ಬಿ.ಸಿ.ರೋಡ್- ಅಡ್ಡಹೊಳೆ ಕಾಮಗಾರಿ ಸ್ಥಗಿತ ಭೀತಿ!

– ವೇಣುವಿನೋದ್ ಕೆ.ಎಸ್ ಮಂಗಳೂರು
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್- ಅಡ್ಡಹೊಳೆ ನಡುವಿನ ‘ದೇಶದ ಅತಿ ಉದ್ದದ ಕಾಂಕ್ರೀಟ್ ಚತುಷ್ಪಥ’ ಹೆಗ್ಗಳಿಕೆಯ ರಸ್ತೆ ಕಾಮಗಾರಿ ಅರ್ಧಕ್ಕೇ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ಒಂದು ವರ್ಷದಿಂದ ನಡೆಸಲಾಗುತ್ತಿರುವ ಈ ಪ್ರಮುಖ ಹೆದ್ದಾರಿ ಭಾಗದ ಕಾಮಗಾರಿ ಸದ್ಯ ಅರ್ಧಂಬರ್ಧ ಆಗಿರುವ ಸ್ಥಿತಿಯಲ್ಲಿದ್ದು, ಇದೇ ರೀತಿಯಲ್ಲಿ ಸ್ಥಗಿತಗೊಂಡರೆ ಸ್ಥಳೀಯರಿಗೆ ಕಿರಿಕಿರಿ ಉಂಟಾಗುವುದಲ್ಲದೆ ಸುಗಮ ಸಂಚಾರಕ್ಕೂ ಅಡಚಣೆಯಾಗುವ ಸಾಧ್ಯತೆಗಳಿವೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರ ನಡುವೆ ಎದ್ದಿರುವ ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ಹೆದ್ದಾರಿ ಕಾಮಗಾರಿ ಮೊಟಕುಗೊಳ್ಳುವವರೆಗೂ ಸಾಗಿದೆ. ಸಂಸದರು ಹಾಗೂ ಸಂಬಂಧಿತ ಜನಪ್ರತಿನಿಧಿಗಳು ಮಧ್ಯಪ್ರವೇಶಿಸಿ ಬಗೆಹರಿಸದಿದ್ದರೆ ಈ ಕಾಮಗಾರಿ ಇನ್ನಷ್ಟು ವಿಳಂಬಗೊಳ್ಳುವ ಎಲ್ಲ ಸಾಧ್ಯತೆಯೂ ಇದೆ.

ಆಗಿರುವುದೇನು?: ಒಟ್ಟು 821 ಕೋಟಿ ರೂ. ವೆಚ್ಚದಲ್ಲಿ ಬಿ.ಸಿ.ರೋಡ್ ಹಾಗೂ ಅಡ್ಡಹೊಳೆ ಮಧ್ಯೆ 63 ಕಿ.ಮೀ. ಕಾಂಕ್ರೀಟ್ ಹೆದ್ದಾರಿ ನಿರ್ಮಿಸಲು ಎಲ್ ಆಂಡ್ ಟಿ ಸಂಸ್ಥೆಗೆ ಗುತ್ತಿಗೆ ವಹಿಸಲಾಗಿತ್ತು. 2017ರ ಮಾರ್ಚ್ 28ಕ್ಕೆ ಕಾಮಗಾರಿ ಪ್ರಾರಂಭಿಸಿದ್ದು, ಕೆಲಸ ಪೂರ್ಣಗೊಳಿಸಲು ಎರಡೂವರೆ ವರ್ಷದ ಅವಧಿ ನೀಡಲಾಗಿದೆ. ದಕ್ಷಿಣ ಕನ್ನಡದಂತಹ ಭಾಗದಲ್ಲಿ ಇಂತಹ ಕಾಮಗಾರಿ ಕೈಗೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಹಾಲಿ ಒತ್ತಡದ ಟ್ರಾಫಿಕ್ ಮಧ್ಯೆಯೇ ಅತಿ ಹೆಚ್ಚು ತಿರುವುಗಳನ್ನು ಹೊಂದಿರುವ ಈ ಹೆದ್ದಾರಿ ಕಷ್ಟದ ಕೆಲಸ ಎನ್ನುವುದು ಆಗಲೇ ಗುತ್ತಿಗೆದಾರರ ಅರಿವಿಗೆ ಬಂದಿತ್ತು.
ಪ್ರಸ್ತುತ ಅಡ್ಡಹೊಳೆ ಭಾಗದಲ್ಲಿ 22 ಕಿ.ಮೀ. ಭಾಗದಲ್ಲಿ ಕಾಮಗಾರಿಯ ಕೆಲವು ಭಾಗಗಳಿಗೆ ಇನ್ನೂ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ಅನುಮೋದನೆ ಸಿಗದಿರುವುದು ಪ್ರಾಧಿಕಾರ ಮತ್ತು ಗುತ್ತಿಗೆದಾರರ ಮಧ್ಯೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಅನುಮೋದನೆ ಸಿಗದಿರುವ ಕಾರಣ ಆ 22 ಕಿ.ಮೀ ಭಾಗವನ್ನು ಕೈಬಿಡಬೇಕು. ಬೇಕಿದ್ದರೆ ಅದಕ್ಕೆ ಪ್ರತ್ಯೇಕ ಟೆಂಡರ್ ಕರೆಯಲಾಗುವುದು ಎಂದು ಪ್ರಾಧಿಕಾರ ಹೇಳುತ್ತಿರುವುದು ಗುತ್ತಿಗೆದಾರರ ಕಳವಳಕ್ಕೆ ಕಾರಣ. ಈಗಾಗಲೇ ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಯೋಜನೆ ಕೈ ಬಿಡಲಾಗಿದೆ. ಈಗ 22 ಕಿ.ಮೀ. ಕೈಬಿಟ್ಟರೆ ಕಾಮಗಾರಿಗೆ ಏನೂ ಉಳಿಯುವುದಿಲ್ಲ, ಕಾಮಗಾರಿ ಕಾರ್ಯಸಾಧ್ಯವಾಗದು ಎಂಬ ಭೀತಿಯಲ್ಲಿ ಗುತ್ತಿಗೆದಾರರಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಇನ್ನೂ ಅಂತಿಮವಾಗಿಲ್ಲ:  ಒಟ್ಟು 821 ಕೋಟಿ ರೂ.ನ ಈ ಕಾಮಗಾರಿಗಾಗಿ ಗುತ್ತಿಗೆದಾರ ಕಂಪನಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದು, ಬಿ.ಸಿ.ರೋಡ್‌ನಲ್ಲಿ ಕ್ಯಾಂಪ್ ಹಾಕಿದೆ. ಕೆಲವೊಂದು ಕಡೆಗಳಲ್ಲಿ ಹೆಚ್ಚುವರಿ ಜಮೀನು ಭೂಸ್ವಾಧೀನ ಅಗತ್ಯವಿದ್ದು, ಕೆಲವು ಭಾಗಗಳಲ್ಲಿ ಹೈಕೋರ್ಟ್‌ನಲ್ಲಿ ವ್ಯಾಜ್ಯವಿದೆ. ಇದರಿಂದಾಗಿ ಜಮೀನು ಸಿಗಲು ಇನ್ನೊಂದು ವರ್ಷ ಬೇಕಾಗಬಹುದು. ತಡವಾದರೆ ಗುತ್ತಿಗೆದಾರರಿಗೆ ದಂಡ ವಿಧಿಸುವ ಅವಕಾಶವೂ ಕಾಂಟ್ರಾಕ್ಟ್‌ನಲ್ಲಿದೆ. ಇದರ ನಡುವೆ ಒಂದು ಭಾಗವನ್ನೇ ರದ್ದು ಮಾಡಿ ಬೇರೆ ಟೆಂಡರ್ ಕರೆದರೆ ಸರಿಯಾಗದು ಎಂಬ ಅಭಿಪ್ರಾಯ ಗುತ್ತಿಗೆದಾರ ಕಂಪನಿಯ ಅಧಿಕಾರಿಗಳಲ್ಲಿದೆ. ಇದು ಅಂತಿಮಗೊಳ್ಳದಿದ್ದರೂ ಇನ್ನೊಂದು ವಾರದಲ್ಲಿ ಈ ಬಗ್ಗೆ ಕಂಪನಿ ತೀರ್ಮಾನಕ್ಕೆ ಬರಲಿದೆ ಎಂದೂ ತಿಳಿದುಬಂದಿದೆ.

ಕೆಲಸ ಸ್ಥಗಿತಗೊಳಿಸಿದ ಕಂಪನಿ:  ಮಳೆಗಾಲದ ಬಳಿಕ ಬಿ.ಸಿ.ರೋಡ್ ಅಡ್ಡಹೊಳೆ ಕೆಲಸ ಚುರುಕುಗೊಂಡಿತ್ತು. ಭಾರಿ ಮಳೆ ಸುರಿಯುತ್ತಿದ್ದರೂ ಕಂಪನಿ ಕಾಮಗಾರಿ ಮುಂದುವರಿಸಿತ್ತು. ಆದರೆ ಒಂದೆರಡು ದಿನಗಳಿಂದ ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿದ್ದಾಗಿ ತಿಳಿದುಬಂದಿದೆ. ಉಪ್ಪಿನಂಗಡಿ, ಬಿ.ಸಿ.ರೋಡ್‌ನಲ್ಲಿ ಸೇತುವೆಗೆ ಕಾಮಗಾರಿ ನಡೆಯುತ್ತಿದ್ದು, ಅದು ಸದ್ಯ ನಿಂತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರರ ನಡುವೆ ಯಾವುದೋ ಚರ್ಚೆ ನಡೆದಿರುವಂತೆ ಕಾಣುತ್ತದೆ. ಈ ಬಗ್ಗೆ ನನಗೂ ಮಾಹಿತಿ ಇಲ್ಲ. ಈ ಬಗ್ಗೆ ಕರೆಸಿ ಮಾತನಾಡುವೆ.
– ಶಶಿಕಾಂತ್ ಸೆಂಥಿಲ್, ದ.ಕ ಜಿಲ್ಲಾಧಿಕಾರಿ

 

ಈಗಾಗಲೇ ಕಾರ್ಮಿಕರು ಕೆಲಸ ನಿಲ್ಲಿಸಿದ್ದಾರೆ. ಯಂತ್ರೋಪಕರಣಗಳನ್ನೂ ನೆಲ್ಯಾಡಿ ಬಳಿಯ ಕ್ಯಾಂಪ್‌ಗೆ ಸ್ಥಳಾಂತರಿಸಿದ್ದಾರೆ. ನಮಗೆ ತಿಳಿದ ಪ್ರಕಾರ ನಷ್ಟದಿಂದಾಗಿ ಕಂಪನಿ ಕೆಲಸ ನಿಲ್ಲಿಸಿದೆ. ಒಂದು ವೇಳೆ ಅರ್ಧಕ್ಕೇ ಕೆಲಸ ನಿಂತರೆ ಸ್ಥಳೀಯರಿಗೆ ತೀವ್ರ ತೊಂದರೆಯಾಗುತ್ತದೆ. ತೋಡುಗಳನ್ನು ಬ್ಲಾಕ್ ಮಾಡಿ ಹೋಗಿದ್ದಾರೆ. ಮುಂದಿನ ಮಳೆಗಾಲದಲ್ಲಿ ದೇವರೇ ಕಾಪಾಡಬೇಕು.
– ಕಿರಣ್ ಕುಮಾರ್ ಪೆರ್ನೆ, ನಾಗರಿಕರು