ತ್ಯಾಜ್ಯ ವಿಲೇ ಜಾಗಕ್ಕೆ ಬಿಬಿಎಂಪಿ ಚಿಂತೆ

ಮಿಶ್ರ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿರುವ ಬೆಳ್ಳಹಳ್ಳಿ ಕಲ್ಲು ಕ್ವಾರಿ ಭರ್ತಿಯಾಗುತ್ತಿದೆ. ಮುಂದೆ ಎಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಕು ಎಂಬ ಚಿಂತೆ ಬಿಬಿಎಂಪಿ ಅಧಿಕಾರಿಗಳನ್ನು ಕಾಡತೊಡಗಿದೆ.

ತ್ಯಾಜ್ಯ ಸಮಸ್ಯೆ ನಿವಾರಣೆಗೆ ಸಂಬಂಧಿಸಿದಂತೆ ಬಿಬಿಎಂಪಿ 8 ಸಂಸ್ಕರಣಾ ಘಟಕ ಸ್ಥಾಪಿಸಿದ್ದು, ಅದರಲ್ಲಿ 5 ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಜತೆಗೆ ಮಿಶ್ರ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದ್ದ ಮಿಟ್ಟಗಾನಹಳ್ಳಿ ಕಲ್ಲು ಕ್ವಾರಿ ಭರ್ತಿಯಾಗಿ ಉದ್ಯಾನ ನಿರ್ವಿುಸಲಾಗಿದೆ. ಅದೇ ರೀತಿ ಈಗ ಮಿಶ್ರತ್ಯಾಜ್ಯ ವಿಲೇವಾರಿ ಮಾಡ ಲಾಗುತ್ತಿರುವ ಬೆಳ್ಳಹಳ್ಳಿ ಕಲ್ಲು ಕ್ವಾರಿ ಶೇ.90ಕ್ಕೂ ಹೆಚ್ಚಿನ ಭಾಗ ಭರ್ತಿಯಾಗಿದ್ದು, ಇನ್ನೊಂದು ತಿಂಗಳಲ್ಲಿ ಅದು ಕೂಡ ಪೂರ್ಣ ಗೊಳ್ಳಲಿದೆ. ಮಿಶ್ರ ತ್ಯಾಜ್ಯ ವಿಲೇವಾರಿ ಮಾಡಲು ಹೊಸದಾಗಿ ಎರಡು ಕ್ವಾರಿಗಳನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಸರ್ಕಾರದಿಂದ ಅದಕ್ಕೆ ಇನ್ನು ಅನುಮೋದನೆ ದೊರೆತಿಲ್ಲ. ಹೀಗಾಗಿ ಬೆಳ್ಳಹಳ್ಳಿ ಕ್ವಾರಿ ಭರ್ತಿ ನಂತರ ತ್ಯಾಜ್ಯ ವಿಲೇವಾರಿ ಎಲ್ಲಿ ಮಾಡಬೇಕೆಂಬುದರ ಬಗ್ಗೆ ಚಿಂತೆ ಶುರುವಾಗಿದೆ.

ಇನ್ನೂ ಅನುಮತಿ ದೊರೆತಿಲ್ಲ: ಮಿಶ್ರತ್ಯಾಜ್ಯ ವಿಲೇವಾರಿಗೆ ಆನೇಕಲ್ ಬಳಿಯ ಹುಲ್ಲಹಳ್ಳಿ ಮತ್ತು ನೆಲಮಂಗಲ ಬಳಿಯ ಮಾರೇನಹಳ್ಳಿಯಲ್ಲಿ ಬಿಬಿಎಂಪಿ ಅಧಿಕಾರಿಗಳು ಜಾಗ ಗುರುತಿಸಿದ್ದಾರೆ. ಅದರಂತೆ ಹುಲ್ಲಹಳ್ಳಿಯಲ್ಲಿ 10 ಎಕರೆ, ಮಾರೇನಹಳ್ಳಿಯಲ್ಲಿ 12 ಎಕರೆ ಸ್ಥಗಿತಗೊಂಡಿರುವ ಕಲ್ಲು ಕ್ವಾರಿ ಜಾಗವಿದ್ದು, ಅಲ್ಲಿ ತ್ಯಾಜ್ಯ ವಿಲೇವಾರಿಗೆ ಗುರುತಿಸಲಾಗಿದೆ.

ತಿಂಗಳಲ್ಲಿ ಸಿದ್ಧಗೊಳ್ಳಬೇಕಿದೆ ಕ್ವಾರಿ: ಬಿಬಿಎಂಪಿ ಗುರುತಿಸಿರುವ ಕ್ವಾರಿಯಲ್ಲಿ ಮಿಶ್ರ ತ್ಯಾಜ್ಯ ವಿಲೇವಾರಿ ಮಾಡಲು ಇನ್ನೊಂದು ತಿಂಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಪ್ರಮುಖವಾಗಿ ಕ್ವಾರಿಯಲ್ಲಿ ಟಾರ್ಪಲ್ ಅಳವಡಿಕೆ ಸೇರಿ ಲಿಚೆಟ್ ನೆಲದಡಿಗೆ ಹೋದಂತೆ ತಡೆಯಲು ಕ್ರಮ ಕೈಗೊಳ್ಳಬೇಕಿದೆ. ಜತೆಗೆ ತ್ಯಾಜ್ಯ ವಿಲೇವಾರಿ ನಂತರ ದುರ್ವಾಸನೆ ಬರದಂತೆ ತಡೆಯಬೇಕಿದೆ. ಈ ಎಲ್ಲ ಕ್ರಮ ಕೈಗೊಳ್ಳಲು ಕನಿಷ್ಠ 2ರಿಂದ 3 ತಿಂಗಳ ಕಾಲಾವಕಾಶ ಬೇಕಿದೆ. ಅದರೊಂದಿಗೆ ಬೆಳ್ಳಹಳ್ಳಿ ಕಲ್ಲು ಕ್ವಾರಿ ಇನ್ನೊಂದು ತಿಂಗಳಲ್ಲಿ ಭರ್ತಿಯಾಗುತ್ತಿದ್ದು, ಅಷ್ಟರೊಳಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.

ಕಾರ್ಯನಿರ್ವಹಿಸದ ಸಂಸ್ಕರಣಾ ಘಟಕಗಳು

ಬೆಂಗಳೂರಿನಲ್ಲಿ ತ್ಯಾಜ್ಯ ಸಂಗ್ರಹಕ್ಕಾಗಿ 4,213 ಆಟೋ ಟಿಪ್ಪರ್, 566 ಕಾಂಪ್ಯಾಕ್ಟರ್​ಗಳನ್ನು ಬಳಸಲಾಗುತ್ತಿದೆ. ರಸ್ತೆ ಕಸಗುಡಿಸಲು 8 ಸ್ವೀಪಿಂಗ್ ಯಂತ್ರಗಳಿದ್ದು, 18,500 ಪೌರಕಾರ್ವಿುಕರು ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ 166 ಒಣತ್ಯಾಜ್ಯ ಸಂಗ್ರಹ ಘಟಕಗಳು, 11 ಬಯೋಮಿಥನೈಸೇಷನ್ ಘಟಕ ಮತ್ತು 8 ಬೃಹತ್ ತ್ಯಾಜ್ಯ ಸಂಸ್ಕರಣಾ ಘಟಕಗಳಿವೆ. ಆದರೂ ತ್ಯಾಜ್ಯ ಸಮಸ್ಯೆ ನಿವಾರಿಸಲು ಸಾಧ್ಯವಾಗಿಲ್ಲ. ಅದರ ಜತೆಗೆ ಬಿಬಿಎಂಪಿ ನಿರ್ವಿುಸಿರುವ 8 ಸಂಸ್ಕರಣಾ ಘಟಕಗಳಲ್ಲಿ ಕೆಸಿಡಿಸಿ, ಸೀಗೇಹಳ್ಳಿ, ಕನ್ನಳ್ಳಿ ಘಟಕಗಳನ್ನು ಹೊರತುಪಡಿಸಿ ಉಳಿದ 5 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ.

ಸದ್ಯ ಬೆಳ್ಳಹಳ್ಳಿ ಕಲ್ಲು ಕ್ವಾರಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಜಾಗವಿದೆ. ಅದು ಭರ್ತಿಯಾದ ನಂತರ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ. ಅಷ್ಟರೊಳಗೆ ಹೊಸ ಗುತ್ತಿಗೆದಾರರು ನೇಮಕಗೊಂಡರೆ, ವಿಂಗಡಣೆಯಾಗುವ ತ್ಯಾಜ್ಯವನ್ನು ಸಂಸ್ಕರಿಸಲು ಸುಲಭವಾಗಲಿದೆ.

| ಮಂಜುನಾಥ ಪ್ರಸಾದ್, ಆಯುಕ್ತ

ಹೊಸ ಗುತ್ತಿಗೆ ಮತ್ತಷ್ಟು ವಿಳಂಬ

ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಹೊಸದಾಗಿ ಗುತ್ತಿಗೆದಾರರ ನೇಮಕ್ಕೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಮಾ.28ಕ್ಕೆ ಪ್ರಕ್ರಿಯೆ ಪೂರ್ಣಗೊಂಡು, ಗುತ್ತಿಗೆದಾರರು ಸಲ್ಲಿಸಿದ ಬಿಡ್ ಮತ್ತು ಇನ್ನಿತರ ಅಂಶಗಳನ್ನು ಪರಿಶೀಲಿಸಲಾಗುತ್ತದೆ. ಆದರೆ, ಲೋಕಸಭಾ ಚುನಾವಣೆ ನಂತರ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗುತ್ತದೆ. ಒಮ್ಮೆ ಹೊಸ ಗುತ್ತಿಗೆದಾರರು ನೇಮಕಗೊಂಡರೆ ತ್ಯಾಜ್ಯ ವಿಂಗಡಿಸುವುದು ಕಡ್ಡಾಯವಾಗಲಿದೆ. ಆಗ ಹಸಿ, ಒಣ ತ್ಯಾಜ್ಯ ಸಂಸ್ಕರಣೆ ಸುಲಭವಾಗಲಿದೆ. ಅಲ್ಲಿಯವರೆಗೆ ಮಿಶ್ರ ತ್ಯಾಜ್ಯವನ್ನೇ ವಿಲೇವಾರಿ ಮಾಡುವ ಅನಿವಾರ್ಯತೆಯಿದೆ.

| ಗಿರೀಶ್ ಗರಗ, ಬೆಂಗಳೂರು