಗಾಗ ಲಾಭವೆತ್ತುವ ಭಾರತ ತಂಡ, ಮಧ್ಯಮ ಕ್ರಮಾಂಕದಲ್ಲಿ ಬೆರಳೆಣಿಕೆಯಷ್ಟೂ ಅವಕಾಶ ನೀಡುತ್ತಿಲ್ಲ. ಈ ವರ್ಷದ ಆರಂಭದಿಂದ ತಂಡದಲ್ಲಿದ್ದರೂ, ಮನೀಷ್ ಆಡಿರುವುದು ಏಕೈಕ ಏಕದಿನ ಪಂದ್ಯ. ಅದು ಕಳೆದ ಏಷ್ಯಾಕಪ್​ನಲ್ಲಿ ಅಫ್ಘಾನಿಸ್ತಾನ ವಿರುದ್ಧ. ಅದರಲ್ಲಿ ಕೇವಲ 8 ರನ್​ಗೆ ಔಟಾಗಿದ್ದ ವೈಫಲ್ಯಕ್ಕಾಗಿ ನಂತರ ಅವಕಾಶವೇ ಲಭಿಸಿಲ್ಲ. ಆದರೆ ಇದೇ ಸಮಯದಲ್ಲಿ ಇತರ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಸತತ ವೈಫಲ್ಯದ ನಡುವೆಯೂ ಅವಕಾಶ ಪಡೆದಿದ್ದಾರೆ.