ಆರ್.ತುಳಸಿಕುಮಾರ್
ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಕ್ಕೆ (ಜಿಬಿಜಿಬಿ) ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ ಒಪ್ಪಿಗೆ ದೊರೆತ ಬೆನ್ನಲ್ಲೇ, ಬಿಬಿಎಂಪಿ ಬಜೆಟ್ ಮಂಡಿಸಲು ದಿನಗಣನೆ ಆರಂಭವಾಗಿದೆ. 2025-26ನೇ ಸಾಲಿನ ಬಜೆಟ್ ಇದೇ 27ರಂದು ಮಂಡನಯಾಗಲಿದೆ. ಈಗಾಗಲೇ ಅಧಿಕಾರಿ ಮಟ್ಟದಲ್ಲಿ ಪೂರ್ವಭಾವಿ ಸುತ್ತಿನ ಹಲವು ಸಭೆಗಳು ನಡೆದು ಒಂದು ಹಂತಕ್ಕೆ ಆಯವ್ಯಯ ರೂಪಿಸಲಾಗಿದೆ.
ಮುಂದಿನ ಸೋಮವಾರ (ಮಾ.24) ನಗರ ಪ್ರತಿನಿಧಿಸುವ ಶಾಸಕರೊಂದಿಗೆ ಡಿಸಿಎಂ ಸಭೆ ನಡೆಸಿ, ಸಲಹೆ ಸೂಚನೆ ಪಡೆಯಲಿದ್ದಾರೆ. ಆ ಬಳಿಕ ಬಜೆಟ್ ಸಿದ್ಧಪಡಿಸಿ 27ರಂದು ಆಯವ್ಯಯ ಮಂಡಿಸಲಾಗುವುದು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಈ ಬಾರಿ ಅನುಷ್ಠಾನಯೋಗ್ಯ ಕಾಮಗಾರಿಗಳ ಸೇರ್ಪಡೆಗೆ ಆದ್ಯತೆ ಸಿಗಲಿದ್ದು, ಪ್ರಮುಖ ಯೋಜನೆಗಳನ್ನು ಸೇರ್ಪಡೆಗೊಳಿಸಲು ಅಧಿಕಾರಿ ವರ್ಗ ಕಸರತ್ತು ನಡೆಸಿದೆ. ಈಗಾಗಲೇ ಪಾಲಿಕೆಯ ಕೆಳ ಹಂತದಿಂದ ಮಾಹಿತಿ ಕ್ರೋಡೀಕರಿಸಿ ಆಯವ್ಯಯ ಸಿದ್ಧಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ವಲಯ ಮಟ್ಟದಿಂದಲೂ ಪ್ರಮುಖ ಕಾಮಗಾರಿಗಳ ಪಟ್ಟಿ ತರಿಸಿಕೊಂಡು ಅವುಗಳನ್ನು ಪರಾಮರ್ಶೆಗೆ ಒಳಪಡಿಸಿ ಕರಡು ಬಜೆಟ್‌ಗೆ ಸೇರಿಸಲಾಗಿದೆ. ಇದನ್ನಾಧರಿಸಿ ಪಾಲಿಕೆಯ ಮುಖ್ಯ ಆಯುಕ್ತರು ವಿವಿಧ ವಿಭಾಗಗಳ ಮುಖ್ಯಸ್ಥರೊಂದಿಗೆ ನಾಲ್ಕೈದು ಬಾರಿ ಸಮಾಲೋಚನೆ ನಡೆಸಿದ್ದಾರೆ. ಮುಖ್ಯವಾಗಿ ಮೂಲಸೌಕರ್ಯಕ್ಕೆ ಒತ್ತು ನೀಡುವ ಹಿನ್ನೆಲೆಯಲ್ಲಿ ಇಡೀ ಪಾಲಿಕೆಗೆ ಅನ್ವಯವಾಗುವ ಕಾಮಗಾರಿಗಳನ್ನು ಸೇರ್ಪಡೆಗೊಳಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚಿಸಿದ್ದು, ಆ ಪ್ರಕಾರವಾಗಿಯೇ ಯೋಜನೆಗಳನ್ನು ಅಂತಿಮಗೊಳಿಸಲಾಗುತ್ತಿದೆ.
ನಗರದಲ್ಲಿ ಮೂಲಸೌಕರ್ಯ ಕೊರತೆ ನಿವಾರಿಸುವಂತೆ ಸಾರ್ವಜನಿಕರು ಪಾಲಿಕೆ ಹಾಗೂ ಸರ್ಕಾರಕ್ಕೆ ಆಗ್ರಹಿಸುತ್ತಲೇ ಬಂದಿದ್ದಾರೆ. ವಿವಿಧ ಕಾರಣಗಳಿಂದ ಕೆಲವೊಂದನ್ನು ಹೊರತುಪಡಿಸಿ ಉಳಿದ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಇನ್ನೊಂದಿಷ್ಟು ಅನುದಾನದ ಕೊರತೆ ಕಾರಣ ವಿಳಂಬವಾಗುತ್ತಿವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿ ವರ್ಗವು ಕಾಲಮಿತಿಯೊಳಗೆ ಪೂರ್ಣಗೊಳಿಸಬಹುದಾದ ಕಾರ್ಯಕ್ರಮಗಳನ್ನು ಮಾತ್ರ ಬಜೆಟ್‌ನಲ್ಲಿ ಅಡಕಗೊಳಿಸಲು ಮುಂದಾಗಿದ್ದಾರೆ.
ಮೂಸೌಕರ್ಯಕ್ಕೆ ಪ್ರಥಮ ಆದ್ಯತೆ:
ರಾಜಧಾನಿ ಅಭಿವೃದ್ಧಿಗೆ ಸಂಬಂಧಿಸಿ ಬಿಬಿಎಂಪಿಯು ಹಲವು ಯೋಜನೆಗಳನ್ನು ಈಗಾಗಲೇ ಘೋಷಿಸಿದ್ದರೂ, ಸೂಕ್ತ ಮೇಲ್ವಿಚಾರಣೆ ಹಾಗೂ ಹಣದ ಅಭಾವದಿಂದ ಟೇಕ್ ಆಫ್ ಆಗಿಲ್ಲ. ಪ್ರತಿ ವರ್ಷ ರಾಜ್ಯ ಸರ್ಕಾರ ಪಾಲಿಕೆಗೆ 3 ಸಾವಿರ ಕೋಟಿ ರೂ. ಅನುದಾನ ನೀಡುತ್ತಿತ್ತು. 2025-26ನೇ ಸಾಲಿಗೆ 7 ಸಾವಿರ ಕೋಟಿ ರೂ. ಬಿಡುಗಡೆ ಮಾಡುವ ಭರವಸೆ ದೊರೆತಿದೆ. ಸರ್ಕಾರದ ಬೆಂಬಲ ದೊರೆತ ಹಿನ್ನೆಲೆ ಪಾಲಿಕೆಯಿಂದಲೂ ಇಷ್ಟೇ ಮೊತ್ತದ ಹಣವನ್ನು ಮೂಲಸೌಕರ್ಯಕ್ಕಾಗಿ ಮೀಸಲಿರಿಸಲು ನಿರ್ಧರಿಸಲಾಗಿದೆ. ಜತೆಗೆ ನಗರದ ಸಂಚಾರ ಸಿಕ್ಕುಗೆ ಪರಿಹಾರ ಕಂಡುಕೊಳ್ಳಲು ಸುರಂಗ ಮಾರ್ಗ, ಡಬಲ್ ಡೆಕ್ಕರ್ ರಸ್ತೆ, ಮೇಲ್ಸೇತುವೆ/ಕೆಳಸೇತುವೆ ಒಳಗೊಂಡ 20 ಕಾರಿಡಾರ್‌ಗಳನ್ನು ನಿರ್ಮಿಸಲು 54,964 ಕೋಟಿ ರೂ. ಮೊತ್ತದ ನೀಲಿನಕ್ಷೆ ರೂಪಿಸಲಾಗಿದೆ. ಇವುಗಳಲ್ಲಿ ಅರ್ಧದಷ್ಟನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಿ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ.
ಬೃಹತ್ ಯೋಜನೆಗಳ ಜತೆಗೆ ಶಿಕ್ಷಣ, ಆರೋಗ್ಯ, ಪರಿಸರ, ಜಲಭದ್ರತೆಗಾಗಿ ರೂಪಿಸಿರುವ ಯೋಜನೆಗಳು ಆಯವ್ಯಯದಲ್ಲಿ ಸ್ಥಾನ ಪಡೆಯಲಿವೆ. ನಾಲ್ಕೈದು ವರ್ಷದಿಂದ ಕಡತದಲ್ಲೇ ಉಳಿದಿರುವ ಮಳೆನೀರುಗಾಲುವೆಗಳ ಪುನರುಜ್ಜೀವನ ಯೋಜನೆಗೆ ವಿಶ್ವಬ್ಯಾಂಕ್ ಅನುದಾನ ನೀಡಲು ಮುಂದೆ ಬಂದಿರುವುದರಿಂದ ಇದರ ಕಾಮಗಾರಿಗೆ ಹಣ ಮೀಸಲಿರಿಸಲಾಗುತ್ತದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಕಾಮಗಾರಿಗಳಿಗೆ ಮಣೆ:
ಬೆಂಗಳೂರು ಅಭಿವೃದ್ಧಿ ಖಾತೆಯನ್ನೂ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಕನಸಿನ ಕೂಸಾದ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯನ್ನು ಜಾರಿಗೊಳಿಸಲು ಆದ್ಯತೆ ನೀಡಿದ್ದಾರೆ. ಇದರಡಿ ವಿವಿಧ ಯೋಜನೆಗಳ ಗುಚ್ಛವನ್ನು ರೂಪಿಸಿ ಅವುಗಳ ಜಾರಿಗಾಗಿ ಸರ್ಕಾರ ಹಾಗೂ ಬಿಬಿಎಂಪಿಯಿಂದ ಅನುದಾನ ನಿಗದಿಗೊಳಿಸುವಲ್ಲಿ ನಿರತರಾಗಿದ್ದಾರೆ. 2024-25ನೇ ಸಾಲಿನ ಪಾಲಿಕೆ ಬಜೆಟ್‌ನಲ್ಲಿ ಮೊದಲ ಬಾರಿಗೆ ಬ್ರ್ಯಾಂಡ್ ಬೆಂಗಳೂರು ಯೋಜನೆಗಳಿಗೆ ದಾಖಲೆಯ 1,580 ಕೋಟಿ ರೂ. ನಿಗದಿಯಾಗಿತ್ತು. ಈ ಮೊತ್ತವನ್ನು ಸರ್ಕಾರ 1,800 ಕೋಟಿ ರೂ.ಗೆ ಹೆಚ್ಚಿಸಿ 21 ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಕಾಮಗಾರಿಗಳು ಇನ್ನೂ ಪೂರ್ಣವಾಗಿ ಜಾರಿಗೆ ಬಾರದ ಕಾರಣ ಅವುಗಳನ್ನು ಈ ಬಾರಿ ಅನುಷ್ಠಾನಿಸಲು ಒತ್ತು ನೀಡಲಾಗುತ್ತದೆ. ಜತೆಗೆ ಹೊಸ ಬಜೆಟ್‌ನಲ್ಲಿ ಬ್ರ್ಯಾಂಡ್ ಕಾರ್ಯಕ್ರಮಗಳಿಗಾಗಿ 3 ಸಾವಿರ ಕೋಟಿ ರೂ. ಮೀಸಲಿಡುವ ಸಾಧ್ಯತೆ ಇದೆ.
ಹಿರಿಯ ಅಧಿಕಾರಿಗಳಿಗೆ ಹೊಣೆ:
ಬೃಹತ್ ಯೋಜನೆಗಳು ದೊಡ್ಡ ಮೊತ್ತವನ್ನು ಒಳಗೊಂಡಿದ್ದು, ಅವುಗಳ ಜಾರಿಗೆ ನುರಿತ ಹಾಗೂ ತಜ್ಞತೆ ಉಳ್ಳವರ ಅಗತ್ಯವಿದೆ. ಸರ್ಕಾರ ಕೂಡ ಇಂತಹ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಪಾಲಿಕೆಗೆ ತಾಕೀತು ಮಾಡಿರುವುದರಿಂದ ವಿವಿಧ ಯೋಜನೆಗಳನ್ನು ಹಿರಿಯ ಅಧಿಕಾರಿ ನಿಗಾದಲ್ಲಿ ಮುಂದುವರಿಸಲು ತೀರ್ಮಾನಿಸಲಾಗಿದೆ. ಜತೆಗೆ ವಿಶೇಷ ಆಯುಕ್ತರು ಹಾಗೂ ವಲಯಗಳ ಮುಖ್ಯಸ್ಥರ ಮೇಲ್ವಿಚಾರಣೆಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಡೆಡ್‌ಲೈನ್ ನೀಡಲು ಚಿಂತನೆ ನಡೆದಿದೆ.
ಯಾವ ಕಾರ್ಯಕ್ರಮಗಳ ಸೇರ್ಪಡೆ ಸಾಧ್ಯತೆ:
* ಬೃಹತ್ ಯೋಜನೆಗಳ ಜಾರಿಗೆ ವಿಶೇಷ ಯೋಜನಾ ವಾಹಕ (ಎಸ್‌ಪಿವಿ) ಸ್ಥಾಪನೆ
* ರಸ್ತೆ ಮೂಲಸೌಕರ್ಯ ಹೆಚ್ಚಿಸುವ ವಿವಿಧ ಕಾರಿಡಾರ್ ಯೋಜನೆಗಳು
* ಆರ್ಟೀರಿಯಲ್/ಸಬ್ ಆರ್ಟೀರಿಯಲ್ ರಸ್ತೆ ಜಾಲ ಅಭಿವೃದ್ಧಿ
* ಹಾಲಿ ವೈಟ್ ಟಾಪಿಂಗ್ ಯೋಜನೆಯ ಮುಂದುವರಿದ ಭಾಗ
* ಸುರಂಗ ಮಾರ್ಗ ನಿರ್ಮಾಣಕ್ಕೆ ಹೆಚ್ಚುವರಿ ಮೊತ್ತ ನಿಗದಿ
* ಉದ್ಯಾನ, ಕೆರೆಗಳ ಪುನರುಜ್ಜೀವನಕ್ಕೆ ಹಿಂದಿನ ಸಾಲಿಗಿಂತ ದುಪ್ಪಟ್ಟು ಹಣ
* ಮಳೆನೀರುಗಾಲುವೆಗಳ ಪುನಶ್ಚೇತನ ಕಾರ್ಯಕ್ಕೆ ಪಾಲಿಕೆ ಪಾಲಿನ ಹಣ ನಿಗದಿ
* ಪಾಲಿಕೆ ಆಸ್ಪತ್ರೆಗಳ ಮೇಲ್ದರ್ಜೆ, ಹೊಸ ಸೌಲಭ್ಯಗಳ ಅನುಷ್ಠಾನ
* ಹೊಸ ವಲಯಗಳಲ್ಲಿ ರಸ್ತೆಗಳ ನಿರ್ಮಾಣ, ಪಾಲಿಕೆ ಕಟ್ಟಡಗಳ ನಿರ್ಮಾಣ
* ಕಲ್ಯಾಣ ಕಾರ್ಯಕ್ರಮಗಳಲ್ಲಿ ಪರಿಶಿಷ್ಟರಿಗಾಗಿ ಹೊಸ ಯೋಜನೆ