More

  ಅಂತೂ ನಡೆದ ಸ್ಥಾಯಿ ಸಮಿತಿ ಚುನಾವಣೆ 132 ಸ್ಥಾನಗಳಿಗೆ 131 ಸದಸ್ಯರ ಅವಿರೋಧ ಆಯ್ಕೆ 

  ಬೆಂಗಳೂರು:  ಪಾಲಿಕೆ ಸದಸ್ಯರ ಕಣ್ಣೀರು, ಆಕ್ರೋಶ, ಅಸಮಾಧಾನ, ಒತ್ತಾಯ, ಭರವಸೆ ಹಾಗೂ ಮನವೊಲಿಸುವ ದೃಶ್ಯಗಳ ನಡುವೆಯೇ ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

  ಮೂರು ತಿಂಗಳಲ್ಲಿ 4ನೇ ಬಾರಿಗೆ ಶನಿವಾರ ಸ್ಥಾಯಿ ಸಮಿತಿ ಚುನಾವಣೆಗೆ ವೇದಿಕೆ ಅಣಿ ಗೊಂಡಿತ್ತು. ವಿವಿಧ ಕಾರಣಗಳಿಗಾಗಿ ಮೂರು ಬಾರಿ ಮುಂದೂಡಿಕೆಯಾಗಿದ್ದ ಚುನಾವಣೆ ನಾಲ್ಕನೇ ಬಾರಿಗೂ ಮುಂದೂಡಿಕೆಯಾಗುವ ಆತಂಕವಿತ್ತು. ಆದರೆ, ಕೊನೆಗೂ ಚುನಾವಣೆ ನಡೆಯಿತು. ನಗು, ಅಳು, ಹಾಡು ಹಾಗೂ ಅಸಮಾಧಾನಗಳಿಗೆ ಕೆಂಪೇಗೌಡ ಸಭಾಂಗಣ ಸಾಕ್ಷಿಯಾಯಿತು.

  ಪ್ರಾದೇಶಿಕ ಆಯುಕ್ತ ಡಾ. ಎನ್.ವಿ. ಪ್ರಸಾದ್ ಅಧ್ಯಕ್ಷತೆಯಲ್ಲಿ ವಿಶೇಷ ಆಯುಕ್ತ ಅನ್ಬುಕುಮಾರ್, ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್​ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ನೇತೃತ್ವದ ತಂಡ ಚುನಾವಣೆ ನಡೆಸಿಕೊಟ್ಟಿತು. ಸಚಿವ ಆರ್. ಅಶೋಕ್, ಸಂಸದ ಪಿ.ಸಿ. ಮೋಹನ್, ಶಾಸಕರಾದ ರಾಮಲಿಂಗಾರೆಡ್ಡಿ, ಕೆ.ಗೋಪಾಲಯ್ಯ, ಸೌಮ್ಯಾರೆಡ್ಡಿ, ಸತೀಶ್ ರೆಡ್ಡಿ, ವಿಧಾನಪರಿಷತ್ ಸದಸ್ಯೆ ಜಯಮಾಲಾ ಮತ್ತಿತರರಿದ್ದರು.

  ವಾರ್ಡ್​ವುಟ್ಟದ ಸಮಿತಿಗೆ 15 ನಾಮಪತ್ರ

  ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಗೆ ಒಟ್ಟು 15 ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಆದರೆ ಜರಗನಹಳ್ಳಿ ವಾರ್ಡ್​ನ ಬಿ.ಎಂ. ಶೋಭಾ ಮುನಿರಾಜು ಚುನಾವಣೆಗೂ ಮುನ್ನವೇ ನಾಮಪತ್ರ ವಾಪಸ್ ಪಡೆದಿದ್ದರು. ನಂತರ ನಾಮಪತ್ರ ಹಿಂಪಡೆಯಲು 5 ನಿಮಿಷ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಚಿಕ್ಕಪೇಟೆ ವಾರ್ಡ್​ನ ಲೀಲಾ ಶಿವಕುಮಾರ್, ಅಜಾದ್​ನಗರ ವಾರ್ಡ್​ನ ಸುಜಾತಾ ನಾಮಪತ್ರ ಹಿಂಪಡೆದರು. ಶಾಸಕ ಸತೀಶ್​ರೆಡ್ಡಿ, ಸದಸ್ಯ ಉಮೇಶ್ ಶೆಟ್ಟಿ, ಉಪಮೇಯರ್ ರಾಮಮೋಹನರಾಜು ಅವರ ಒತ್ತಡಕ್ಕೆ ಮಣಿದ ಅಟ್ಟೂರು ವಾರ್ಡ್​ನ ನೇತ್ರಾ ಪಲ್ಲವಿ ಒಲ್ಲದ ಮನಸ್ಸಿನಿಂದ ನಾಮಪತ್ರ ವಾಪಸ್ ಪಡೆದರು.

  178 ಸದಸ್ಯರು ಭಾಗಿ

  ಕಳೆದೆರಡು ಬಾರಿ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಹಾಗೂ ಕೋರಂ ಕೊರತೆಯಿಂದ ಚುನಾವಣೆ ಮುಂದೂಡಲ್ಪಟ್ಟಿತ್ತು. ಶ್ರೀ ವಿಶ್ವೇಶತೀರ್ಥರು ಕೃಷ್ಣೆೈಕ್ಯರಾಗಿದ್ದು ಮೂರನೇ ಬಾರಿ ಮುಂದೂಡಿಕೆಗೆ ಕಾರಣವಾಗಿತ್ತು. ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿದ್ದ 259 ಸದಸ್ಯರಲ್ಲಿ 178 ಜನರು ಪಾಲ್ಗೊಂಡಿದ್ದರು. 11 ಸ್ಥಾಯಿ ಸಮಿತಿಗಳಿಗೆ ತಲಾ 11 ಸದಸ್ಯರನ್ನು ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಗೆ 10 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

  ಏಳು ತಿಂಗಳ ಆಡಳಿತಾವಧಿ

  ಈಗ ಆಯ್ಕೆಯಾಗಿರುವ ಸಮಿತಿ ಸದಸ್ಯರು ಏಳು ತಿಂಗಳು ಮಾತ್ರ ಅಧಿಕಾರ ನಡೆಸಲಿದ್ದಾರೆ. ಮೇಯರ್ ಆಯ್ಕೆ ಅವಧಿಯಲ್ಲಿಯೇ ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಯಬೇಕಿತ್ತು. ಆದರೆ, 4 ತಿಂಗಳು ತಡವಾಯಿತು. ಹಾಗಾಗಿ ಆಗಸ್ಟ್ ಅಂತ್ಯಕ್ಕೆ ಮೇಯರ್ ಆಡಳಿತಾವಧಿ ಮುಗಿಯುತ್ತಲೇ ಇವರೆಲ್ಲರ ಅಧಿಕಾರವೂ ಅಂತ್ಯವಾಗಲಿದೆ. ಸೆಪ್ಟೆಂಬರ್​ನಲ್ಲಿ ಪಾಲಿಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

  ಹಾಡಿನ ಸಮಾಧಾನ

  ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡದೆ, ಕೊಟ್ಟ ಮಾತನ್ನು ತಪು್ಪತ್ತಿದ್ದೀರಿ ಎಂದು ಸಚಿವ ಆರ್. ಅಶೋಕ್ ಎದುರು ಎಚ್.ಎಸ್.ಆರ್. ಲೇಔಟ್​ನ ಗುರುಮೂರ್ತಿ ರೆಡ್ಡಿ, ದೇವಸಂದ್ರ ವಾರ್ಡ್​ನ ಎಂ.ಎನ್. ಶ್ರೀಕಾಂತ್ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ‘ಆ ಕರ್ಣನಂತೆ ನೀ ದಾನಿಯಾದೆ’ ಎಂದು ಹಾಡು ಹಾಡಿ, ಇನ್ನೊಬ್ಬರಿಗೆ ಅವಕಾಶ ಮಾಡಿಕೊಡುವಂತೆ ಸಚಿವರು ಸಮಾಧಾನ ಮಾಡಿದರು. ಪಕ್ಷೇತರ ಅಭ್ಯರ್ಥಿ ಎನ್. ರಮೇಶ್ ನನ್ನ ವಾರ್ಡ್ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ನೀಡಬೇಕು. ಮುಂದಿನ ಬಾರಿ ಬಿಜೆಪಿ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

  ಒಟ್ಟು 143 ನಾಮಪತ್ರಗಳು ಸಲ್ಲಿಕೆ

  ಬೆಳಿಗ್ಗೆ 8 ಗಂಟೆಯಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಬೆಳಗ್ಗೆ 9.30ರವರೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಸೇರಿ ಒಟ್ಟು 143 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಒಟ್ಟು 12 ಸ್ಥಾಯಿ ಸಮಿತಿಗಳಿಗೆ ತಲಾ 11 ಸದಸ್ಯರಂತೆ 132 ಸದಸ್ಯರನ್ನು ಆಯ್ಕೆ ಮಾಡಬೇಕಿತ್ತು. ನಗರ ಯೋಜನೆ ಮತ್ತು ಅಭಿವೃದ್ಧಿ, ಬೃಹತ್ ಸಾರ್ವಜನಿಕ ಕಾಮಗಾರಿ, ಶಿಕ್ಷಣ, ಸಾಮಾಜಿಕ ನ್ಯಾಯ, ಮಾರುಕಟ್ಟೆ ಸೇರಿ ಐದು ಸ್ಥಾಯಿ ಸಮಿತಿಗಳಿಗೆ 11 ಸದಸ್ಯರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು.

  ಲೆಕ್ಕಪತ್ರ ಸಮಿತಿಗೆ 10 ಸದಸ್ಯರು

  ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಒಟ್ಟು 12 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಆದರೆ ಮತಕ್ಕೆ ಹಾಕುವ ಮುನ್ನ ಓಕಳಿಪುರ ವಾರ್ಡ್​ನ ವಿ. ಶಿವಪ್ರಕಾಶ್, ಸಿಂಗಸಂದ್ರ ವಾರ್ಡ್​ನ ಶಾಂತಬಾಬು ನಾಮಪತ್ರ ಹಿಂಪಡೆದರು. ಹಾಗಾಗಿ ಕಣದಲ್ಲಿ ಉಳಿದಿದ್ದ 10 ಮಂದಿಯನ್ನು ಸಮಿತಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಒಂದು ಸ್ಥಾನ ಖಾಲಿ ಉಳಿಯಿತು. ಆದರೆ, ಮುಂದಿನ ದಿನಗಳಲ್ಲಿ ಈ ಸ್ಥಾನವನ್ನು ಭರ್ತಿ ಮಾಡಲು ಅವಕಾಶವಿದೆ.

  ಕಣ್ಣೀರು ಹಾಕಿದ ಮಹಾಲಕ್ಷ್ಮೀ

  ಮೇಯರ್ ಚುನಾವಣೆ ವೇಳೆ ಉಪಮೇಯರ್ ಸ್ಥಾನದ ಆಕಾಂಕ್ಷಿಯಾಗಿದ್ದ ವಿಜಯನಗರ ವಾರ್ಡ್​ನ ಮಹಾಲಕ್ಷ್ಮೀಗೆ ಸಚಿವ ಸೋಮಣ್ಣ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಆಮಿಷ ಒಡ್ಡಿದ್ದರು. ಆದರೆ, ಸ್ಥಾಯಿ ಸಮಿತಿ ಚುನಾವಣೆಗೆ ಸೋಮಣ್ಣ ಗೈರಾಗಿದ್ದರು. ನನಗೆ ಮೋಸವಾಗಿದೆ ಎಂದು ಮಹಾಲಕ್ಷ್ಮೀ ಕಣ್ಣೀರು ಹಾಕಿದರು. ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿಗೆ ಸಲ್ಲಿಸಿದ್ದ ನಾಮಪತ್ರ ಹಿಂಪಡೆಯುವಾಗ ನೇತ್ರಾಪಲ್ಲವಿ ಕಣ್ಣೀರಿಟ್ಟರು. ತಮ್ಮ ಕ್ಷೇತ್ರದವರಿಗೆ ಸ್ಥಾಯಿಸಮಿತಿ ಅಧ್ಯಕ್ಷ ಸ್ಥಾನ ಸಿಗುತ್ತಿಲ್ಲ ಎಂದು ಸತೀಶ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಮಂಜುಳಾ ನಾರಾಯಣಸ್ವಾಮಿ ಕಣ್ಣೀರು ಹಾಕಿದರು.

  ಒಂದು ವಾರದಲ್ಲಿ ಅಧ್ಯಕ್ಷರ ಆಯ್ಕೆ ಮಾಡಲಾಗು ವುದು. ಪಕ್ಷೇತರರು, ಜೆಡಿಎಸ್ ಹಾಗೂ ಕಾಂಗ್ರೆಸ್​ನಿಂದ ಬಂದವರಿಗೂ ಮೋಸವಾಗದಂತೆ ಎಚ್ಚರಿಕೆ ವಹಿಸಲಾಗುವುದು.

  | ಮುನೀಂದ್ರಕುಮಾರ್ ಬಿಬಿಎಂಪಿ ಆಡಳಿತ ಪಕ್ಷದ ನಾಯಕ

  ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಯಲ್ಲಿ ಮೂಲ ಮತ್ತು ವಲಸಿಗರು ಎಂದು ಭೇದ ಮಾಡದೆ ಎಲ್ಲರಿಗೂ ಅವಕಾಶ ನೀಡಲಾಗುವುದು.

  | ಆರ್. ಅಶೋಕ್ ಕಂದಾಯ ಸಚಿವ 

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts