ಬೆಂಗಳೂರು: ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯದ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಕೇಳಿಬರುತ್ತಿರುವ ಬೆನ್ನಲ್ಲೇ, ಬಿಬಿಎಂಪಿಯು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ (ಬಿಎಸ್‌ಡಬ್ಲ್ಯುಎಂಎಲ್) ಸಹಯೋಗದಲ್ಲಿ ತೀವ್ರ ಸ್ವಚ್ಛತಾ ಅಭಿಯಾನವನ್ನು ಕೈಗೆತ್ತಿಕೊಂಡಿದೆ.
ಕಳೆದೆರಡು ತಿಂಗಳಿಂದ ಘನತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ ಹಳಿ ತಪ್ಪಿದೆ. ಬಟವಾಡೆ ಹಾಗೂ ಸಿಬ್ಬಂದಿಗಳ ನಿಯೋಜನೆಯಲ್ಲಿ ನಿಯಮ ಪಾಲನೆ ಆಗದಿರುವುದು ಹಾಗೂ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಸಮನ್ವಯ ಕೊರತೆಯಿಂದ ಸಮಸ್ಯೆ ಸೃಷ್ಟಿಯಾಗಿದೆ. ಹೊಸ ಟೆಂಡರ್ ಆಹ್ವಾನಿಸಿದ್ದರೂ, ನ್ಯಾಯಾಲಯದಲ್ಲಿರುವ ಕಾರಣ ಕಾರ್ಯಾದೇಶ ನೀಡಿಲ್ಲ. ಇದರಿಂದಾಗಿ ಗುತ್ತಿಗೆದಾರರು ಸೀಮಿತ ಪ್ರದೇಶಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚಿನ ಏರೋ ಇಂಡಿಯಾ ಹಾಗೂ ಬಂಡವಾಳ ಹೂಡಿಕೆ ಶೃಂಗ ನಡೆದ ಪ್ರದೇಶಗಳಲ್ಲಿ ಸಮರ್ಪಕವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳದಿದ್ದಕ್ಕೆ ಪಾಲಿಕೆ ಮುಖ್ಯಸ್ಥರು ಗರಂ ಆಗಿದ್ದರು.
ಇದೀಗ ನಗರದಲ್ಲಿ ಸ್ವಚ್ಚತೆಗೆ ಮತ್ತೆ ಮುತುವರ್ಜಿ ವಹಿಸುವ ನಿಟ್ಟಿನಲ್ಲಿ ಅಗತ್ಯ ಪೌರಕಾರ್ಮಿಕರನ್ನು ನಿಯೋಜಿಸಿ ಪಾಲಿಕೆ ಕಾರ್ಯೋನ್ಮುಖವಾಗಿದೆ. ನಿತ್ಯ ಹಸಿ ಕಸ ಸಂಗ್ರಹಿಸಲು ಆಟೋ ಟಿಪ್ಪರ್‌ಗಳು ಮನೆ-ಮನೆ ಭೇಟಿ ನೀಡಿದರೂ ಸಹ ನಗರದಲ್ಲಿ ರಸ್ತೆ ಬದಿ, ಪಾದಚಾರಿ ಮಾರ್ಗ, ಖಾಲಿ ಜಾಗಗಳಲ್ಲಿ ಕಸ ಬಿಸಾಡಲಾಗುತ್ತಿತ್ತು. ಈ ಸಂಬಂಧ ಕಸ ಬಿಸಾಡುವ ಸ್ಥಳ (ಬ್ಲಾಕ್ ಸ್ಪಾಟ್ಸ್) ಗಳನ್ನು ನಿವಾರಿಸಿ ಎಲ್ಲೆಂದರಲ್ಲಿ ಕಸ ಎಸೆಯದಂತೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ವಿಧ್ಯುಕ್ತ ಚಾಲನೆ ದೊರೆತಿದೆ.
ತ್ಯಾಜ್ಯ ಹಾಕುವ ಸ್ಥಳಗಳಲ್ಲಿ ರಂಗೋಲಿ:
ರಸ್ತೆ ಬದಿ, ಪಾದಚಾರಿ ಮಾರ್ಗಗಳಲ್ಲಿ ತ್ಯಾಜ್ಯ ಹಾಕಿರುವ ಸ್ಥಳಗಳಲ್ಲಿ ಸ್ವಚ್ಛಗೊಳಿಸಿ ಗೋಡೆಗಳಿಗೆ ಬಣ್ಣ ಬಳಿದು ಸೌಂದರ್ಯೀಕರಣಗೊಳಿಸಲಾಗುತ್ತಿದೆ. ಜತೆಗೆ ಆ ಸ್ಥಳದಲ್ಲಿ ಮತ್ತೆ ಕಸ ಹಾಕದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ. ಕಸ ಬಿಸಾಡುವ ಸ್ಥಳಗಳನ್ನು ತೆರವುಗೊಳಿಸಿ, ಬಣ್ಣ ಬಳಿದು ಸೌಂದರ್ಯೀಕರಣಕ್ಕೆ ಒತ್ತು ನೀಡಲಾಗಿದೆ. ಜತೆಗೆ ಸ್ವಚ್ಛಗೊಳಿಸಿರುವ ಸ್ಥಳಗಳಲ್ಲಿ ರಂಗೋಲಿ ಬಿಡಿಸುವ ಹಾಗೂ ಸಸಿ ನೆಡುವ ಕೆಲಸ ಮಾಡಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಅಭಿಯಾನದಲ್ಲಿ ಬಿಎಸ್‌ಡಬ್ಲ್ಯುಎಂಎಲ್ ಅಧಿಕಾರಿಗಳಾದ ಮುಖ್ಯ ಕಾರ್ಯಾಚರಣಾ ಅಧಿಕಾರಿ, ಉಪ ಪ್ರಧಾನ ವ್ಯವಸ್ಥಾಪಕರು, ಸಹಾಯಕ ಪ್ರಧಾನ ವ್ಯವಸ್ಥಾಪಕರು ಮತ್ತು ಮಾರ್ಷಲ್‌ಗಳು, ಎನ್‌ಜಿಒಗಳು, ಆರ್‌ಡಬ್ಲ್ಯುಎ ಮತ್ತು ಸ್ವಯಂಸೇವಕರು ಪಾಲ್ಗೊಂಡಿದ್ದರು.
ಮಾರ್ಷಲ್ಗಳಿಂದ ನಿಗಾ:
ಕಸ ಬಿಸಾಡುವ ಸ್ಥಳಗಳಲ್ಲಿ ಮಾರ್ಷಲ್ಗಳ ತಂಡವು ನಿಗಾ ವಹಿಸುವಂತೆ ನಿರ್ದೇಶನ ನೀಡಲಾಗಿದೆ. ತ್ಯಾಜ್ಯ ಬಿಸಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ದಂಡ ವಿಧಿಸಿ ಮತ್ತೆ ರಸ್ತೆಬದಿ ಕಸ ಬಿಸಾಡದಂತೆ ಎಚ್ಚರಿಕೆ ನೀಡಲಾಗುತ್ತಿದೆ. ನಿತ್ಯ ಮನೆಗಳ ಬಳಿ ಬರುವ ಆಟೋ ಟಿಪ್ಪರ್‌ಗಳಿಗೆ ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕಿಸಿ ನೀಡಲು ಅರಿವು ಮೂಡಿಸುವ ಕಾರ್ಯವನ್ನು ಕೈಗೊಳ್ಳಲು ಮಾರ್ಷಲ್‌ಗಳಿಗೆ ಸೂಚಿಸಲಾಗಿದೆ.