ಬಿ.ಸಿ.ರೋಡ್-ಪುಂಜಾಲಕಟ್ಟೆ ಹೆದ್ದಾರಿ ಕೆಲಸಕ್ಕೆ ವೇಗ

ಭರತ್ ಶೆಟ್ಟಿಗಾರ್ ಮಂಗಳೂರು

ಬಹುನಿರೀಕ್ಷಿತ ಬಿ.ಸಿ.ರೋಡ್- ಚಾರ್ಮಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ 73ರ ಬಿ.ಸಿ.ರೋಡ್ -ಪುಂಜಾಲಕಟ್ಟೆ ರಸ್ತೆ ಅಭಿವೃದ್ಧಿ ಕಾಮಗಾರಿ ಎರಡು ತಿಂಗಳಿಂದ ಚುರುಕು ಪಡೆದಿದೆ.

ಚಿಕ್ಕಮಗಳೂರು ಮತ್ತು ಧರ್ಮಸ್ಥಳಕ್ಕೆ ಮಂಗಳೂರು ಭಾಗದಿಂದ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಪ್ರತಿದಿನ ಸಹಸ್ರಾರು ವಾಹನಗಳು ಸಂಚರಿಸುತ್ತವೆ. ಆದರೆ ರಸ್ತೆ ಅಗಲ ಕಿರಿದಾಗಿರುವುದು ಮತ್ತು ಅಪಾಯಕಾರಿ ತಿರುವುಗಳಿರುವುದು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ಚತುಷ್ಪಥ-ದ್ವಿಪಥವನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ.

ಏನೇನು ಕಾಮಗಾರಿ?: ಮೊದಲ ಹಂತದಲ್ಲಿ ಬಿ.ಸಿ.ರೋಡ್‌ನಿಂದ ಪುಂಜಾಲಕಟ್ಟೆಯವರೆಗೆ 19.85 ಕಿ.ಮೀ. ರಸ್ತೆಯನ್ನು 157 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. 4 ಕಿರು ಸೇತುವೆಗಳು, 65 ಮೋರಿಗಳು ಇದರಲ್ಲಿ ಸೇರಿದೆ.

ಬಿ.ಸಿ.ರೋಡ್‌ನಿಂದ ಜಕ್ರಿಬೆಟ್ಟುವರೆಗೆ 3.85 ಕಿ.ಮೀ. ಉದ್ದಕ್ಕೆ ವಿಭಜಕ ಸಹಿತ 14 ಮೀ. ಅಗಲದ ಚತುಷ್ಪಥ ಕಾಂಕ್ರೀಟ್ ರಸ್ತೆ ಹಾಗೂ ಅಲ್ಲಿಂದ ಮುಂದಕ್ಕೆ 16 ಕಿ.ಮೀ ಪುಂಜಾಲಕಟ್ಟೆವರೆಗೆ 10 ಮೀ. ಅಗಲದ ವಿಭಜಕವಿಲ್ಲದ ದ್ವಿಪಥ ಡಾಂಬರು ರಸ್ತೆ ನಿರ್ಮಾಣವಾಗಲಿದೆ.

ಮೊದಲ ಹಂತದಲ್ಲಿ ಈ ವರ್ಷ ಮಳೆಗಾಲಕ್ಕೆ ಮುನ್ನ 8 ಕಿ.ಮೀ. ಡಾಂಬರು ರಸ್ತೆ ಸಹಿತ ಬಿ.ಸಿ.ರೋಡ್‌ನಿಂದ ಸ್ವಲ್ಪ ಮುಂದಕ್ಕೆ ಸಿಗುವ ಒಂದು ಕಿರುಸೇತುವೆ, 30-35 ಮೋರಿಗಳನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಜತೆಗೆ 4 ಕಿ.ಮೀ. ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ನೆಲ ಸಮತಟ್ಟು ಕೆಲಸವೂ ಈ ಅವಧಿಯಲ್ಲಿ ಮುಗಿಸುವ ಮೂಲಕ, ಮುಂಗಾರು ಬಳಿಕ ಕಾಂಕ್ರೀಟ್ ಅಳವಡಿಸಲು ತೀರ್ಮಾನಿಸಲಾಗಿದೆ.

ಡಾಂಬರು ರಸ್ತೆ ಕೆಲಸ ಶುರು: ಪುಂಜಾಲಕಟ್ಟೆ ಭಾಗದಿಂದ ಡಾಂಬರು ರಸ್ತೆ ನಿರ್ಮಾಣ ಆರಂಭವಾಗಿದೆ. ರಸ್ತೆ ಬದಿ ತೆರವುಗೊಳಿಸಿ ಸಮತಟ್ಟು ಮಾಡಲಾದ ಪ್ರದೇಶಗಳಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಮೋರಿಗಳ ಕಾಮಗಾರಿಯನ್ನು ಮಳೆಗಾಲದಲ್ಲಿಯೂ ಮುಂದುವರಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ 5.5 ಮೀ. ಅಗಲವಾಗಿರುವ ರಸ್ತೆ 10 ಮೀ.ಅಗಲವಾಗಲಿದ್ದು, ರಸ್ತೆಯುದ್ದಕ್ಕೂ ಇರುವ ಅಪಾಯಕಾರಿ ತಿರುವುಗಳನ್ನು ಸಂಚಾರಕ್ಕೆ ಸುಗಮವಾಗುವಂತೆ ಮಾಡಲಾಗುತ್ತದೆ. ಅದಕ್ಕಾಗಿ ವೇಗದ ಮಿತಿಯನ್ನು ನೇರ ರಸ್ತೆಯಲ್ಲಿ 55 ಕಿ.ಮೀ ಹಾಗೂ ತಿರುವು ಇರುವಲ್ಲಿ 40 ಕಿ.ಮೀ.ಗೆ ವೇಗಕ್ಕೆ ಅನುಗುಣವಾಗಿ ರಸ್ತೆ ನಿರ್ಮಾಣವಾಗಲಿದೆ.

ಎರಡನೇ ಹಂತದ ಭೂ ಸ್ವಾಧೀನ: ಬಿ.ಸಿ.ರೋಡ್‌ನಿಂದ ಚಾರ್ಮಾಡಿವರೆಗಿನ 75 ಕಿ.ಮೀ. ರಸ್ತೆ ಅಭಿವೃದ್ಧಿಯ ಪ್ರಸ್ತಾವನೆಯಲ್ಲಿ ಮೊದಲ ಹಂತದಲ್ಲಿ 19.85 ಕಿ.ಮೀ. ಉದ್ದದ ರಸ್ತೆ ಕಾಮಗಾರಿ ನಡೆಸಿದ ಬಳಿಕ ಎರಡನೇ ಹಂತದಲ್ಲಿ ಉಳಿದ 55 ಕಿ.ಮೀ. ರಸ್ತೆ ಅಭಿವೃದ್ಧಿ ಆಗಲಿದೆ. ಎರಡನೇ ಹಂತದ ಕಾಮಗಾರಿಗಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗಿದೆ. ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ಖುಷ್ಕಿ, ಸರ್ಕಾರಿ ಹಾಗೂ ಖಾಸಗಿ ಸೇರಿ ಒಟ್ಟು 9.3800 ಹೆಕ್ಟೇರ್ (93,800 ಚದರ ಮೀಟರ್) ಜಮೀನಿನ ಅಗತ್ಯವಿದೆ.

ಬಿ.ಸಿ.ರೋಡ್- ಚಾರ್ಮಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಮೊದಲ ಹಂತದ 19.85 ಕಿ.ಮೀ. ಕಾಮಗಾರಿ 2020ರ ಜೂನ್ ಒಳಗೆ ಪೂರ್ಣಗೊಳ್ಳಲಿದೆ. ಕೆಲಸಗಳು ವೇಗವಾಗಿ ನಡೆಯುತ್ತಿದ್ದು, ನಿಗದಿತ ಅವಧಿಯಲ್ಲಿ ಮುಗಿಸಲು ಉದ್ದೇಶಿಸಲಾಗಿದೆ.
|ರಮೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರಾ.ಹೆ.ಉಪವಿಭಾಗ, ಮಂಗಳೂರು

Leave a Reply

Your email address will not be published. Required fields are marked *