More

    ಮತ್ತೆ ಜಾಹೀರಾತು ದಾಂಗುಡಿ? ಬಿಬಿಎಂಪಿ ವಿರೋಧ ನಡುವೆ ಅಧಿಸೂಚನೆಗೆ ನಗರಾಭಿವೃದ್ಧಿ ಇಲಾಖೆ ಸಿದ್ಧತೆ

    ಬೆಂಗಳೂರು: ಬಿಬಿಎಂಪಿಯ ಎಲ್ಲ ಸದಸ್ಯರೂ, ಎಲ್ಲ ಪಕ್ಷಗಳೂ ಒಕ್ಕೊರಲಿನಿಂದ ವಿರೋಧಿಸಿ, ನಿಷೇಧಿಸಲ್ಪಟ್ಟಿರುವ ಜಾಹೀರಾತು ಫಲಕಗಳು ರಾಜಧಾನಿ ಬೆಂಗಳೂರಿಗೆ ಹಿಂಬಾಗಿಲಿನಿಂದ ಪ್ರವೇಶ ಪಡೆಯಲು ಸಜ್ಜಾಗಿರುವಂತಿದೆ.

    ಈ ಹಿಂದೆ ಮತ್ತು ಈಗಲೂ ಮೇಯರ್ ಹಾಗೂ ಕಾಪೋರೇಟರ್​ಗಳು ಸಂಪೂರ್ಣವಾಗಿ ವಿರೋಧಿಸುತ್ತಿರುವ ಜಾಹೀರಾತು ಫಲಕಗಳಿಗೆ ಅನುಮತಿ ನೀಡಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ. ಸದ್ಯದಲ್ಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಾಹೀರಾತು ನೀತಿಯನ್ನು ಪ್ರಕಟಿಸಲಿದ್ದು, ‘ನಿಯಂತ್ರಿತ’ ಮಾದರಿ ಯಲ್ಲಿ ಜಾಹೀರಾತಿಗೆ ಅನುಮತಿ ನೀಡಲಾಗುತ್ತದೆ ಎನ್ನಲಾಗಿದೆ.

    ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಅಳವಡಿಸಲಾಗಿದ್ದ ಜಾಹೀರಾತು ಫಲಕಗಳಿಗೆ ಲೆಕ್ಕವೇ ಇರಲಿಲ್ಲ. ಪಾದಚಾರಿ ಮಾರ್ಗ, ರಸ್ತೆಯ ಇಕ್ಕೆಲಗಳಲ್ಲಿ, ವಾಹನ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಅಳವಡಿಸಲಾಗಿದ್ದ ಫಲಕದಿಂದ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿತ್ತು. ಕೆಲವೇ ಫಲಕಗಳು ಬಿಬಿಎಂಪಿ ಲೆಕ್ಕದಲ್ಲಿದ್ದ ಕಾರಣ ಉಳಿದೆಲ್ಲೆಡೆ ಲೆಕ್ಕಪತ್ರವಿಲ್ಲದಂತೆ ಜಾಹೀರಾತು ಅಳವಡಿಸಿ ಬಿಬಿಎಂಪಿಗೆ ತೆರಿಗೆಯನ್ನು ವಂಚಿಸಲಾಗುತ್ತಿತ್ತು.

    ಬೆಂಗಳೂರಿನ ಶೇ.90 ಜಾಹೀರಾತು ಫಲಕಗಳಲ್ಲಿ ಬಿಬಿಎಂಪಿ ಅಧಿಕಾರಿಗಳ ಕುಟುಂಬಸ್ಥರ ಮಾಲೀಕತ್ವ ಅಥವಾ ಪಾಲುದಾರಿಕೆ ಇದೆ ಎಂದು ಪಾಲಿಕೆ ಸದಸ್ಯರು ಆರೋಪಿಸಿದ್ದರು. ಜಾಹೀರಾತು ಫಲಕಗಳನ್ನು ರದ್ದುಪಡಿಸುವಂತೆ ಅನೇಕ ವರ್ಷಗಳಿಂದ ಇದ್ದ ಒತ್ತಡವಿತ್ತು. ಕೊನೆಗೂ ಕಳೆದ ವರ್ಷ ರದ್ದುಪಡಿಸಲಾಗಿತ್ತು. ಆದರೆ, ಅಲ್ಲಿಂದೀಚೆಗೆ ಜಾಹೀರಾತು ಲಾಬಿ ಕೆಲಸ ಮಾಡುತ್ತಲೇ ಇದೆ.

    ಪಾಲಿಕೆ ಆಯುಕ್ತರ ವಿರುದ್ಧ ದೂರು: ಜಾಹೀರಾತು ನಿಷೇಧಕ್ಕೆ ಕೌನ್ಸಿಲ್ ನಿರ್ಧರಿಸಿದ್ದರೂ ಅಕ್ರಮ ಜಾಹೀರಾತಿನ ಮಾಫಿಯಾಕ್ಕೆ ಒಳಗಾಗಿರುವ ಬಿಬಿಎಂಪಿ ಆಯುಕ್ತ ಅನಿಲ್​ಕುಮಾರ್ ಜಾಹೀರಾತಿಗೆ ಅನುಮತಿ ನೀಡುವ ಪರವಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಆರೋಪಿಸಿದ್ದಾರೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ. ಮಾಫಿಯಾಕ್ಕೆ ಆಯುಕ್ತರು ಬೆಂಬಲ ನೀಡುತ್ತಿದ್ದು, ಕೂಡಲೆ ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಬಿಬಿಎಂಪಿ ನಿರ್ಧಾರಕ್ಕೆ ವಿರುದ್ಧವಾಗಿ ತಾವಿಲ್ಲ ಎಂದು ಅನಿಲ್​ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ತಾವು ಯಾರ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ಜಾಹೀರಾತು ಎಂದರೆ ಕೇವಲ ಹೋರ್ಡಿಂಗ್ ಮಾತ್ರವಲ್ಲ. ಅದರಲ್ಲಿ ಹತ್ತಾರು ರೀತಿ ಇವೆ. ಇದನ್ನು ನಿಯಂತ್ರಿಸಲು ಸೂಕ್ತ ನಿಯಮ ಇಲ್ಲ. ಈ ಬಗ್ಗೆ ಸೂಕ್ತ ತೀರ್ಮಾನ ಕೂಗೊಳ್ಳುವಂತೆ ಇಲಾಖೆಗೆ ಕೋರಲಾಗಿದೆಯೇ ವಿನಃ ಜಾಹೀರಾತು ಅಳವಡಿಸುವ ಪರವಾನಗಿ ಅಲ್ಲ ಎಂದಿದ್ದರು.

    ಲಾಬಿ ನಡೆಯುತ್ತಿರುವುದು ಸತ್ಯ: ಜಾಹೀರಾತು ಲಾಬಿಯು ಬಿಬಿಎಂಪಿ ಹಾಗೂ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್​ಕುಮಾರ್ ಇತ್ತೀಚೆಗೆ ತಿಳಿಸಿದ್ದರು. ಅವರವರು ತಮ್ಮ ಮೂಗಿನ ನೇರಕ್ಕೆ ಮೇಯರ್ ಮೇಲೆ, ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ನನ್ನನ್ನೂ ಭೇಟಿಯಾಗಿದ್ದಾರೆ’ ಎಂದು ತಿಳಿಸಿದ್ದರು.

    ಬಿಜೆಪಿ ಕಳೆದ ವಿಧಾನಸಭೇ ಚುನಾವಣೆ ವೇಳೆ ಬೆಂಗಳೂರಿನಲ್ಲಿ ಅಕ್ರಮ ಜಾಹೀರಾತಿಗೆ ಬ್ರೇಕ್ ಹಾಕುತ್ತೇವೆ ಎಂದು ಆಶ್ವಾಸನೆ ನೀಡಿತ್ತು. ನಗರಾಭಿವೃದ್ಧಿ ಇಲಾಖೆಯಿಂದ ಜಾಹೀರಾತಿಗೆ ಅನುಮತಿ ನೀಡಲಾಗುತ್ತಿದೆ ಎಂಬುದನ್ನು ಅರಿತ ಮೇಯರ್ ಗೌತಮ್ುಮಾರ್ ಇತ್ತೀಚೆಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜಾಹೀರಾತು ಫಲಕ ಅಳವಡಿಕೆಗೆ ಬಿಬಿಎಂಪಿ ಸದಸ್ಯರು ಸಂಪೂರ್ಣ ವಿರೋಧವಾಗಿದ್ದಾರೆ. ಸರ್ಕಾರದಿಂದ ನೇರವಾಗಿ ಅವಕಾಶ ನೀಡಿದರೆ, ಬೆಂಗಳೂರನ್ನು ಪ್ರತಿನಿಧಿಸುವ ಬಿಬಿಎಂಪಿ ಸದಸ್ಯರ ಹಕ್ಕು ಮೊಟಕುಗೊಳಿಸಿದಂತಾಗುತ್ತದೆ. ಈ ಬಗ್ಗೆ ಕೌನ್ಸಿಲ್​ನಲ್ಲಿ ಚರ್ಚೆಯಾಗಲಿ ಎಂದು ತಿಳಿಸಿದ್ದರು.

    ವಾರದಲ್ಲಿ ಅಧಿಸೂಚನೆ ಸಾಧ್ಯತೆ: ಜಾಹೀರಾತು ನಿಯಮವನ್ನು ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸಲು ನಗರಾಭಿವೃದ್ಧಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಕೆಲವು ಪ್ರದೇಶಗಳಲ್ಲಷ್ಟೆ ಜಾಹೀರಾತು ಫಲಕ ಸ್ಥಾಪಿಸಲು ಅನುಮತಿ ನೀಡುವಂತೆ ನಿಯಮ ಜಾರಿ ಮಾಡಬಹುದು ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts