ಬೆಂಗಳೂರು: ನಗರದಲ್ಲಿ ಖಾತಾ ಹೊಂದಿರದ ಅಂದಾಜು ಐದು ಲಕ್ಷಕ್ಕೂ ಅಧಿಕ ಸ್ವತ್ತುಗಳಿಗೆ ಹೊಸದಾಗಿ ಇ-ಖಾತಾ ಸೌಲಭ್ಯ ಒದಗಿಸಲು ಬಿಬಿಎಂಪಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಪ್ರತ್ಯೇಕ ವೆಬ್‌ಸೈಟ್ ರೂಪಿಸಿದ್ದು, ಇದರ ಮೂಲಕ ಅರ್ಹ ಸ್ವತ್ತುದಾರರಿಗೆ ಸೌಲಭ್ಯ ನೀಡುವ ಪ್ರಕ್ರಿಯೆ ಶೀಘ್ರವೇ ಚಾಲನೆ ನೀಡಲಾಗುತ್ತದೆ.
ಈ 5 ಲಕ್ಷ ಸ್ವತ್ತುಗಳು ಇಲ್ಲಿಯವರೆಗೆ ಯಾವುದೇ ಖಾತಾವಿಲ್ಲದೆ ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿ ವಹಿವಾಟು ನಡೆಸುತ್ತಿದ್ದು, ಅವುಗಳಲ್ಲಿ ಹಲವು ಸ್ವತ್ತುಗಳು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿವೆ. ಈಗ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಿರುವುದರಿಂದ ಖಾತಾ ಇಲ್ಲದವರಿಗೆ ಸಮಸ್ಯೆ ಎದುರಾಗಿತ್ತು. ಇಂತಹ ಸ್ವತ್ತುದಾರರು ನಗರದ ಕೋರ್ ಪ್ರದೇಶದಲ್ಲಿ ನೆಲೆನಿಂತಿದ್ದಾರೆ. ದಶಕಗಳಿಂದ ತಮ್ಮ ಮನೆತನದ ಸದಸ್ಯರೇ ಆಸ್ತಿ ಅನುಭವಿಸಿಕೊಂಡು ಬರುತ್ತಿದ್ದಾರೆ. ಹಲವು ಮೈಸೂರು ಅರಸರ ಆಡಳಿತದ ವೇಳೆ ಆಸ್ತಿಪತ್ರ ಪಡೆದವರೂ ಇದ್ದಾರೆ.
ದಾಖಲೆ ಸಲ್ಲಿಕೆ ಕಡ್ಡಾಯ:
ಪಾಲಿಕೆಯು ಆನ್‌ಲೈನ್ ವ್ಯವಸ್ಥೆಯನ್ನು ಜಾರಿ ಮಾಡಿದ್ದು, ನಾಗರಿಕರು ಹೊಸದಾಗಿ ಖಾತಾ ಪಡೆಯಲು ತಮ್ಮ ಮಾರಾಟ/ನೋಂದಣಿ ಪತ್ರ, ಆಧಾರ್, ಇಸಿ ಪ್ರಮಾಣಪತ್ರ, ಆಸ್ತಿ ಫೋಟೋ ಹಾಗೂ ಬೆಸ್ಕಾಂ ನೀಡಿರುವ ಗುರುತಿನ ಸಂಖ್ಯೆ ಸಲ್ಲಿಸಬೇಕಾಗುತ್ತದೆ. ಮಾರಾಟ/ನೋಂದಣಿ ಪತ್ರಕ್ಕೆ ಕನಿಷ್ಠ ಒಂದು ದಿನ ಮೊದಲು ಆಸ್ತಿಯ ಋಣಭಾರ ಪ್ರಮಾಣಪತ್ರ 2024ರ ಅ.31ರವರೆಗೆ ಅಥವಾ ನಂತರದವರೆಗೆ ಅನ್ವಯ. ಆನ್‌ಲೈನ್ ಮೂಲಕ ಅರ್ಜಿಯನ್ನು ಪಾಲಿಕೆಯ ಜಾಲತಾಣdಲ್ಲಿ ಸಲ್ಲಿಸಬಹುದಾಗಿದೆ.
ಒಂದು ವೇಳೆ ಈಗಾಗಲೇ ಸ್ವತ್ತಿಗಾಗಿ ಬಿಬಿಎಂಪಿಯಿಂದ ಪಡೆದಿರುವ ಕೈಬರಹ ಖಾತೆಗಾಗಿ ಇ-ಖಾತಾ ಪಡೆಯಲು ಬಯಸಿದ್ದಲ್ಲಿ ಅಂತಹ ಆಸ್ತಿದಾರರು ಹೊಸ ಖಾತಾ ಪಡಿಯಲು ಅರ್ಜಿ ಸಲ್ಲಿಸಬಾರದು. ತಪ್ಪಿದಲ್ಲಿ ಅಂತಹವವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.