ತೆರಿಗೆ ಸಂಗ್ರಹ ಗುರಿಮುಟ್ಟದ ಬಿಬಿಎಂಪಿ

ಬೆಂಗಳೂರು: ಆಸ್ತಿ ತೆರಿಗೆ ಸಂಗ್ರಹ ವಿಚಾರದಲ್ಲಿ ಬಿಬಿಎಂಪಿ ಮತ್ತೆ ಹಿಂದೆ ಬಿದ್ದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲೂ ನಿಗದಿತ ಗುರಿ ಮುಟ್ಟುವಲ್ಲಿ ವಿಫಲವಾಗಿದೆ. 3,100 ಕೋಟಿ ರೂ. ಸಂಗ್ರಹ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, 2,510 ಕೋಟಿ ರೂ. ತೆರಿಗೆ ಮಾತ್ರ ಸಂಗ್ರಹಿಸಲಾಗಿದೆ. ಇದರಿಂದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಹಣದ ಕೊರತೆ ಉಂಟಾಗುತ್ತಿದೆ.

ಪ್ರತಿ ಬಾರಿ ಬಜೆಟ್ ಮಂಡನೆ ನಂತರ ಪರಿಷ್ಕರಣೆ ಸಂದರ್ಭ ದಲ್ಲಿ ಬಜೆಟ್ ಗಾತ್ರವನ್ನು ಹೆಚ್ಚಿಸಲಾಗುತ್ತದೆ. ಅದಕ್ಕಾಗಿ ಆಸ್ತಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಲಾಗುತ್ತದೆ. ಇದು ಅವಾಸ್ತವಿಕವಾಗಿದ್ದು, ತೆರಿಗೆ ಸಂಗ್ರಹ ಸಾಮರ್ಥ್ಯಕ್ಕೆ ತಕ್ಕಂತೆ ಗುರಿ ನಿಗದಿ ಮಾಡಬೇಕು. ಅದರೆ, ಬಜೆಟ್ ಗಾತ್ರವನ್ನಾಧರಿಸಿ ಗುರಿ ನಿಗದಿ ಮಾಡುತ್ತಿರುವುದರಿಂದ ತೆರಿಗೆ ಸಂಗ್ರಹ ಪೂರ್ಣಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ.

ಆಸ್ತಿ ಸಂಖ್ಯೆ ಮಾತ್ರ ಹೆಚ್ಚಳ: ನಗರದಲ್ಲಿ ಜನಸಂಖ್ಯೆ ಹಾಗೂ ಆಸ್ತಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಳೆದ 2017-18ನೇ ಸಾಲಿನಲ್ಲಿ 1.58 ಲಕ್ಷ ಆಸ್ತಿಗಳು ಹೊಸದಾಗಿ ತೆರಿಗೆ ವ್ಯಾಪ್ತಿಗೆ ಸೇರಿದ್ದವು. ಈ ವರ್ಷ ಸುಮಾರು 80 ಸಾವಿರ ಆಸ್ತಿಗಳು ತೆರಿಗೆ ಪಾವತಿ ಆರಂಭಿಸಿವೆ. ಆಸ್ತಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ತೆರಿಗೆ ಸಂಗ್ರಹಣೆ ಪ್ರಮಾಣ ಮಾತ್ರ ಹೆಚ್ಚಾಗುತ್ತಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣ ಎಂಬ ಆರೋಪಗಳಿವೆ.

ಈ ತಿಂಗಳು ತೆರಿಗೆ ಪಾವತಿಸಿದರೆ ಶೇ. 5 ರಿಯಾಯಿತಿ ಲಭ್ಯ ಪ್ರತಿ ವರ್ಷದಂತೆ ಏಪ್ರಿಲ್​ನಲ್ಲಿ ಆಸ್ತಿ ತೆರಿಗೆ ಪಾವತಿಸುವವರಿಗೆ ಶೇ. 5 ತೆರಿಗೆ ರಿಯಾಯಿತಿಯನ್ನು ನೀಡಲಾಗುತ್ತದೆ.

ಹೊಸ ಆರ್ಥಿಕ ವರ್ಷ ಆರಂಭದ ಹಿನ್ನೆಲೆಯಲ್ಲಿ ಈ ಬಾರಿಯೂ ಅದನ್ನು ಮುಂದುವರಿಸ ಲಾಗುತ್ತಿದೆ. ಏ. 1ರಿಂದ 30ರವರೆಗೆ ಆಸ್ತಿ ತೆರಿಗೆಯನ್ನು ಪಾವತಿಸುವವರಿಗೆ ಶೇ. 5 ರಿಯಾಯಿತಿ ಸಿಗಲಿದೆ.