ಬೆಂಗಳೂರು: ನಗರದೆಲ್ಲೆಡೆ ಉಂಟಾಗಿರುವ ರಸ್ತೆಗುಂಡಿಗಳಿಂದ ನಾಗರಿಕರು ಹಾಗೂ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದ್ದರೂ, ಇವುಗಳನ್ನು ದುರಸ್ತಿಗೊಳಿಸಲು ಬಿಬಿಎಂಪಿ ವಿಳಂಬ ಮಾಡುತ್ತಿದೆ. ಜತೆಗೆ ಜಿಟಿಜಿಟಿ ಮಳೆಯಿಂದಾಗಿ ಇನ್ನಷ್ಟು ಗುಂಡಿಗಳು ಸೃಷ್ಟಿಯಾಗುತ್ತಿದ್ದು, ಮಳೆ ನಿಂತ ಬಳಿಕ ಏಕಕಾಲದಲ್ಲಿ ಗುಂಡಿ ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳಲು ಪಾಲಿಕೆ ನಿರ್ಧರಿಸಿದೆ.
ಕಳೆದ 2 ತಿಂಗಳ ಹಿಂದೆ ಹೆಚ್ಚು ಗುಂಡಿಗಳು ಸೃಷ್ಟಿಯಾಗಿದ್ದ ವೇಳೆ ಅವುಗಳನ್ನು ಮುಚ್ಚಲು ಅಭಿಯಾನ ಕೈಗೊಳ್ಳಲಾಗಿತ್ತು. ಇದರಿಂದ ಹೆಚ್ಚಿನ ರಸ್ತೆಗಳು ಗುಂಡಿಮುಕ್ತ ಆಗಿದ್ದವು. ಜತೆಗೆ ಪ್ರಮುಖ ರಸ್ತೆಗಳನ್ನು ಸರಾಗ ಸಂಚಾರಕ್ಕಾಗಿ ಹಲವು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಇತ್ತೀಚಿಗೆ ಹಿಂಗಾರು ಮಳೆಯ ಕೊನೆಯ ಭಾಗದಲ್ಲಿ ಹಾಗೂ ಫೆಂಗಲ್ ಚಂಡಮಾರುತದ ಪರಿಣಾಮ ಜಿಟಿಜಿಟಿ ಮಳೆಯಿಂದಾಗಿ ರಸ್ತೆಗಳಲ್ಲಿ ಮತ್ತೆ ಗುಂಡಿಗಳು ಉಂಟಾಗಿವೆ. ಇವುಗಳನ್ನು ತಕ್ಷಣವೇ ಮುಚ್ಚಲು ಮಳೆ ಅಡ್ಡಿಯಾಗಿದೆ. ಹಾಗಾಗಿ ಮಳೆ ನಿಂತ ಬಳಿಕವೇ ಗುಂಡಿಗಳ ದುರಸ್ತಿ ಕಾರ್ಯಕ್ಕೆ ವೇಗ ಸಿಗಲಿದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಫೆಂಗಲ್ ಚಂಡಮಾರುತದ ಪರಿಣಾಮ ನಗರದಲ್ಲಿ ಮಳೆಯಾಗುತ್ತಿರುವುದರಿಂದ ಗುಂಡಿಗಳನ್ನು ಮುಚ್ಚಲು ಸಮಸ್ಯೆಯಾಗುತ್ತಿದೆ. ಹಾಗಾಗಿ ಕೋಲ್ಡ್ ಮಿಕ್ಸ್ ಬಳಸಿಕೊಂಡು ರಸ್ತೆಗುಂಡಿ ಮುಚ್ಚಬೇಕಿದೆ. ಮಳೆ ನಿಂತ ತಕ್ಷಣವೇ ಹಾಟ್ ಮಿಕ್ಸ್ ಪ್ಲಾಂಟ್‌ನಿಂದ ಹೆಚ್ಚು ಡಾಂಬರನ್ನು ಪಡೆದು ತ್ವರಿತವಾಗಿ ರಸ್ತೆಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
2 ಸಾವಿರಕ್ಕೂ ಹೆಚ್ಚು ಗುಂಡಿಗಳು:
ಸದ್ಯ ನಗರದಲ್ಲಿ ಮಳೆಯಾಗುತ್ತಿದ್ದು, ದಿನವೂ ಹಲವೆಡೆ ಗುಂಡಿಗಳು ಸೃಷ್ಟಿಯಾಗುತ್ತಿವೆ. ಅದರಲ್ಲೂ ಹೊರವಲಯದಲ್ಲಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳದ ಕಾರಣ ಪಾತ್‌ಹೋಲ್‌ಗಳ ಸಂಖ್ಯೆ ಏರುತ್ತಿವೆ. ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳಲ್ಲೂ ಹಲವೆಡೆ ಗುಂಡಿಗಳು ಉಂಟಾಗಿದ್ದು, ಸದ್ಯ 2 ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳು ಇರುವುದಾಗಿ ಪಾಲಿಕೆ ಅಂದಾಜಿಸಿದೆ. ಗುಂಡಿಗಳನ್ನು ಪತ್ತೆ ಹಚ್ಚಿ ಸಮೀಕ್ಷೆ ಕೈಗೊಂಡಲ್ಲಿ ಇನ್ನಷ್ಟು ಗುಂಡಿಗಳು ಕಾಣಸಿಗಲಿವೆ. ಈ ವಾರಾಂತ್ಯದ ವೇಳೆಗೆ ವಲಯವಾರು ರಸ್ತೆಗುಂಡಿ ಪಟ್ಟಿ ಸಿದ್ಧಮಾಡಿಕೊಂಡು ದುರಸ್ತಿ ಕೈಗೊಳ್ಳಲಾಗುತ್ತದೆ ಎಂದು ಪಾಲಿಕೆಯ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.