ಕೆರೆಯ ನೀರು ಮತ್ತೆ ಕೆರೆಗೆ: ಸಂಸ್ಕರಿಸಿದ ನೀರು ಮರುಬಳಕೆಗಿಲ್ಲ ಒತ್ತು!

ಬೆಂಗಳೂರು: ಯಾವುದೇ ಜಲಮೂಲಗಳಿಲ್ಲದೇ ಬೇಸಿಗೆ ಸಂದರ್ಭದಲ್ಲಿ ಬೆಂಗಳೂರು ಪರದಾಡುತ್ತಿದ್ದರೂ ಸಂಸ್ಕರಿಸಿದ ನೀರಿನ ಮರುಬಳಕೆಗೆ ಒತ್ತು ಸಿಕ್ಕಿಲ್ಲ. ನಗರದ 24 ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್​ಟಿಪಿ)ಗಳಲ್ಲಿ 1057 ದಶಲಕ್ಷ ಲೀಟರ್ ನೀರು ಸಂಸ್ಕರಿಸಲಾಗುತ್ತಿದೆಯಾದರೂ ಮರುಬಳಕೆಗೆ ಬೇಡಿಕೆ ಇಲ್ಲದಿರುವುದರಿಂದ ಕೆರೆಗಳಿಗೆ ಮರಳಿ ವಿಸರ್ಜಿಸಲಾಗುತ್ತಿದೆ.

ಲಾಲ್​ಬಾಗ್, ಕೆಐಎಎಲ್,ಕಬ್ಬನ್ ಪಾರ್ಕ್ ಮತ್ತು ಸುತ್ತಮುತ್ತಲ್ಲಿನ ಕೆಲವು ಕಟ್ಟಡ, ಉದ್ಯಾನವನಗಳನ್ನು ಹೊರತುಪಡಿಸಿದರೆ ಇನ್ನುಳಿದ ಕಡೆಗಳಲ್ಲಿ ಸಂಸ್ಕರಿಸಿದ ನೀರನ್ನು ಬಳಸುತ್ತಿಲ್ಲ.

ನಗರದಲ್ಲಿ ಪ್ರತಿದಿನ 1,510 ದಶಲಕ್ಷ ಲೀಟರ್ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದ್ದು, ಶೇ. 70 ಸಂಸ್ಕರಣೆ ಮಾಡಲಾಗುತ್ತಿದೆ. ಆದರೆ, ಈ ನೀರು ಬಳಕೆಗೆ ಒತ್ತು ದೊರೆಯದಿರುವುದು ಸ್ಥಳೀಯ ಪ್ರಾಧಿಕಾರಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ.

ವೈಟ್​ಟಾಪಿಂಗ್​ಗೂ ಕುಡಿಯುವ ನೀರು!: ನಗರದ 30ಕ್ಕೂ ಹೆಚ್ಚು ಕಡೆಗಳಲ್ಲಿ ವೈಟ್​ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ಎಲ್ಲೆಡೆ ಟ್ಯಾಂಕರ್ ನೀರು ಬಳಸಲಾಗುತ್ತಿದೆ. ಬೋರ್​ವೆಲ್​ಗಳು ಅಥವಾ ಕೆರೆಗಳಿಂದ ತರಲಾಗುತ್ತಿದ್ದು, ಸಂಸ್ಕರಿಸಿದ ನೀರನ್ನು ಬಳಸುವುದಕ್ಕೆ ಅವಕಾಶವಿದ್ದರೂ ಬಿಬಿಎಂಪಿ ಆಸಕ್ತಿ ತೋರಿಲ್ಲ. ಈ ಬಗ್ಗೆ ಗುತ್ತಿಗೆದಾರರಿಗೆ ಅರಿವು ನೀಡುವ ಕನಿಷ್ಠ ಕಾರ್ಯವನ್ನು ಜಲಮಂಡಳಿ ಅಥವಾ ಬಿಬಿಎಂಪಿ ಮಾಡಿಲ್ಲ.

ರಸ್ತೆಗಳಿಗೆ ಕಾಂಕ್ರಿಟ್ ಹಾಕಿದ ನಂತರ 28 ರಿಂದ 45 ದಿನಗಳವರೆಗೆ ಪ್ರತಿದಿನ ನೀರು ಹರಿಸಲಾಗುತ್ತದೆ. ಬೇಸಿಗೆ ಹಿನ್ನೆಲೆಯಲ್ಲಿ ಹೆಚ್ಚಿನ ನೀರು ಅಗತ್ಯವಾದರೂ ಖಾಸಗಿ ಟ್ಯಾಂಕರ್​ಗಳ ಮೂಲಕವೇ ನೀರು ಹರಿಸಲಾಗುತ್ತಿದೆ ಹೊರತು ಎಸ್​ಟಿಪಿಗಳಿಂದ ನೀರು ಖರೀದಿಸುವ ಪ್ರಯತ್ನವಾಗಿಲ್ಲ. ಈ ಹಿಂದೆ ಬಿಬಿಎಂಪಿ ಉದ್ಯಾನವನಗಳಿಗೆ ಕಡಿಮೆ ದರದಲ್ಲಿ ನೀರು ನೀಡುವುದಾಗಿ ಜಲಮಂಡಳಿ ಹೇಳಿತ್ತಾದರೂ ಬಿಬಿಎಂಪಿ ಸ್ಪಂದಿಸಿರಲಿಲ್ಲ.ಕಾವೇರಿ ಐದನೇ ನಂತರದ ವಿಸ್ತರಣೆ ನಂತರದಲ್ಲಿ ಸಂಸ್ಕರಿಸಿದ ನೀರನ್ನು ಮರುಬಳಕೆ ಮಾಡದ ಹೊರತು ಯಾವ ದಾರಿಯೂ ಇಲ್ಲ. ಹೀಗಾಗಿ ಈಗಿನಿಂದಲೇ ಸಂಸ್ಕರಿಸಿದ ನೀರಿನ ಮರು ಬಳಕೆಗೆ ಒತ್ತು ದೊರೆಯಬೇಕಿದ್ದು, ಸ್ಥಳೀಯ ಪ್ರಾಧಿಕಾರಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಗಾಯನ ಸಮಾಜ ಮುಂಭಾಗ, ಸೌಥ್ ಎಂಡ್ ಸರ್ಕಲ್, ಕಿಮ್್ಸ, ಲಾಲ್​ಬಾಗ್ ಬಳಿ ಸೇರಿ ವೈಟ್​ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿಯೂ ಟ್ಯಾಮಕರ್ ಮೂಲಕ ಬೋರ್​ವೆಲ್ ನೀರು ಬಳಸಲಾಗುತ್ತಿದೆ.

ಉದ್ಯಾನವನಗಳಲ್ಲಿಯೂ ಇಲ್ಲ ಬಳಕೆ: ನಗರದಲ್ಲಿ ಬಿಬಿಎಂಪಿಯ 1251 ಉದ್ಯಾನವನಗಳಿದ್ದು, 860 ಉದ್ಯಾನವನಗಳು ಬೋರ್​ವೆಲ್​ಗಳನ್ನು ಹೊಂದಿವೆ. ಇವುಗಳ ಪೈಕಿ 300ಕ್ಕೂ ಅಧಿಕ ಬೋರ್​ವೆಲ್​ಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ನೀರು ದೊರೆಯದ ಕಾರಣ ಬಹುದಪಾಲು ಉದ್ಯಾನವನಗಳು ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದ್ದು, ಹಲವು ಕಡೆಗಳಲ್ಲಿ ಟ್ಯಾಂಕರ್​ಗಳ ಮೂಲಕ ವಾರಕ್ಕೆ ಒಂದು ಅಥವಾ ಎರಡು ಬಾರಿ ನೀರು ಪೂರೈಸಲಾಗುತ್ತದೆ. ಟ್ಯಾಂಕರ್​ಗಳಿಗಿಂತ ಕಡಿಮೆ ದರದಲ್ಲಿ ನೀರು ನೀಡಲು ಜಲಮಂಡಳಿ ಸಿದ್ಧವಿದ್ದರೂ ಬಿಬಿಎಂಪಿ ಖರೀದಿಗೆ ಆಸಕ್ತಿ ತೋರದಿರುವುದು ವಿಪರ್ಯಾಸವಾಗಿದೆ.

ಇನ್ನು 1,251 ಉದ್ಯಾನವನಗಳ ಪೈಕಿ 126 ಉದ್ಯಾನವನಗಳು ಮಾತ್ರವೇ ಮಳೆನೀರು ಕೊಯ್ಲು ವ್ಯವಸ್ಥೆ ಹೊಂದಿವೆ. ನಗರದಲ್ಲಿ ಮಳೆ ನೀರು ಕೊಯ್ಲು ಕೂಡ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಈ ಎಲ್ಲ ನಿರ್ಲಕ್ಷ್ಯಗಳಿಂದಾಗಿ ಬೆಂಗಳೂರು ನೀರಿ ವಿಚಾರದಲ್ಲಿ ಸಂಕಷ್ಟ ಎದುರಿಸುವಂತಾಗಿದೆ.

ಅಪಾರ್ಟ್​ವೆುಂಟ್​ಗಳಲ್ಲಿ ಎಸ್​ಟಿಪಿ ನೆಪಮಾತ್ರ

ಎಸ್​ಟಿಪಿಗಳನ್ನು ಸ್ಥಾಪಿಸಿದ ಅಪಾರ್ಟ್​ವೆುಂಟ್​ಗಳಿಗಳಷ್ಟೇ ಬಿಬಿಎಂಪಿ ಸ್ವಾಧೀನಾನುಭವ ಪತ್ರ ನೀಡುವ ಹಿನ್ನೆಲೆಯಲ್ಲಿ ನಗರದ ಹಲವು ಅಪಾರ್ಟ್​ವೆುಂಟ್​ಗಳಲ್ಲಿ ಎಸ್​ಟಿಪಿಗಳನ್ನು ಸ್ಥಾಪಿಸಲಾಗಿದ್ದರೂ ಹೆಚ್ಚಿನ ಎಸ್​ಟಿಪಿಗಳಲ್ಲಿ ನೀರು ಸಂಸ್ಕರಣೆ ಮಾಡಲಾಗುತ್ತಿದ್ದರೂ ಬಳಸಲಾಗುತ್ತಿಲ್ಲ. ಡೆವಲಪ್ಪರ್​ಗಳು ಬಳಕೆಗೆ ಸೂಕ್ತ ಅವಕಾಶ ಕಲ್ಪಿಸಿಲ್ಲ. ಹಾಗಾಗಿ ಇಲ್ಲಿಯೂ ಸಂಸ್ಕರಿತ ನೀರನ್ನು ಒಳಚರಂಡಿಗೆ ಬಿಡುತ್ತಿರುವುದು ಕಂಡು ಬಂದಿದೆ.

ನಗರದಲ್ಲಿನ ನೀರು ಸಂಸ್ಕರಣೆ ಚಿತ್ರಣ

ನಗರದ ಮೂರು ಪ್ರಮುಖ ಕಣಿವೆಗಳಾದ ಕೋರಮಂಗಲ ಮತ್ತು ಚೆಲ್ಲಘಟ್ಟ(ಕೆಎನ್​ಸಿ), ವೃಷಭಾವತಿ ಕಣಿವೆ(ವಿ-ವ್ಯಾಲಿ) ಮತ್ತು ಹೆಬ್ಬಾಳ ವ್ಯಾಲಿಗಳ ವ್ಯಾಪ್ತಿಯಲ್ಲಿ ಒಟ್ಟು 24 ಎಸ್​ಟಿಪಿಗಳಿವೆ. ಕೆಎನ್​ಸಿ ವ್ಯಾಲಿಯಿಂದ ಲಭ್ಯವಾಗುವ ನೀರನ್ನು ಕೋಲಾರ-ಚಿಕ್ಕಬಳ್ಳಾಪುರಗಳಲ್ಲಿ ಸರಬರಾಜು ಮಾಡಲಾಗುತ್ತಿದೆ. ನಗರದ ಮಧ್ಯಭಾಗ ದಲ್ಲಿರುವ ಎಸ್​ಟಿಪಿ ನೀರು ಪೂರ್ಣ ಪ್ರಮಾಣದಲ್ಲಿ ಬಳಕೆ ಆಗುತ್ತಿಲ್ಲ. ಕೆಎನ್​ಸಿ ವ್ಯಾಲಿ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣಗಳಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಪೂರೈಕೆ ಆರಂಭಗೊಂಡಿಲ್ಲ. ಎರಡು ಬಾರಿ ಸಂಸ್ಕರಿಸಿದ ನೀರನ್ನು ಉದ್ಯಾನವನಗಳಿಗೆ ಬಳಸಬಹುದಾಗಿದ್ದು, ಲಾಲ್​ಬಾಗ್, ಕಬ್ಬನ್​ಪಾರ್ಕ್ ವಿಚಾರದಲ್ಲಿ ಸಂಸ್ಕರಿಸಿದ ನೀರು ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ನಗರದ ಉದ್ಯಾನವನಗಳಿಗೂ ಸಂಸ್ಕರಿಸಿದ ನೀರನ್ನು ಬಳಸಬಹುದಾಗಿದೆ.

| ಅಭಯ್ ಮನಗೂಳಿ

2 Replies to “ಕೆರೆಯ ನೀರು ಮತ್ತೆ ಕೆರೆಗೆ: ಸಂಸ್ಕರಿಸಿದ ನೀರು ಮರುಬಳಕೆಗಿಲ್ಲ ಒತ್ತು!”

  1. ಬೋರ್ ವೆಲ್ ಮಾಡಿಸಲು ಕಾನೂನು,ರೈನ್ ಹಾರ್ವೆಸ್ಟ್ ಮಾಡಸಿದಿದ್ದರೆ ಕಾನೂನು ,sewage treatment plant ಮಾಡಿಸದಿದ್ದರೆ ಕಾನೂನು ಮುಂತಾದ ಕಾನೂನುಗಳು ಇರುವುದು
    ಸಾಮಾನ್ಯ ಜನಗಳಿಗೆ ಮಾತ್ರ .ಈ BBMP/BWSSB ಗಳಿಗೆ ಲಕ್ಷಗಟ್ಟಲೆ ಲೀಟರ್ ನೀರನ್ನು ಪೋಲು ಮಾಡುವ ವಿರುದ್ದ ಯಾವುದೇ ಕಾನೂನು ಇಲ್ಲವೇ?

  2. Laws are there but they àre under politicians boots. Occassionally it is implemented under courts pressure

Comments are closed.