ನವದೆಹಲಿ: ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಕಳೆದ ಆಸ್ಟ್ರೆಲಿಯಾ ಪ್ರವಾಸದ ವೇಳೆ ಭಾರತ ಟೆಸ್ಟ್ ತಂಡದ ಉಪನಾಯಕನಾಗಿದ್ದರು ಮತ್ತು ನಾಯಕ ರೋಹಿತ್ ಶರ್ಮ ಗೈರಿನಲ್ಲಿ 2 ಪಂದ್ಯಗಳಲ್ಲಿ ಹಂಗಾಮಿ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ ಐಪಿಎಲ್ ನಂತರದ ಇಂಗ್ಲೆಂಡ್ ಪ್ರವಾಸದ ವೇಳೆ ಬುಮ್ರಾಗೆ ಲೀಡರ್ಶಿಪ್ ಪಾತ್ರ ನೀಡದಿರಲು ಬಿಸಿಸಿಐ ನಿರ್ಧರಿಸಿದೆ. ಇದರಿಂದ ಅವರಿಗೆ ನಾಯಕತ್ವ ಅಥವಾ ಉಪನಾಯಕನ ಪಟ್ಟ ನೀಡಲಾಗುವುದಿಲ್ಲ ಎಂದು ವರದಿಯಾಗಿದೆ.

ಜೂನ್-ಜುಲೈನಲ್ಲಿ ಇಂಗ್ಲೆಂಡ್ನಲ್ಲಿ ನಡೆಯಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬುಮ್ರಾ ಎಲ್ಲ ಪಂದ್ಯಗಳಲ್ಲಿ ಆಡುವ ಬಗ್ಗೆ ಅನುಮಾನವಿದೆ. ಆಸೀಸ್ನಲ್ಲಿ ಎಲ್ಲ 5 ಪಂದ್ಯಗಳಲ್ಲಿ ಆಡಿ ಕೊನೇ ಪಂದ್ಯದ ವೇಳೆ ಗಾಯಗೊಂಡಿದ್ದ ಬುಮ್ರಾ ಮೇಲಿನ ಕಾರ್ಯದೊತ್ತಡವನ್ನು ಇಂಗ್ಲೆಂಡ್ನಲ್ಲಿ ತಗ್ಗಿಸಲು ಬಿಸಿಸಿಐ ಯೋಜನೆ ರೂಪಿಸಿದೆ. ಇದರನ್ವಯ ಬುಮ್ರಾ ಇಂಗ್ಲೆಂಡ್ನಲ್ಲಿ ಪ್ರಮುಖ 3 ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಆಡಬಹುದು. ಹೀಗಾಗಿ ಅವರಿಗೆ ಈ ಬಾರಿ ಲೀಡರ್ಶಿಪ್ ಪಾತ್ರ ನೀಡಲು ಬಿಸಿಸಿಐ ನಿರಾಕರಿಸಿದೆ.
ಪ್ರವಾಸದ ಎಲ್ಲ 5 ಪಂದ್ಯಗಳಲ್ಲಿ ಆಡಬಲ್ಲ ಆಟಗಾರನಿಗೆ ಉಪನಾಯಕನ ಪಾತ್ರ ನೀಡಲು ಬಿಸಿಸಿಐ ಬಯಸಿದೆ. ಪ್ರತಿ ಪಂದ್ಯಕ್ಕೆ ಭಿನ್ನ ಉಪನಾಯಕನನ್ನು ನೇಮಿಸಲು ಬಿಸಿಸಿಐ ಸಿದ್ಧವಿಲ್ಲ. ನಾಯಕ ಮತ್ತು ಉಪನಾಯಕ ಎಲ್ಲ 5 ಪಂದ್ಯಗಳಲ್ಲೂ ಆಡಬೇಕು ಎಂಬುದು ಬಿಸಿಸಿಐ ಬಯಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇಂಗ್ಲೆಂಡ್ ಪ್ರವಾಸದ ಮೊದಲ ಟೆಸ್ಟ್ ಜೂನ್ 20ರಿಂದ ನಡೆಯಲಿದೆ.
ಶುಭಮಾನ್ಗೆ ಶುಭ ಸುದ್ದಿ
ಭವಿಷ್ಯದಲ್ಲಿ ಟೆಸ್ಟ್ ತಂಡದ ನಾಯಕನೂ ಆಗಬಲ್ಲ ಯುವ ಆಟಗಾರನೊಬ್ಬನಿಗೆ ಉಪನಾಯಕನ ಸ್ಥಾನವನ್ನು ನೀಡಲು ಬಿಸಿಸಿಐ ಬಯಸಿದೆ. ಇದರನ್ವಯ ಹಾಲಿ ಟೆಸ್ಟ್ ತಂಡದಲ್ಲಿ 25 ವರ್ಷದ ಶುಭಮಾನ್ ಗಿಲ್ ಮತ್ತು 27 ವರ್ಷದ ರಿಷಭ್ ಪಂತ್ ಉಪನಾಯಕನ ಪಟ್ಟದ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. 30 ವರ್ಷ ಮೇಲ್ಪಟ್ಟ ಕೊಹ್ಲಿ, ಜಡೇಜಾ, ಕೆಎಲ್ ರಾಹುಲ್ ಮತ್ತು 23 ವರ್ಷದ ಯಶಸ್ವಿ ಜೈಸ್ವಾಲ್ ಕಡೆಗೂ ಬಿಸಿಸಿಐ ಒಲವು ತೋರಿಲ್ಲ. ಏಕದಿನ ತಂಡದಲ್ಲಿ ಈಗಾಗಲೆ ಉಪನಾಯಕನಾಗಿ ಬಡ್ತಿ ಪಡೆದಿರುವ ಗಿಲ್ಗೆ ಟೆಸ್ಟ್ ತಂಡದಲ್ಲೂ ಇದೇ ಪಾತ್ರ ನೀಡುವ ಬಗ್ಗೆ ಅಜಿತ್ ಅಗರ್ಕರ್ ಸಾರಥ್ಯದ ಆಯ್ಕೆ ಸಮಿತಿ ಹೆಚ್ಚಿನ ಆಸಕ್ತಿ ತೋರಿದೆ ಎನ್ನಲಾಗಿದೆ. ಗುಜರಾತ್ ಟೈಟಾನ್ಸ್ ನಾಯಕರಾಗಿ ಗಿಲ್ ಈ ಬಾರಿ ಗಮನಾರ್ಹ ನಿರ್ವಹಣೆ ತೋರಿರುವುದು ಇದಕ್ಕೆ ಕಾರಣ.
ಕೇರಳ ಕ್ರಿಕೆಟ್ ಸಂಸ್ಥೆಯಿಂದ ಎಸ್. ಶ್ರೀಶಾಂತ್ಗೆ 3 ವರ್ಷ ನಿಷೇಧ; ಹೀಗಿದೆ ಕಾರಣ…