ಅರ್ಜುನ ಪ್ರಶಸ್ತಿಗೆ ನಾಲ್ವರು ಕ್ರಿಕೆಟಿಗರ ಹೆಸರನ್ನು ಶಿಫಾರಸು ಮಾಡಿದ ಬಿಸಿಸಿಐ

ನವದೆಹಲಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(BCCI) ಶನಿವಾರ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಆಟಗಾರರಿಗೆ ಕೊಡಲಾಗುವ 2019ರ ಅರ್ಜುನ ಪ್ರಶಸ್ತಿಗೆ ಟೀಂ ಇಂಡಿಯಾದ ಕ್ರಿಕೆಟಿಗರಾದ ಜಸ್ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ, ರವೀಂದ್ರ ಜಡೇಜಾ ಮತ್ತು ಪೂನಂ ಯಾದವ್‌ ಅವರ ಹೆಸರನ್ನು ಶಿಫಾರಸು ಮಾಡಿದೆ.

ಕ್ರಿಕೆಟ್‌ ಆಪರೇಷನ್ಸ್‌ನ ಜನರಲ್‌ ಮ್ಯಾನೇಜರ್‌ ಸಬಾ ಕರೀಮ್‌ ಅವರ ಸಮ್ಮುಖದಲ್ಲಿ ಸುಪ್ರೀಂಕೋರ್ಟ್​ ನೇಮಕ ಮಾಡಿರುವ ಆಡಳಿತ ಸಮಿತಿ (CoA)ಯನ್ನು ಭೇಟಿ ಮಾಡಿ ಈ ವಿಚಾರದ ಕುರಿತು ಚರ್ಚಿಸಿದೆ. ಕರೀಮ್‌ ಅವರು ನಾಲ್ವರು ಕ್ರಿಕೆಟಿಗರ ಹೆಸರುಗಳನ್ನು ಶಿಫಾರಸು ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬುಮ್ರಾ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು ಮುಂಬರುವ ವಿಶ್ವಕಪ್‌ನಲ್ಲಿ ಭಾರತದ ತಂಡದ ಪ್ರಮುಖ ಬೌಲರ್‌ ಆಗಿ ತಂಡವನ್ನು ಮುನ್ನಡೆಸಲಿದ್ದಾರೆ. ಇದೀಗ ಬುಮ್ರಾ ಸದ್ಯ ಐಸಿಸಿ ಏಕದಿನ ಬೌಲಿಂಗ್‌ ರ್ಯಾಂಕಿಂಗ್‌ನಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿದ್ದಾರೆ.

ಇತ್ತೀಚೆಗೆ ಶಮಿ ಕೂಡ ಭಾರತ ತಂಡದಲ್ಲಿ ಅತ್ಯುತ್ತಮ ಆಟಗಾರರಾಗಿ ಗುರುತಿಸಿಕೊಂಡಿದ್ದು, ಟೆಸ್ಟ್‌ ಮಾದರಿ ಪಂದ್ಯಗಳಲ್ಲಷ್ಟೇ ಸ್ಥಾನ ಪಡೆಯುತ್ತಿದ್ದ ಅವರು ಇದೀಗ ಭಾರತೀಯ ಸೀಮಿತ-ಓವರ್‌ಗಳ ಪಂದ್ಯಗಳಲ್ಲೂ ಗಮನಾರ್ಹ ಸಾಧನೆಯನ್ನು ಮಾಡುತ್ತಿದ್ದಾರೆ.

ಇತ್ತೀಚಿನವರೆಗೂ ಟೀಂ ಇಂಡಿಯಾದ ಟೆಸ್ಟ್ ಕ್ರಿಕೆಟ್‌ನ ಭಾಗವಾಗಿದ್ದ ಆಲ್‌ರೌಂಡರ್‌ ಆಟಗಾರ ರವೀಂದ್ರ ಜಡೇಜಾ ಕೂಡ ಇದೀಗ ಸೀಮಿತ ಓವರ್ ಪಂದ್ಯಗಳಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದು, ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ 15 ಸದಸ್ಯರ ತಂಡದಲ್ಲಿ ಮೂರನೇ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದಾರೆ. ಇವರ ಹೆಸರನ್ನು ಕೂಡ ಬಿಸಿಸಿಐ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ಇದಲ್ಲದೆ ಭಾರತ ಕ್ರಿಕೆಟ್‌ ತಂಡದ ಮಹಿಳಾ ಆಟಾಗರ್ತಿಯಾದ ಪೂನಂ ಯಾದವ್ ಅವರ ಹೆಸರನ್ನು ಕೂಡ ಆಯ್ಕೆ ಮಾಡಲಾಗಿದೆ.

ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಅರ್ಜುನ ಪ್ರಶಸ್ತಿಯನ್ನು 1961 ರಿಂದ ನೀಡಲಾಗುತ್ತಿದೆ. ಪ್ರಶಸ್ತಿಯು 5 ಲಕ್ಷ ನಗದು, ಅರ್ಜುನನ ಕಂಚಿನ ಪ್ರತಿಮೆಯನ್ನು ಒಳಗೊಂಡಿರುತ್ತದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *