ಬಿಬಿಎಂ ಪದವೀಧರನ ಕೃಷಿ ಪ್ರೀತಿ!

3 Min Read
ಬಿಬಿಎಂ ಪದವೀಧರನ ಕೃಷಿ ಪ್ರೀತಿ!
ಜಮೀನಿನಲ್ಲಿ ಬೆಳೆದಿರುವ ಅಡಿಕೆ ಗಿಡಗಳು.

ತಿ.ನರಸೀಪುರ: ಆಸಕ್ತಿ ಇದ್ದರೆ ಯಾವುದರಲ್ಲಾದರೂ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ತಾಲೂಕಿನ ಕಳ್ಳಿಪುರ ನಿವಾಸಿ, ಪದವೀಧರ ಮಹಮದ್ ತೊಯಬ್ ರಂಜಕ್ ಸಾಕ್ಷಿ.

ಬೆಂಗಳೂರಿನ ಎಚ್.ಎಸ್.ಅರ್ ಲೇಔಟ್‌ನಲ್ಲಿರುವ ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿಬಿಎಂ ಪದವೀಧರನಾದ ಮಹಮದ್ ತೊಯಬ್ ರಂಜಕ್ ಓದಿನ ಬಳಿಕ ಉದ್ಯೋಗ ಸೇರಿದ್ದ. ದಿನ ಕಳೆದಂತೆ ಅದನ್ನು ಬಿಟ್ಟು ತಮ್ಮ ಪಾಲಿಗೆ ಬಂದಿದ್ದ ಮೂರುವರೆ ಎಕರೆ ಪ್ರದೇಶದಲ್ಲಿ ಕೃಷಿಯೊಂದಿಗೆ ಹೈನುಗಾರಿಕೆಯನ್ನೂ ಮಾಡುವ ಮೂಲಕ ವರ್ಷಕ್ಕೆ ಲಕ್ಷಾಂತರ ರೂ. ಆದಾಯ ಪಡೆದು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.

ತಾಲೂಕಿನ ಕಳ್ಳಿಪುರ ಗ್ರಾಮದ ಅಬ್ದುಲ್ ರಂಜಕ್ ಪುತ್ರನಾಗಿರುವ ತೊಯಬ್ ರಂಜಕ್, ತಂದೆಯಿಂದ ಬಳುವಳಿಯಾಗಿ ಬಂದ ಜಮಿನಿನಲ್ಲಿ ಭತ್ತ, ಕಬ್ಬು, ಜೋಳ, ರಾಗಿ, ತೆಂಗು, ಅಡಕೆ ಸೇರಿದಂತೆ ಇತರ ಫಸಲನ್ನು ಬೆಳೆದಿದ್ದಾರೆ. ಇದು ಸಾಲದೆಂಬಂತೆ ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದು, ವರ್ಷಕ್ಕೆ 10 ರಿಂದ 12 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದಾರೆ.

ಈಗಿನ ಕಾಲದಲ್ಲಿ ಸಣ್ಣಪುಟ್ಟ ಉದ್ಯೋಗ ಸಿಕ್ಕರೆ ಸಾಕು ಪಟ್ಟಣದಲ್ಲಿ ಹೋಗಿ ವಾಸ ಮಾಡುವುದು ಸರ್ವೇ ಸಾಮಾನ್ಯ. ಆದರೆ ಕೃಷಿಯಲ್ಲಿಯೇ ಸಂಪಾದನೆ ಮಾಡಿ ಬದುಕುವ ಛಲದೊಂದಿಗೆ ಇದ್ದ ಉದ್ಯೋಗ ತ್ಯಜಿಸಿ ರಂಜಕ್ ಕೃಷಿಯತ್ತ ಮುಖ ಮಾಡುವ ಮೂಲಕ ಎಲ್ಲರನ್ನೂ ಹುಬ್ಬೇರುವಂತೆ ಮಾಡಿದರು. ಮಳೆ ಆಶ್ರಯದಲ್ಲಿದ್ದ ಜಮೀನಿಗೆ ಕೃಷಿ ಪಂಪ್‌ಸೆಟ್ ಅಳವಡಿಸಿ ಕಡಿಮೆ ನೀರಿನಲ್ಲಿ ಮೇವು, ಭತ್ತ, ತೆಂಗು ಅಡಕೆ ಬೆಳೆಯೊಂದಿಗೆ ಮೇಕೆ, ಕುರಿ, ಕೋಳಿ ಸಾಕಣೆ ಮಾಡುವ ಮೂಲಕ ಪ್ರತಿ ತಿಂಗಳು ಆದಾಯ ಬರುವಂತೆ ಮಾಡಿಕೊಂಡಿದ್ದಾರೆ. ಇದಲ್ಲದೆ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿದ್ದು, ಅದರಲ್ಲಿ ಮೀನು ಸಾಕಣೆ ಮಾಡುತ್ತಿದ್ದಾರೆ. ಆ ಮೂಲಕ ಒಂದೇ ಸೂರಿನಡಿ ನಾಲ್ಕಾರು ಕಸಬುಗಳನ್ನು ಮಾಡುತ್ತಿರುವುದು ವಿಶೇಷ.

See also  ಕೃಷಿಮೇಳ: ರಾಜ್ಯದಲ್ಲಿ ಬಿದಿರು ಅಭಿವೃದ್ಧಿ ಯೋಜನೆ

ಹೈನುಗಾರಿಕೆಯೊಂದಿಗೆ ವಿವಿಧ ರೀತಿಯ ಪಕ್ಷಿಗಳನ್ನು ಸಾಕಿದ್ದು, ಅದನ್ನು ಮಾರಾಟ ಮಾಡುವ ಮೂಲಕ ಆದಾಯ ಕಂಡುಕೊಂಡಿದ್ದಾರೆ. ಅಲ್ಲದೆ ಹೈದರಾಬಾದ್, ರಾಜಸ್ಥಾನ, ಹಿಮಾಲಯ ಸೇರಿದಂತೆ ದೂರದ ಊರುಗಳಿಂದ ಕೋಳಿಗಳನ್ನು ತಂದು ಸಾಕುತ್ತಿದ್ದಾರೆ. ಹೀಗಾಗಿ ಸ್ಥಳೀಯ ವ್ಯಾಪಾರಸ್ಥರು ಬಂದು ಖರೀದಿಸುತ್ತಾರೆ. ವಿಶೇಷವಾಗಿ ಬಂಡೂರು ಕುರಿ ಹೆಚ್ಚು ಆಕರ್ಷಣೆ ಯಾಗಿದ್ದು, ನಿರೀಕ್ಷೆಗೂ ಮೀರಿ ಸಂಪಾದನೆ ಮಾಡುತ್ತಿದ್ದಾರೆ.

ಮನೆಗೆ ಬೇಕಾದಂತಹ ದವಸ-ಧಾನ್ಯಗಳನ್ನು ತೋಟದಲ್ಲೇ ಬೆಳೆಯುವ ರಂಜಕ್, ಮನೆ ಬಳಕೆ ಹಾಗೂ ಊಟಕ್ಕೆ ಬೇಕಾಗುವಷ್ಟು ಭತ್ತ, ರಾಗಿಯನ್ನು ಜಮೀನಿನಲ್ಲಿ ಬೆಳೆಯುತ್ತಾರೆ. ಅಂತೆಯೆ ಕೋಳಿ ಮತ್ತು ಮೇಕೆಗಳಿಗೂ ಕಾಳು, ಮೇವನ್ನು ಬೆಳೆಯುತ್ತಾರೆ. ಇನ್ನು ಕುರಿ ಮತ್ತು ಮೇಕೆ ಸಾಕಣೆಯಿಂದ ವರ್ಷಕ್ಕೆ ಬೇಕಾಗುವಷ್ಟು ಗೊಬ್ಬರವನ್ನು ತಯಾರು ಮಾಡಿಕೊಳ್ಳುತ್ತಾರೆ. ತೆಂಗು ಮತ್ತು ಅಡಕೆ ಫಸಲು ನೀಡುವ ಸಮಯ ಬಂದಿದ್ದು, ನಮಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ಸರ್ಕಾರಿ ನೌಕರರಿಗಿಂತಲೂ ಹೆಚ್ಚು ಹಣ ಸಂಪಾದಿಸುವ ಮೂಲಕ ಆದಾಯ ಕಂಡುಕೊಂಡಿದ್ದೇವೆ ಎನ್ನುತ್ತಾರೆ ರಂಜಕ್.

ರಂಜಕ್ ಬಿಬಿಎಂ ಪದವೀಧರನಾಗಿದ್ದರೂ ಹಳ್ಳಿಯಲ್ಲಿ ಬಂದು ಈಗಿನ ಕಾಲದಲ್ಲೂ ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು ನಿಜವಾಗಲೂ ಸಂತೋಷ ಪಡುವ ವಿಚಾರ. ಮುಸ್ಲಿಂ ಯುವಕ ಗ್ರಾಮದಲ್ಲಿ ಎಲ್ಲರ ವಿಶ್ವಾಸ ಪಡೆದು ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗುವ ಮೂಲಕ ಲಕ್ಷಾಂತರ ರೂ. ಸಂಪಾದನೆ ಮಾಡುತ್ತಿದ್ದಾರೆ. ತೋಟದಲ್ಲಿ ಹತ್ತಾರು ಜನರಿಗೆ ಕೂಲಿ ಕೊಡುವ ಈತ ಬೇರೆಯವರಿಗೆ ಮಾದರಿಯಾಗಿದ್ದು, ನಿಜವಾಗಲೂ ಮೆಚ್ಚಲೇಬೇಕು.
ಕಳ್ಳಿಪುರ ಮಹಾದೇವಸ್ವಾಮಿ, ರೈತ ಮುಖಂಡ

ಒಂದೇ ಕಸುಬು ಹಾಗೂ ಒಂದೇ ಬೆಳೆ ನಂಬಿದರೆ ಯಾವುದೇ ಕಾರಣಕ್ಕೂ ಲಾಭ ಕಾಣಲು ಸಾಧ್ಯವಿಲ್ಲ. ಇದರಿಂದ ರೈತ ನಷ್ಟ ಅನುಭವಿಸಬೇಕಾಗುತ್ತದೆ. ಇರುವಷ್ಟು ಜಾಗದಲ್ಲಿ 3ರಿಂದ 4 ಉಪ ಕಸುಬನ್ನು ಮಾಡುವ ಮೂಲಕ ಅದರಲ್ಲಿ ಲಾಭಾಂಶ ಕಾಣಬೇಕು. ಒಂದರಲ್ಲಿ ಲಾಭ ಬಂದರೆ, ಮತ್ತೊಂದರಲ್ಲಿ ನಷ್ಟ ಆಗುತ್ತದೆ. ಹಾಗಾಗಿ ಹಲವು ರೀತಿಯ ಕಸುಬುಗಳನ್ನು ಮಾಡುತ್ತಿದ್ದೇನೆ. ಒಟ್ಟಾರೆ ನಾನು ಉದ್ಯೋಗಕ್ಕಿಂತ ಕೃಷಿಯಲ್ಲಿ ಹೆಚ್ಚು ಸಂಪಾದಿಸುತ್ತಿದ್ದು ನೆಮ್ಮದಿಯಿಂದ ಜೀವನ ಸಾಗುತ್ತಿದ್ದೇನೆ.
> ಮಹಮದ್ ತೊಯಬ್ ರಂಜಕ್ ಯುವ ಕೃಷಿಕ

Share This Article