Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಮಾರತ್ತಹಳ್ಳಿಯಲ್ಲಿ ಕಾವೇರಿ ಗುಪ್ತಗಾಮಿನಿ

Monday, 15.10.2018, 3:04 AM       No Comments

ಬೆಂಗಳೂರು: ಐಟಿ, ಬಿಟಿ ಕಾರಿಡಾರ್ ಎಂದೇ ಗುರುತಿಸಿಕೊಂಡಿರುವ ಸಿಲ್ಕ್​ಬೋರ್ಡ್- ಕೆ.ಆರ್.ಪುರ ನಡುವಿನ ಮಾರತ್ತಹಳ್ಳಿ ಎಲ್ಲರಿಗೂ ಚಿರಪರಿಚಿತ. ಇಂತಹ ಐಟಿ ಪ್ರದೇಶದಲ್ಲೂ ನೀರಿನ ಜ್ವಲಂತ ಸಮಸ್ಯೆ ಸ್ಥಳೀಯರನ್ನು ಕಂಗೆಡಿಸಿದೆ. ಜಲಮಂಡಳಿ ನಿರ್ಲಕ್ಷ್ಯ್ಕೆ ಬೇಸತ್ತಿರುವ ಸ್ಥಳೀಯರು ಜನತಾದರ್ಶನ ವೇದಿಕೆಯಲ್ಲೇ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

ವಾರ್ಡ್ ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ 24×7 ಆಯೋಜಿಸುತ್ತಿರುವ ‘ಜನತಾ ದರ್ಶನ’ ಕಾರ್ಯಕ್ರಮ ಶುಕ್ರವಾರ (ಅ.12) ಮಾರತ್ತಹಳ್ಳಿ ವಾರ್ಡ್​ನಲ್ಲಿ ನಡೆಯಿತು.

ಮಾರತ್ತಹಳ್ಳಿ ಪ್ರದೇಶದಲ್ಲಿ ನಾಲ್ಕೈದು ತಿಂಗಳಿಂದ ನೀರಿನ ಸಮಸ್ಯೆ ಉಲ್ಬಣಿಸಿದ್ದು, ನೀರು ಬರದಿದ್ದರೂ ಸಾವಿರಾರು ರೂಪಾಯಿ ಬಿಲ್ ನೀಡುವ ಜಲಮಂಡಳಿ ಕಾರ್ಯವೈಖರಿ ವಿರುದ್ಧ ಜನ ಸಿಡಿದೆದ್ದಿದ್ದರು. ಸ್ಥಳೀಯರಾದ ಪ್ರಭಾಕರ ಪತಿ, ದೀಪ್ತಿ, ಗಣೇಶ್ ಹೀಗೆ ಹತ್ತಾರು ನಾಗರಿಕರು ವಾರ್ಡ್​ನಲ್ಲಿ ಇರುವ ನೀರಿನ ಸಮಸ್ಯೆ ಬಗ್ಗೆ ವಾರ್ಡ್ ಕಾಪೋರೇಟರ್ ಎನ್. ರಮೇಶ್ ಬಳಿ ಅಹವಾಲು ಸಲ್ಲಿಸಿದರು. 6 ತಿಂಗಳ ಹಿಂದೆ ಜಲಮಂಡಳಿ ನೀರಿನ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಪೈಪುಗಳನ್ನು ಬದಲಾಯಿಸಿ: ನಾಗರಿಕರ ಸಮಸ್ಯೆ ಆಲಿಸಿ ಪ್ರತಿಕ್ರಿಯೆ ನೀಡಿದ ಕಾಪೋರೇಟರ್ ರಮೇಶ್, ಮಾರತ್ತಹಳ್ಳಿ ನಗರಸಭೆಯಾಗಿದ್ದ ಸಂದರ್ಭದಲ್ಲಿ ಇರುವ ಪೈಪುಗಳಲ್ಲೇ ಇಂದಿಗೂ ನೀರು ಹರಿಯುತ್ತಿದೆ. ಐಟಿ ಪ್ರದೇಶವಾಗಿ ಅಭಿವೃದ್ಧಿ ಹೊಂದುತ್ತಿರುವ ಮಾರತ್ತಹಳ್ಳಿಯಲ್ಲಿ ವರ್ಷ ಕಳೆದಂತೆ ಜನಸಂಖ್ಯೆ ಹೆಚ್ಚುತ್ತಿದೆ. ಆದರೆ, ನೀರು ಪೂರೈಕೆ ಪೈಪುಗಳ ಬದಲಾವಣೆ ಮಾಡಿಲ್ಲ. ಇದು ಸಮಸ್ಯೆ ಹೆಚ್ಚಾಗಲು ಕಾರಣ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು.

ಆರ್​ಒ ಘಟಕಕ್ಕೂ ಜಾಗವಿಲ್ಲ!

ವಾರ್ಡ್​ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲದಿರುವ ಬಗ್ಗೆ ನಿವಾಸಿ ಧನುಷ್ ಕಾಪೋರೇಟರ್ ಗಮನಸೆಳೆದರು. ಈ ಕುರಿತು ಪ್ರತಿಕ್ರಿಯೆ ನೀಡಿದ ರಮೇಶ್, ಕುಡಿವ ನೀರಿನ ಘಟಕ ನಿರ್ವಣಕ್ಕೂ ಸರ್ಕಾರಿ ಜಾಗವಿಲ್ಲ. ಒತ್ತುವರಿ ತೆರವುಗೊಳಿಸಿ ಎಂದು ಸೂಚಿಸಿದರೆ ಪಾಲಿಕೆ ಅಧಿಕಾರಿಗಳು ಗಣನೆಗೇ ತೆಗೆದುಕೊಳ್ಳುತ್ತಿಲ್ಲ. ಒತ್ತುವರಿ ಮಾಡಿಕೊಂಡವರ ಬಳಿ ಹೋಗಿ ತೆರವು ಮಾಡಿ ಎಂದರೆ ನನಗೇ 5 ಲಕ್ಷ ರೂ. ನೀಡಲು ಬರುತ್ತಾರೆ. ಇವರ ಹಿಂದೆ ಪ್ರಭಾವಿ ಶಕ್ತಿಗಳಿವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ವ್ಹೀಲಿಂಗ್ ಸಮಸ್ಯೆ

ರಸ್ತೆ ಚೆನ್ನಾಗಿದೆ ಎಂಬ ಕಾರಣಕ್ಕೆ ಯುವಕರು ವಿವಿಧೆಡೆಯಿಂದ ಆಗಮಿಸಿ ವ್ಹೀಲಿಂಗ್ ಮಾಡುತ್ತಿದ್ದಾರೆ. ಹೀಗಾಗಿ ರಸ್ತೆ ದಾಟುವಾಗ ಹಾಗೂ ಸಂಚರಿಸುವಾಗ ಜೀವಭಯ ಎದುರಾಗಿದೆ. ಇಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾರತ್ತಹಳ್ಳಿಯ ನಿವಾಸಿ ಚೇತನ್ ವಿನಂತಿಸಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಂಚಾರ ವಿಭಾಗದ ಪೊಲೀಸ್ ಅಧಿಕಾರಿ, ರಂಗಸ್ವಾಮಿ ಹಾಗೂ ಪಿಎಸ್ಸೈ ಸೋಮೇಶ್, ವ್ಹೀಲಿಂಗ್ ಮಾಡುವವರನ್ನು ಹಿಂಬಾಲಿಸಿದಲ್ಲಿ ಅವರ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಂಥವರ ವಾಹನದ ನಂಬರ್ ದಾಖಲಿಸಿಕೊಂಡು, ಆರ್​ಟಿಒ ಕಚೇರಿ ಮೂಲಕ ಅವರ ಮನೆಯ ವಿಳಾಸ ಪಡೆದುಕೊಂಡು ಕ್ರಮ ಕೈಗೊಳ್ಳುತ್ತೇವೆ. ವ್ಹೀಲಿಂಗ್ ಮಾಡಿದ್ದು ಕಂಡುಬಂದಲ್ಲಿ ಸಾರ್ವಜನಿಕರು ದ್ವಿಚಕ್ರ ವಾಹನದ ಸಂಖ್ಯೆ ದಾಖಲಿಸಿ, ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದರು. ಆದರೆ, ಇಂಥ ಬೈಕ್​ಗಳಿಗೆ ನಂಬರ್​ಪ್ಲೇಟ್ ಇರುವುದಿಲ್ಲ ಎಂದು ದೂರುದಾರರು ಆಕ್ರೋಶ ವ್ಯಕ್ತಪಡಿಸಿದರು.

ಅನುದಾನವಿದ್ದರೂ ಪ್ರಯೋಜನವಿಲ್ಲ

ವಾರ್ಡ್​ನಲ್ಲಿ ಸುಸಜ್ಜಿತವಾದ ಉದ್ಯಾನದ ಅಗತ್ಯವಿದೆ ಎಂದು ವಾರ್ಡ್ ನಿವಾಸಿ ಶ್ರೀನಿವಾಸ್ ಆಗ್ರಹಿಸಿದರು. ಎಚ್​ಎಎಲ್ ಪಾರ್ಕ್​ಗೆ ಹೋದರೆ ನಮ್ಮನ್ನು ಕಳ್ಳರಂತೆ ನೋಡುತ್ತಾರೆ. ಜತೆಗೆ ಈ ಪಾರ್ಕ್​ನಲ್ಲಿ ಅನೈತಿಕ ಚಟುವಟಿಕೆಗಳೂ ನಡೆಯುತ್ತಿವೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಪೋರೇಟರ್ ರಮೇಶ್, ವಾರ್ಡ್​ನಲ್ಲಿ ಪಾರ್ಕ್, ಬಡವರಿಗಾಗಿ ಚೌಲ್ಟ್ರಿ, ಸಮುದಾಯ ಭವನ, ಶಾಲೆ, ಅಂಬೇಡ್ಕರ್ ಭವನ ನಿರ್ವಣಕ್ಕೆ ಅನುದಾನ ಕೊರತೆಯಿಲ್ಲ. ಆದರೆ, ಇವುಗಳ ನಿರ್ವಣಕ್ಕೆ ಜಾಗವೇ ಇಲ್ಲ. -ಠಿ;6 ಕೋಟಿ ಅನುದಾನ ತಂದಿದ್ದೇನೆ. ಆದರೆ, ಒಂದು ರೂಪಾಯಿ ಖರ್ಚಾಗಿಲ್ಲ. ಒತ್ತುವರಿ ತೆರವುಗೊಳಿಸಿ ಎಂದು 4 ತಹಸೀಲ್ದಾರ್​ಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಸ್ಥಳಕ್ಕೆ ಬಂದು ಗುರುತಿಸುವ ಕೆಲಸವನ್ನು ಅಧಿಕಾರಿಗಳು ಮಾಡಿಲ್ಲ. ಕಾಪೋರೇಟರ್ ಮನಸ್ಸು ಮಾಡಿದರಷ್ಟೇ ಅಭಿವೃದ್ಧಿಯಾಗಲ್ಲ. ಅಧಿಕಾರಿಗಳು ಕೈಜೋಡಿಸಬೇಕು ಎಂದರು.

ಪೊಲೀಸರು ಬಂಧಿಸುವ ಭೀತಿ!

ಜನತಾದರ್ಶನಕ್ಕೆ ಆಗಮಿಸಿದ್ದ ಸಾರ್ವಜನಿಕರು ಒಕ್ಕೊರಲಿನಿಂದ ನೀರಿನ ಸಮಸ್ಯೆ ಬಗ್ಗೆ ಧ್ವನಿ ಎತ್ತಿದರು. ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡುವಲ್ಲಿ ನಿಸ್ಸೀಮ ರಾಗಿದ್ದು, ಸ್ಥಳ ಪರಿಶೀಲನೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಈ ವೇಳೆ ಮಾರತ್ತಹಳ್ಳಿ ನಿವಾಸಿ ಸೋಮನಾಥ ಗಟ್ಟಿ ಧ್ವನಿಯಲ್ಲಿ ಕಾರ್ಯಕ್ರಮದಲ್ಲಿದ್ದ ಜಲಮಂಡಳಿ ಅಧಿಕಾರಿ ಗಳನ್ನು ಪ್ರಶ್ನಿಸಿ, ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಮಾತು ಮುಂದುವರಿಸಿದ ಸೋಮನಾಥ, ‘ಇದೀಗ ನಿರ್ಭೀತಿಯಿಂದ ಅಧಿಕಾರಿಗಳನ್ನು ಪ್ರಶ್ನಿಸಿದ್ದೇನೆ. ಆದರೆ, ಕಾರ್ಯಕ್ರಮದ ಬಳಿಕ ಅಧಿಕಾರಿಗಳು ನನ್ನ ವಿರುದ್ಧ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿಯಾರೋ ಎಂಬ ಭಯ ಶುರುವಾಗಿದೆ. ಹೀಗಾಗಿ ನೀವು ನಮ್ಮ ಬೆಂಬಲಕ್ಕಿರಬೇಕು’ ಎಂದು ಹೇಳುವ ಮೂಲಕ ನೀರಿನ ಗಂಭೀರ ಚರ್ಚೆಯ ನಡುವೆ ಸಭಿಕರು ನಗೆಗಡಲಲ್ಲಿ ತೇಲುವಂತೆ ಮಾಡಿದರು.

ಪ್ಲಾಸ್ಟಿಕ್ ಮಾಫಿಯಾ

ಮನೆಯ ಹೊರಗಡೆ ಇರುವ ಕಸ ಬೆಳಗಾಗುವುದರೊಳಗೆ ರಸ್ತೆ ತುಂಬ ಬಿದ್ದಿರುತ್ತದೆ. ವಾರ್ಡ್​ನಲ್ಲಿ ಪ್ಲಾಸ್ಟಿಕ್ ಮಾಫಿಯಾ ಚುರುಕುಗೊಂಡಿದೆ. ಉತ್ತರ ಭಾರತದಿಂದ ವಲಸೆ ಬಂದಿರುವ ಕುಟುಂಬದ ಮಕ್ಕಳು ಕಸದ ಬುಟ್ಟಿಯಿಂದ ಯಾರಿಗೂ ತಿಳಿಯದ ಹಾಗೆ ಪ್ಲಾಸ್ಟಿಕ್​ಗಳನ್ನು ಮಾತ್ರ ತೆಗೆದುಕೊಂಡು ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಮಾರತ್ತಹಳ್ಳಿಯ ಕಾರ್ತಿಕ್ ಆಗ್ರಹಿಸಿದರು. ಈ ಸಮಸ್ಯೆಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಅಧಿಕಾರಿ, ಸಾರ್ವಜನಿಕರು ಸಮರ್ಪಕವಾಗಿ ಕಸವನ್ನು ವಿಂಗಡಣೆ ಮಾಡಬೇಕು. ಸದ್ಯ ಕಸ ಸಂಗ್ರಹಣೆಗೆ ವಾಹನ ಸಮಸ್ಯೆಯಿದೆ. ಶೀಘ್ರದಲ್ಲಿಯೇ ಪ್ರತಿ ಮನೆಯಿಂದ ಕಸ ಸಂಗ್ರಹಣೆಗೆ ಸಮರ್ಪಕ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ವಾರದೊಳಗೆ ಡ್ರೖೆವ್

ವಾರ್ಡ್​ನಲ್ಲಿ ನೀರಿನ ಸಮಸ್ಯೆ ಹೆಚ್ಚಲು ಅನಧಿಕೃತ ಸಂಪರ್ಕಗಳೇ ಕಾರಣ. ಇವುಗಳಿಂದಾಗಿ ನೀರಿನ ಒತ್ತಡ ಕಡಿಮೆ ಯಾಗುತ್ತಿದೆ ಎಂದು ಸ್ಥಳೀಯ ನಾಗರಾಜ್ ಟೀಕಿಸಿದರು. ನೀರು ಬಿಡುವ ಸಿಬ್ಬಂದಿಗೆ ಅಕ್ರಮ ಸಂಪರ್ಕಗಳ ಅರಿವಿದ್ದು, ಅವರಿಂದ ಮಾಹಿತಿ ಪಡೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಕಾಪೋರೇಟರ್ ಕೂಡ ಸಲಹೆ ನೀಡಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಜಲಮಂಡಳಿ ಮುಖ್ಯ ಇಂಜಿನಿಯರ್ ಎಸ್.ವಿ. ರಮೇಶ್, ವಾರದೊಳಗೆ ವಾರ್ಡ್​ನಲ್ಲಿರುವ ಅನಧಿಕೃತ ನೀರಿನ ಸಂಪರ್ಕ ತೆರವಿಗೆ ವಿಶೇಷ ತಪಾಸಣೆ ನಡೆಸುತ್ತೇವೆ ಎಂದು ಭರವಸೆ ನೀಡಿದರು. 20 ದಿನಗಳಲ್ಲಿ ಎಚ್​ಎಸ್​ಆರ್ ಲೇಔಟ್​ನಿಂದ ಹೊಸ ಪೈಪ್​ಲೈನ್ ಸಂಪರ್ಕ ದೊರೆಯಲಿದೆ. ಬಳಿಕ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದರು.

ಅಧಿಕಾರಿಗಳ ಗೈರಿಗೆ ಗರಂ

ರಾಮಾಂಜಿನಯ್ಯ ಬಡಾವಣೆಯ ಸದಾಶಿವನ್ ಬೀದಿನಾಯಿ ಹಾವಳಿಯನ್ನು ಪ್ರಸ್ತಾಪಿಸಿದರು. ಮಹಿಳೆಯರು, ಮಕ್ಕಳು ಓಡಾಡುವುದು ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು. ಆದರೆ, ಇದಕ್ಕೆ ಉತ್ತರಿಸಲು ಕಾರ್ಯಕ್ರಮದಲ್ಲಿ ಸಂಬಂಧಪಟ್ಟ ಅಧಿಕಾರಿ ಹಾಜರಿರಲಿಲ್ಲ. ಪಾಲಿಕೆ ಸದಸ್ಯ ರಮೇಶ್ ಸಹ ಅಸಮಾಧಾನ ವ್ಯಕ್ತಪಡಿಸಿ, ನಾಯಿ ದಾಳಿ ಪ್ರಕರಣದ ದಾಖಲೆ ಸಹಿತ ಹಾಜರಾಗುವಂತೆ 3 ದಿನದ ಹಿಂದೆಯೇ ಅಧಿಕಾರಿಗೆ ಸೂಚಿಸಿದ್ದೆ. ಇಷ್ಟಾಗಿಯೂ ನುಣುಚಿಕೊಂಡಿದ್ದಾರೆ. ಅಧಿಕಾರಿಗಳು ಜನರ ಮುಂದೆ ಬರದಿದ್ದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾದರೂ ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.

ಬಸ್ ನಿಲ್ಲಿಸುತ್ತಿಲ್ಲ ಅಂಕಲ್

ರಸ್ತೆ, ನೀರು, ಕಸ, ಚರಂಡಿ ಸೇರಿ ವಿವಿಧ ಗಂಭೀರ ಸಮಸ್ಯೆಗಳ ನಡುವೆಯೂ ಬಾಲಕ ಕೇಳಿದ ಪ್ರಶ್ನೆ ಜನತಾದರ್ಶನದಲ್ಲಿ ನೆರೆದಿದ್ದವರ ಗಮನ ಸೆಳೆಯಿತು. ಮಾರತ್ತಹಳ್ಳಿಯ ಪ್ರದೀಪ್ ಎಂಬ ವಿದ್ಯಾರ್ಥಿ, ‘ಅಂಕಲ್ ನಮಗೆ ಶಾಲೆಗೆ ತೆರಳುವುದು ಸಮಸ್ಯೆಯಾಗಿದೆ. ಬಸ್ ನಿಲ್ದಾಣದಲ್ಲಿ ನಿಲುಗಡೆ ನೀಡುವುದಿಲ್ಲ. ಕೇಳಿದರೆ ಬಸ್ಸಿನ ನಿರ್ವಾಹಕ ಬೈಯುತ್ತಾರೆ’ ಎಂದು ಅಳಲು ತೋಡಿಕೊಂಡ. ಇದಕ್ಕೆ ಪ್ರತಿಕ್ರಿಯಿಸಿದ ಕಾಪೋರೇಟರ್ ‘ಈ ಸಂಗತಿ ನನಗೂ ತಿಳಿದಿದೆ. ಕುಡುಕರು ಸದಾ ಬಸ್ ತಂಗುದಾಣದಲ್ಲಿಯೇ ಮಲಗಿರುತ್ತಾರೆ. ಇನ್ನು ಟ್ರಾಫಿಕ್ ಸಮಸ್ಯೆ ಆಗುತ್ತದೆ ಎನ್ನುವ ಕಾರಣಕ್ಕಾಗಿಯೂ ಬಸ್ ನಿಲ್ಲಿಸುತ್ತಿಲ್ಲ. ಬದಲಾಗಿ ಸಮೀಪವೇ ಇರುವ ಮುಂದಿನ ಬಸ್ ತಂಗುದಾಣದಲ್ಲಿ ನಿಲುಗಡೆ ಮಾಡುತ್ತಿದ್ದಾರೆ. ಇದೀಗ ನಮ್ಮ ವಾರ್ಡ್ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿರುವುದಾಗಿ ವಿದ್ಯಾರ್ಥಿಯೇ ಹೇಳಿರುವುದರಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ. ಕನಿಷ್ಠ ಶಾಲಾ ಸಮಯದಲ್ಲಾದರೂ ಬಸ್ ನಿಲುಗಡೆಯಾಗುವಂತೆ ಮಾಡುವೆ’ ಎಂದು ಭರವಸೆ ನೀಡಿದರು.

ಸ್ಕೈ ವಾಕ್ ಅಗತ್ಯ

ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಹಾಗೂ ಫುಟ್​ಪಾತ್ ಒತ್ತುವರಿಯಿಂದ ಸ್ಥಳೀಯರು ನಿತ್ಯ ಪರದಾಡುತ್ತಿದ್ದಾರೆ. ಹೀಗಾಗಿ ಗಣಪತಿ ದೇವಸ್ಥಾನದ ಸಮೀಪ ಸ್ಕೈವಾಕ್ ನಿರ್ವಿುಸಬೇಕೆಂದು ಸ್ಥಳೀಯ ನಿವಾಸಿ ರಜನಿ ಆಗ್ರಹಿಸಿದರು. ಮಲ್ಟಿಪ್ಲೆಕ್ಸ್, ಕಲಾಮಂದಿರ, ಗುರು ಕಾಂಪ್ಲೆಕ್ಸ್ ಹಾಗೂ ತುಳಸಿ ಥಿಯೇಟರ್ ಸಮೀಪ ಸ್ಕೈವಾಕ್ ನಿರ್ವಣಕ್ಕೆ ಎರಡು ವರ್ಷಗಳ ಹಿಂದೆಯೇ ಅನುಮೋದನೆ ದೊರೆತಿದೆ. ಆದರೆ, ಹೊರವರ್ತಲ ರಸ್ತೆಯಲ್ಲಿ ಸ್ಕೈವಾಕ್ ನಿರ್ವಣಕ್ಕೆ ಬಿಎಂಆರ್​ಸಿಎಲ್ ಒಪ್ಪಿಗೆ ನೀಡುತ್ತಿಲ್ಲ. ಈ ಮಾರ್ಗದಲ್ಲಿಯೇ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೆಟ್ರೋ ಅಧಿಕಾರಿಗಳು ಎನ್​ಒಸಿ ನೀಡುತ್ತಿಲ್ಲ ಎಂದು ಪಾಲಿಕೆ ಸದಸ್ಯ ರಮೇಶ್ ಬೇಸರ ವ್ಯಕ್ತಪಡಿಸಿದರು.

ಎಚ್​ಎಎಲ್ ದೌರ್ಜನ್ಯಕ್ಕೆ ಆಕ್ರೋಶ

ಮಾರತ್ತಹಳ್ಳಿ ವಾರ್ಡ್​ಗೆ ಹೊಂದಿಕೊಂಡಂತೆ ಹಿಂದುಸ್ತಾನ್ ಏರೋನಾಟಿಕ್ಸ್ ಪ್ರದೇಶವಿದೆ. ಈ ಜಾಗದಲ್ಲಿ ಶೌಚಗೃಹ ಹಾಗೂ ಬಸ್ ನಿಲ್ದಾಣ ನಿರ್ವಣಕ್ಕೆ ಎಚ್​ಎಎಲ್ ವಿರೋಧಿಸುತ್ತಿದೆ ಎಂದು ಕಾಪೋರೇಟರ್ ರಮೇಶ್ ಅಸಮಾಧಾನ ವ್ಯಕ್ತಪಡಿಸಿದರು. ಬಿಬಿಎಂಪಿ ಜಾಗವನ್ನೂ ಎಚ್​ಎಎಲ್ ತನ್ನದು ಎನ್ನುತ್ತಿದೆ. ಹೀಗಾಗಿ ಬಿಬಿಎಂಪಿ ಮಳೆನೀರುಗಾಲುವೆ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಎಚ್​ಎಎಲ್​ಗೆ ಸೂಕ್ತ ವಿವರಣೆ ನೀಡಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

Back To Top