ಕ್ರಿಕೆಟ್ ಮಂಡಳಿಗೆ ಅ.22ಕ್ಕೆ ಚುನಾವಣೆ: ಬಿಸಿಸಿಐ, ರಾಜ್ಯ ಕ್ರಿಕೆಟ್ ಸಂಸ್ಥೆಗಳ ಅಧಿಕಾರಿಗಳಿಗೆ ಅಚ್ಚರಿ

ನವದೆಹಲಿ: ಹೊಸ ಸಂವಿಧಾನದ ಅಡಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆಗೆ ಅಕ್ಟೋಬರ್ 22 ರಂದು ಚುನಾವಣೆ ನಡೆಯಲಿದೆ. ಅಮಿಕಸ್ ಕ್ಯೂರಿ ಪಿಎಸ್ ನರಸಿಂಹ ಜತೆಗಿನ ಸಭೆಯಲ್ಲಿ ಬಿಸಿಸಿಐ ಅಡಿಯಲ್ಲಿ ಬರುವ ಹೆಚ್ಚಿನ ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಲೋಧಾ ಸಮಿತಿಯ ಶಿಫಾರಸುಗಳಿಗೆ ಒಪ್ಪಿಗೆ ನೀಡಿದ್ದ ಕಾರಣ, ಆಡಳಿತಾಧಿಕಾರಿ ಸಮಿತಿ (ಸಿಒಎ) ಚುನಾವಣೆಯ ದಿನಾಂಕವನ್ನು ಪ್ರಕಟಿಸಿದೆ.

ಮಂಗಳವಾರ ನವದೆಹಲಿಯಲ್ಲಿ ಸಭೆ ಸೇರಿದ್ದ ವಿನೋದ್ ರಾಯ್, ಲೆಫ್ಟಿನೆಂಟ್ ಜನರಲ್ ರವಿ ಥೋಡ್ಗೆ ಹಾಗೂ ಡಯಾನಾ ಎಡುಲ್ಜಿ ಇದ್ದ ಸಿಒಎ, ಸೆಪ್ಟೆಂಬರ್ 14ರ ಒಳಗಾಗಿ ಆಯಾ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಚುನಾವಣೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕು ಎಂದು ಸೂಚಿಸಿದೆ. ಅದರೊಂದಿಗೆ ಸೆಪ್ಟೆಂಬರ್ 23ರ ಒಳಗಾಗಿ ಬಿಸಿಸಿಐನಲ್ಲಿ ಆಯಾ ರಾಜ್ಯ ಸಂಸ್ಥೆಗಳ ಪದಾಧಿಕಾರಿಗಳನ್ನು ಸೂಚಿಸುವಂತೆ ಹೇಳಲಾಗಿದೆ.

ಚುನಾವಣಾ ಅಧಿಕಾರಿಯನ್ನು ಸ್ವತಃ ಬಿಸಿಸಿಐ ನೇಮಿಸಲಿದೆ. ಚುನಾವಣೆ ನೀತಿಸಂಹಿತೆಯನ್ನು ಬಿಸಿಸಿಐ ಜತೆ ಸಂರ್ಪಸಿ ಸಿದ್ಧ ಮಾಡಲಾಗುತ್ತದೆ. ಜೂನ್ 30ರಂದು ಇದರ ವಿವರಗಳು ಬಹಿರಂಗವಾಗಲಿದೆ ಎಂದು ಸಿಒಎ ತಿಳಿಸಿದೆ.

ಭಾರತೀಯ ಕ್ರಿಕೆಟ್​ನ ಆಡಳಿತವನ್ನು ಶೀಘ್ರವಾಗಿ ಕೋರ್ಟ್, ವಕೀಲರು, ಆಡಳಿತಾಧಿಕಾರಿಗಳ ಸಮಿತಿಯಿಂದ ಆಯಾ ಸಂಘಟಕರಿಗೆ ಹಸ್ತಾಂತರಿಸಬೇಕು ಎಂದು ಅಮಿಕಸ್ ಕ್ಯೂರಿ ಕಳೆದ ವಾರವಷ್ಟೇ ಅಭಿಪ್ರಾಯಪಟ್ಟಿದ್ದರು. ಪ್ರಸ್ತುತ ಭಾರತೀಯ ಕ್ರಿಕೆಟ್​ನ ಸಂಪೂರ್ಣ ಆಡಳಿತವನ್ನು ಸುಪ್ರೀಂ ಕೋರ್ಟ್ ನೇತೃತ್ವದ ಆಡಳಿತಾಧಿಕಾರಿಗಳ ಸಮಿತಿ ನೋಡಿಕೊಳ್ಳುತ್ತಿದೆ. ಅದರ ಬೆನ್ನಲ್ಲಿಯೇ ಸಿಒಎ ಚುನಾವಣಾ ದಿನಾಂಕವನ್ನು ಪ್ರಕಟಿಸಿದೆ.

2017ರ ಜನವರಿಯಲ್ಲಿ ಲೋಧಾ ಶಿಫಾರಸಿನ ಅನ್ವಯ ಚುನಾವಣೆ ನಡೆಯುವವರೆಗೂ ಬಿಸಿಸಿಐನ ಆಡಳಿತವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಸಿಒಎಗೆ ನೀಡಿತ್ತು. ಆರಂಭದಲ್ಲಿ ಸಿಒಎ ಆಡಳಿತ, ಲೋಧಾ ಶಿಫಾರಸುಗಳಿಗೂ ಬಿಸಿಸಿಐನ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದರೂ, ಹಂತ ಹಂತವಾಗಿ ಇದಕ್ಕೆ ಒಪ್ಪಿಗೆ ನೀಡಿದ್ದರು. ಇತ್ತೀಚಿನ ದಿನದಲ್ಲಿ ಅಪೆಕ್ಸ್ ಕೌನ್ಸಿಲ್ ವಿಚಾರವಾಗಿ ಸಿಒಎ ಹಾಗೂ ಬಿಸಿಸಿಐ ನಡುವೆ ದೊಡ್ಡ ಭಿನ್ನಾಭಿಪ್ರಾಯ ಎದುರಾಗಿತ್ತು. ಬಿಸಿಸಿಐನ ಬಲಿಷ್ಠ ಕಾರ್ಯಕಾರಿ ಸಮಿತಿಯ ಬದಲಾಗಿ ಸಣ್ಣ ಪ್ರಮಾಣದ ಅಪೆಕ್ಸ್ ಕೌನ್ಸಿಲ್ ನೇಮಕಕ್ಕೆ ಬಿಸಿಸಿಐನಿಂದ ವಿರೋಧ ವ್ಯಕ್ತವಾಗಿತ್ತು. ಆದರೆ, ಅಮಿಕಸ್ ಕ್ಯೂರಿ ನರಸಿಂಹ, 9 ಸದಸ್ಯರ ಅಪೆಕ್ಸ್ ಕೌನ್ಸಿಲ್ ಕಡ್ಡಾಯ ಎಂದು ಎಲ್ಲೂ ಲೋಧಾ ಶಿಫಾರಸಿನಲ್ಲಿ ಹೇಳಿಲ್ಲ. ಹಾಗಾಗಿ 19 ಸದಸ್ಯರ ಅಪೆಕ್ಸ್ ಕೌನ್ಸಿಲ್​ಅನ್ನು ನೇಮಿಸಬಹುದು ಎಂದಿದ್ದರು. ಅದರೊಂದಿಗೆ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಬಿಸಿಸಿಐನಲ್ಲಿ ಒಬ್ಬ ಅಧಿಕಾರಿ ಒಟ್ಟಾರೆಯಾಗಿ 18 ವರ್ಷ ಅಧಿಕಾರ ಅನುಭವಿಸಬಹುದು ಎಂದು ಸ್ಪಷ್ಟನೆ ನೀಡಿದ್ದರು.

ಸುಪ್ರೀಂ ಕೋರ್ಟ್​ನಿಂದ ನಾನು ನೇಮಿಸಲ್ಪಟ್ಟಿದ್ದೆ. ನನ್ನ ಪಾತ್ರ ನೈಟ್ ವಾಚ್​ವುನ್ ರೀತಿಯಲ್ಲಿ ಇರುತ್ತದೆ ಎಂದು ಕೋರ್ಟ್ ಹೇಳಿತ್ತು. ಆದರೆ, ನೈಟ್ ವಾಚ್​ವುನ್ ಆಗಿ ಬಹಳ ದೀರ್ಘ ಕಾಲ ಕ್ರೀಸ್​ನಲ್ಲಿ ಇದ್ದೆ ಎಂದೆನಿಸಿದೆ. ನಮ್ಮ ಕೆಲಸದ ಬಗ್ಗೆ ತೃಪ್ತಿ ಇದೆ. ಲೋಧಾ ಶಿಫಾರಸುಗಳನ್ನು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಒಪ್ಪಬೇಕು. ಆ ಕೆಲಸವನ್ನು ನಮಗೆ ನೀಡಲಾಗಿತ್ತು. ರಾಜ್ಯ ಕ್ರಿಕೆಟ್ ಸಂಸ್ಥೆಗಳು ಹಾಗೂ ನಮ್ಮ ನಡುವೆ ಭಿನ್ನಾಭಿಪ್ರಾಯ ಇದ್ದ ಕಾರಣ ಅಮಿಕಸ್ ಕ್ಯೂರಿ ನೇಮಿಸಲಾಗಿತ್ತು. ಅವರು ಯಶಸ್ವಿ ಮಧ್ಯಸ್ಥಿಕೆ ಮಾಡಿದ್ದಾರೆ. ಈಗ ಅಧಿಕಾರವನ್ನು ಪದಾಧಿಕಾರಿಗಳಿಗೆ ನೀಡಲಿದ್ದೇವೆ.

| ವಿನೋದ್ ರಾಯ್ ಸಿಒಎ ಮುಖ್ಯಸ್ಥ

ಚುನಾವಣೆ ಹೇರಿಕೆ ಸರಿಯಲ್ಲ

ದಿಢೀರ್ ಆಗಿ ಚುನಾವಣೆ ದಿನಾಂಕ ಪ್ರಕಟವಾದ ಬಗ್ಗೆ ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಅಚ್ಚರಿ ವ್ಯಕ್ತಪಡಿಸಿವೆ. ಡೆಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆಗೆ (ಡಿಡಿಸಿಎ) ಕಳೆದ ವರ್ಷವಷ್ಟೇ ಚುನಾವಣೆ ನಡೆದಿದೆ. ಈಗ ಹೊಸ ಚುನಾವಣೆ ಘೋಷಣೆ ಆಗಿರುವ ಕಾರಣ, ಅಲ್ಲಿನ ಅಧಿಕಾರಿಗಳ ಅವಧಿ ನಿಗದಿಗಿಂತ ಮುಂಚಿತವಾಗಿ ಕೊನೆಗೊಳ್ಳಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾವುದಾದರೂ ಕ್ರಿಕೆಟ್ ಸಂಸ್ಥೆಗೆ ಚುನಾವಣೆ ನಡೆಯುವ ಸನಿಹದಲ್ಲಿದೆ ಎಂದರೆ ಇದರಿಂದ ತೊಂದರೆ ಇಲ್ಲ. ಆದರೆ, ಚುನಾವಣೆ ಅಗತ್ಯವಿಲ್ಲದ ಕ್ರಿಕೆಟ್ ಸಂಸ್ಥೆಗಳ ಮೇಲೆ ಚುನಾವಣೆ ಹೇರುವುದು ಸರಿಯಲ್ಲ. ವಿನೋದ್ ರಾಯ್ ತಾವು ಕಾನೂನಿಗಿಂತ ಮೇಲೆ ಎಂದು ತಿಳಿದುಕೊಂಡಿದ್ದಾರೆ. ಬಿಸಿಸಿಐ ಚುನಾವಣೆ ನಡೆಯಲಿ, ಆದರೆ, ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೂ ಚುನಾವಣೆ ನಡೆಯಬೇಕು ಎಂದು ಹೇಳುವ ಅಧಿಕಾರ ಅವರಿಗಿಲ್ಲ’ ಎಂದು ಹೇಳಿದ್ದಾರೆ.