ಸರ್ವೀಸ್ ರಸ್ತೆಯಲ್ಲಿ ಬಸ್ ನಿರ್ಬಂಧಕ್ಕೆ ಆಕ್ರೋಶ

ಬಂಟ್ವಾಳ: ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ಖಾಸಗಿ, ಸರ್ಕಾರಿ ಬಸ್‌ಗಳ ಸಂಚಾರ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಬಿ.ಸಿ.ರೋಡ್-ಕೈಕಂಬ ಆಟೋರಿಕ್ಷಾ ಚಾಲಕರು ಸೋಮವಾರ ಇಲ್ಲಿನ ಮೇಲ್ಸೆತುವೆಯಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.

ಈ ಹಿಂದೆ ವಿವಿಧೆಡೆಯಿಂದ ಎಲ್ಲ ಬಸ್‌ಗಳು ಬಿ.ಸಿ.ರೋಡಿನ ಜಂಕ್ಷನ್‌ಗೆ ಬಂದು ತೆರಳುತ್ತಿದ್ದವು. ಜಂಕ್ಷನ್ ಪಕ್ಕದಲ್ಲಿಯೇ ಆಟೋ ರಿಕ್ಷಾ ತಂಗುದಾಣ ಇರುವುದರಿಂದ ಆಟೊ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲಕರವಾಗಿತ್ತು. ಆದರೆ, ಈಗ ದಿಢೀರನೆ ಬಸ್‌ಗಳ ಸಂಚಾರ ನಿರ್ಬಂಧಿಸಿರುವುದು ಸರಿಯಲ್ಲ. ಇದರಿಂದ ಆಟೋ ಚಾಲಕರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆಟೋ ಚಾಲಕರು ಆರೋಪಿಸಿ ಪ್ರತಿಭಟನೆ ನಡೆಸಿದರು.

ಆಟೊ ಚಾಲಕರು ಬಿ.ಸಿ.ರೋಡ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೆತುವೆಯಲ್ಲಿ ಬರುತ್ತಿದ್ದ ಬಸ್‌ಗಳನ್ನು ತಡೆದು, ಸರ್ವೀಸ್ ರಸ್ತೆಯಲ್ಲಿ ಸಂಚರಿಸುವಂತೆ ಆಗ್ರಹಿಸಿದಾಗ, ಪೊಲೀಸರು ತಡೆದರು. ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಹಾಗೂ ಬಂಟ್ವಾಳ ಕ್ರೈಂ ಎಸ್ಸೈ ಸುಧಾಕರ್ ಜಿ.ತೋನ್ಸೆ ಧಾವಿಸಿ, ಆಟೊ ಚಾಲಕರೊಂದಿಗೆ ಮಾತುಕತೆ ನಡೆಸಿದರು.

ಎಎಸ್ಪಿಗೆ ದೂರು: ಬಸ್‌ಗಳ ಸಂಚಾರ ನಿರ್ಬಂಧಿಸಿದಕ್ಕೆ ಆಟೊ ಚಾಲಕರು ಒಮ್ಮತದಿಂದ ಆಕ್ಷೇಪ ವ್ಯಕ್ತಪಡಿಸಿದಾಗ, ಬಂಟ್ವಾಳ ಎಎಸ್ಪಿ ಅವರ ನಿರ್ದೇಶನ ಮೇರೆಗೆ ಬಿ.ಸಿ.ರೋಡ್ ಒಳರಸ್ತೆಯಲ್ಲಿ ಬಸ್ ಸಂಚಾರ ನಿರ್ಬಂಧಿಸಲಾಗಿದೆ. ಈ ಬಗ್ಗೆ ಎಎಸ್ಪಿ ಅವರೊಂದಿಗೆ ಮಾತುಕತೆಗೆ ತೆರಳುವಂತೆ ಹಾಗೂ ಪ್ರತಿಭಟನೆ ಕೈಬಿಡುವಂತೆ ಎಸ್ಸೈ ಸುಧಾಕರ್ ಅವರು ಚಾಲಕರಿಗೆ ತಿಳಿಸಿದಾಗ, ಪ್ರತಿಭಟನೆ ಅರ್ಧಕ್ಕೆ ಮೊಟಕುಗೊಳಿಸಿ ದೂರಿನೊಂದಿಗೆ ಎಎಸ್ಪಿ ಕಚೇರಿಯತ್ತ ತೆರಳಿದರು.