ಊಟದ ಮೆನುವಿನಿಂದ ಗೋಮಾಂಸ ತೆಗೆಯುವಂತೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಬಿಸಿಸಿಐ ಮನವಿ

ನವದೆಹಲಿ: ಮುಂಬರುವ ಸವಾಲಿನ ಆಸ್ಟ್ರೇಲಿಯಾ ಪ್ರವಾಸಕ್ಕೆ ಪೂರ್ವಭಾವಿಯಾಗಿ ಮೈದಾನದ ನಿರ್ವಹಣೆ ಜತೆಗೆ ಆಹಾರ ಕ್ರಮದ ಮೇಲೆಯೂ ಭಾರತ ತಂಡ ಗಮನ ಹರಿಸಿದೆ.

ಪ್ರವಾಸದ ವೇಳೆ ಭಾರತ ತಂಡದ ಆಹಾರ ಪಟ್ಟಿಯಲ್ಲಿ ಸಸ್ಯಾಹಾರಕ್ಕೆ ಹೆಚ್ಚಿನ ಒತ್ತು ನೀಡಿ ಎಂದು ಆತಿಥೇಯ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ (ಸಿಎ) ಬಿಸಿಸಿಐ ಮನವಿ ಮಾಡಿಕೊಂಡಿದೆ. ಅಲ್ಲದೆ ಭಾರತ ತಂಡದ ಆಹಾರಗಳ ಪಟ್ಟಿಯಲ್ಲಿ ಗೋಮಾಂಸವನ್ನು ಸೇರಿಸದಿರುವಂತೆಯೂ ಸೂಚಿಸಿದೆ.

ಕಳೆದ ಇಂಗ್ಲೆಂಡ್ ಪ್ರವಾಸದ ವೇಳೆ ಬಿಸಿಸಿಐ ಟ್ವೀಟಿಸಿದ್ದ ಟೀಮ್ ಇಂಡಿಯಾದ ಲಂಚ್ ಮೆನುನಲ್ಲಿ ಗೋಮಾಂಸದ ಖಾದ್ಯ ಇದ್ದುದು ಭಾರೀ ಟೀಕೆಗೆ ಗುರಿಯಾಗಿತ್ತು. ಇನ್ನು ಭಾರತ ತಂಡದ ಕೆಲ ಸಸ್ಯಾಹಾರಿ ಆಟಗಾರರು ಹಿಂದಿನ ಆಸೀಸ್ ಪ್ರವಾಸದ ವೇಳೆ ಪರದಾಡಿದ ಹಿನ್ನೆಲೆಯಲ್ಲೂ ಈ ಬಾರಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ. ಮೆನುನಲ್ಲಿ ಫಲಾಹಾರ ಮತ್ತು ಭಾರತೀಯ ಆಹಾರಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆಯೂ ಬಿಸಿಸಿಐ, ಸಿಎಯನ್ನು ಕೇಳಿಕೊಂಡಿದೆ.

ಆಸ್ಟ್ರೇಲಿಯಾದಲ್ಲಿನ ಭಾರತೀಯ ರೆಸ್ಟೋರೆಂಟ್ ಒಂದರಿಂದ ತಂಡಕ್ಕೆ ಆಹಾರದ ವ್ಯವಸ್ಥೆ ಮಾಡಿಕೊಡಲು ಕೇಳಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ನ.21ರಿಂದ ಜ.18ರವರೆಗೆ ನಡೆಯಲಿರುವ ಆಸೀಸ್ ಪ್ರವಾಸದಲ್ಲಿ ಭಾರತ ತಂಡ 3 ಟಿ20, 4 ಟೆಸ್ಟ್, 3 ಏಕದಿನ ಪಂದ್ಯಗಳನ್ನು ಆಡಲಿದೆ. (ಏಜೆನ್ಸೀಸ್)