ವಿಶ್ವ ಮಹಾಸಮರಕ್ಕೆ ಟೀಮ್ ಇಂಡಿಯಾ ಪ್ರಕಟ: ಇಂಗ್ಲೆಂಡ್ ವಿಶ್ವಕಪ್​ಗೆ ಕೊಹ್ಲಿ ಸೇನಾನಿಗಳು ಇವರು

ಮುಂಬೈ: ಇಂಗ್ಲೆಂಡ್​ನಲ್ಲಿ ನಡೆಯಲಿರುವ 2019ರ ಐಸಿಸಿ ಏಕದಿನ ವಿಶ್ವಕಪ್ ಗೆ ಭಾರತ ತಂಡದ 15 ಆಟಗಾರರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.

ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಪ್ರಸಾದ್​ ನೇತೃತ್ವದಲ್ಲಿ ಮುಂಬೈನಲ್ಲಿ ನಡೆದ ಸಭೆಯಲ್ಲಿ ಆಟಗಾರರ ಆಯ್ಕೆ ಮಾಡಲಾಗಿದ್ದು, ಭಾರತ ತಂಡದ ನಾಯಕ ವಿರಾಟ್​ಕೊಹ್ಲಿ, ತಂಡದ ಮುಖ್ಯ ಕೋಚ್​ ರವಿಶಾಸ್ತ್ರಿ ಭಾಗವಹಿಸಿದ್ದರು.

2015ರಲ್ಲಿ ನಡೆದ ವಿಶ್ವಕಪ್​ನಲ್ಲಿ ಭಾಗವಹಿಸಿದ್ದ ಹಲವರು ತಂಡದಲ್ಲಿ ಸ್ಥಾನಗಳಿಸುವಲ್ಲಿ ವಿಫಲರಾಗಿದ್ದು ಹೊಸ ಪ್ರತಿಭೆಗಳಿಗೆ ಆಯ್ಕೆ ಸಮಿತಿ ಅವಕಾಶ ನೀಡಿದೆ. ಆಲ್​ರೌಂಡರ್​ ಸ್ಟುವರ್ಟ್​ ಬಿನ್ನಿ, ಅನುಭವಿ ಬ್ಯಾಟ್ಸ್​ಮೆನ್​ ಸುರೇಶ್​ರೈನಾ, ಅಜಿಂಕ್ಯಾರಹಾನೆ, ಅಂಬಾಟಿ ರಾಯ್ಡು, ಸ್ಪಿನ್ನರ್​ಗಳಾದ ಅಕ್ಷರ್​ ಪಟೇಲ್​, ಆರ್​.ಅಶ್ವಿನ್​, ಬೌಲರ್​ಗಳಾದ ಉಮೇಶ್​ ಯಾದವ್​, ಇಶಾಂತ್​ ಶರ್ಮ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

2015ರ ವಿಶ್ವಕಪ್​ನಲ್ಲಿ ಧೋನಿ ತಂಡವನ್ನು ಮುನ್ನಡೆಸಿದ್ದರು. ಈ ಭಾರಿ ತಂಡವನ್ನು ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ವಿರಾಟ್​ಕೊಹ್ಲಿ ನಾಯಕರಾಗಿ ಮುನ್ನಡೆಸಲಿದ್ದಾರೆ. 2015ರ ವಿಶ್ವಕಪ್​ನಲ್ಲಿ ವಿರಾಟ್​ಕೊಹ್ಲಿ ಉಪನಾಯಕರಾಗಿ ಅನುವವನ್ನು ಹೊಂದಿದ್ದಾರೆ.

ಅಚ್ಚರಿಯ ಸಂಗತಿಯೆಂದರೆ ಅನುಭವಿ ಆಟಗಾರರಾದ ಅಶ್ವಿನ್​, ಸುರೇಶ್​ ರೈನಾ, ಅವರನ್ನು ತಂಡದಿಂದ ಕೈ ಬಿಡಲಾಗಿದ್ದು, ಹೊಸಬರಾದ ಕನ್ನಡಿಗ ರಾಹುಲ್​, ವಿಜಯಶಂಕರ್​, ಸ್ಪಿನ್ನರ್​ಗಳಾದ ಚಹಾಲ್​, ಕುಲದೀಪ್ ​ಯಾದವ್​, ವೇಗಿಗಳ ಸ್ಥಾನದಲ್ಲಿ ಮೊಹಮ್ಮದ್​ ಶಮಿ, ಜಸ್ಪ್ರೀತ್​ ಬುಮ್ರಾ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.

ರೋಹಿತ್‌ ಶರ್ಮಾ, ಶಿಖರ್‌ ಧವನ್‌ ಆರಂಭಿಕ ಆಟಗಾರರಾಗಿ ಸ್ಥಾನ ಪಡೆದಿದ್ದು, ಮೀಸಲು ಆಟಗಾರರಾಗಿ ಆರಂಭಿಕ ಸ್ಥಾನಕ್ಕೆ ರಾಹುಲ್​ ಅವರು ಆಯ್ಕೆಗೊಂಡಿದ್ದಾರೆ. ಇನ್ನು ಇಂಗ್ಲೆಂಡ್​ನಲ್ಲಿ ಸ್ವಿಂಗ್​ ಬೌಲರ್​ಗಳಿಗೆ ಹೆಚ್ಚಿನ ಅನುಕೂಲಕರವಿದ್ದು ಜಸ್ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌, ಮೊಹಮದ್‌ ಶಮಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಪಿನ್ನರ್​ಗಳಾಗಿ ರವೀಂದ್ರ ಜಡೇಜಾ, ಚಹಾಲ್​, ಕುಲದೀಪ್​ ಯಾದವ್​ ಸ್ಥಾನ ಪಡೆದಿದ್ದು ಬದಲಿ ವಿಕೆಟ್​ ಕೀಪರ್​ ಸ್ಥಾನದಲ್ಲಿ ಅನುಭವಿ ಆಟಗಾರ ದಿನೇಶ್​ ಕಾರ್ತಿಕ್​ ಆಯ್ಕೆಗೊಂಡಿದ್ದಾರೆ.

ಮೊದಲ ಪಂದ್ಯ ಇಂಗ್ಲೆಂಡ್​ V/S ದಕ್ಷಿಣ ಆಫ್ರಿಕಾ
ವಿಶ್ವಕಪ್ ಟೂರ್ನಿ ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಭಾರತ ಜೂನ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

ಭಾರತ ತಂಡ
ವಿರಾಟ್​ ಕೊಹ್ಲಿ(ನಾಯಕ), ರೋಹಿತ್​ ಶರ್ಮ(ಉಪನಾಯಕ), ಶಿಖರ್​ ಧವನ್​, ಕೆ.ಎಲ್.​ರಾಹುಲ್​, ವಿಜಯಶಂಕರ್​, ಧೋನಿ(ವಿ.ಕೀ), ಕೇದರ್​ ಜಾದವ್​, ದಿನೇಶ್​ ಕಾರ್ತಿಕ್​, ಯಜುವೇಂದ್ರ ಚಹಾಲ್​, ಕುಲದೀಪ್​ ಯಾದವ್​, ಭುವನೇಶ್ವರ್ ​ಕುಮಾರ್​, ಜಸ್ಪ್ರೀತ್​ ಬುಮ್ರಾ, ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮದ್​ ಶಮಿ ಆಯ್ಕೆಗೊಂಡಿದ್ದಾರೆ.

https://twitter.com/BCCI/status/1117727380414427137