ಹುತಾತ್ಮ ಯೋಧ ಗುರು ಕುಟುಂಬಕ್ಕೆ ಬಿಬಿಎಂಪಿ ಸದಸ್ಯರ ಒಂದು ತಿಂಗಳ ಗೌರವಧನ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾಗಿದ್ದ ಮಂಡ್ಯದ ಯೋಧ ಗುರು ಅವರ ಕುಟುಂಬಕ್ಕೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸದಸ್ಯರು ಒಂದು ತಿಂಗಳ ಗೌರವಧನ ನೀಡಲು ನಿರ್ಧರಿಸಿದ್ದಾರೆ ಮತ್ತು ಬಿಬಿಎಂಪಿ ನೌಕರರ ಸಂಘ 5 ಲಕ್ಷ ರೂ. ಪರಿಹಾರ ನೀಡಿದೆ.

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಗುರು ತಂದೆ ಹೊನ್ನಯ್ಯ ಅವರಿಗೆ ಬಿಬಿಎಂಪಿ ನೌಕರರ ಸಂಘದಿಂದ 5 ಲಕ್ಷ ರೂ. ಚೆಕ್​ ವಿತರಿಸಲಾಯಿತು. ಬಿಬಿಎಂಪಿ ಸದಸ್ಯರ ಒಂದು ತಿಂಗಳ ಗೌರವಧನ 20 ಲಕ್ಷ ರೂ. ಅನ್ನು ಗುರು ಕುಟುಂಬಸ್ಥರ ಬ್ಯಾಂಕ್​ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ.

ಕಣ್ಣೀರಿಟ್ಟ ಗುರು ತಾಯಿ

ಪರಿಹಾರ ವಿತರಣೆ ವೇಳೆ ಗುರು ತಾಯಿ ಚಿಕ್ತಾಯಮ್ಮ ಕಣ್ಣೀರು ಹಾಕಿದ್ದು, ನೀವೆಲ್ಲರೂ ನಮಗೆ ಸಹಾಯ ಮಾಡುತ್ತಿರುವುದು ಸಂತೋಷ ತಂದಿದೆ. ಆದರೆ ಒಂದು ವಾರ ಅನ್ನ ತಿನ್ನೋಕೂ ಆಗದ ಸ್ಥಿತಿ ಇತ್ತು. ಮನೆಯಿಂದ ಆಚೆ ಬರುತ್ತಲೇ ಇರಲಿಲ್ಲ. ಇದರ ನಡುವೆಯೇ ಹಣದ ವಿಚಾರವಾಗಿ ಅತ್ತೆ, ಸೊಸೆ ಕಿತ್ತಾಡಿಕೊಂಡಿದ್ದಾರೆ. ಇದೇ ವಿಚಾರವಾಗಿ ಪೊಲೀಸ್​ ಸ್ಟೇಷನ್​ಗೆ ಹೋಗಿದ್ದರು. ಸಚಿವ ಡಿ.ಸಿ. ತಮ್ಮಣ್ಣ ಬಂದು ಎಲ್ಲಾ ಸರಿ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ನನ್ನ ಮಗ ಸತ್ತಿರುವುದು ಒಂದು ಸಂಕಟವಾದರೆ ಸುಳ್ಳು ಸುದ್ದಿ ಹಬ್ಬಿಸಿರುವುದು ಮತ್ತೊಂದು ಕಡೆ ನಮಗೆ ನೋವುಂಟು ಮಾಡುತ್ತಿದೆ ಎಂದು ಗುರು ತಾಯಿ ಕಣ್ಣಿರು ಹಾಕಿದ್ದಾರೆ.

ಗುರು ಪತ್ನಿ ನನ್ನ ಸ್ವಂತ ತಮ್ಮನ ಮಗಳು, ಆಕೆಯನ್ನು ನಾನು ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದೇನೆ. ಪರಿಹಾರದ ಅಕೌಂಟ್​ ಗುರು ತಮ್ಮ ನೋಡಿಕೊಳ್ಳುತ್ತಾನೆ. ಪರಿಹಾರವಾಗಿ ಅಷ್ಟು ಕೋಟಿ ಬಂದಿದೆ, ಇಷ್ಟು ಕೋಟಿ ಬಂದಿದೆ ಎಂದು ಕೆಲವು ಹೇಳಿಕೊಳ್ಳುತ್ತಿದ್ದಾರೆ. ನಮಗೆ ಯಾವುದೇ ದುಡ್ಡು ಬೇಡ, ನಮ್ಮನ್ನು ನೆಮ್ಮದಿಯಾಗಿರಲು ಬಿಟ್ಟರೆ ಸಾಕು ಎಂದು ಚಿಕ್ತಾಯಮ್ಮ ಮನವಿ ಮಾಡಿದರು.