ಬಾಗಲಕೋಟೆ: ಬಾಗಲಕೋಟೆ ನಗರದ ಕರ್ನಾಟಕ ಬಯಲಾಟ ಅಕಾಡೆಮಿಯು 2019ನೇ ಸಾಲಿನ ಪ್ರಶಸ್ತಿ ಘೊಷಣೆ ಮಾಡಿದ್ದು, ವಾರ್ಷಿಕ ಗೌರವಕ್ಕೆ ಐವರು, ವಾರ್ಷಿಕ ಪ್ರಶಸ್ತಿಗೆ ಹತ್ತು ಕಲಾವಿದರು ಆಯ್ಕೆಯಾಗಿದ್ದಾರೆ.
ಜ.17ರಂದು ನಡೆದ ಕರ್ನಾಟಕ ಬಯಲಾಟ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದಂತೆ ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ, ಪುಸ್ತಕ ಬಹುಮಾನಗಳಿಗೆ ಕಲಾವಿದರು ಹಾಗೂ ಲೇಖಕರನ್ನು ಆಯ್ಕೆ ಮಾಡಲಾಗಿದೆ.
ಗೌರವ ಪ್ರಶಸ್ತಿ: ಬಳ್ಳಾರಿ ಜಿಲ್ಲೆಯ ಧೂಪದ ಕೊಟ್ರಪ್ಪ (ದೊಡ್ಡಾಟ), ಧಾರವಾಡ ಜಿಲ್ಲೆಯ ಶ್ರೀಶೈಲ ಹುದ್ದಾರ (ದೊಡ್ಡಾಟ), ಕೊಪ್ಪಳ ಜಿಲ್ಲೆಯ ಎಚ್.ಎಸ್.ಪಾಟೀಲ (ದೊಡ್ಡಾಟ), ಬಾಗಲಕೋಟೆ ಜಿಲ್ಲೆಯ ಲೋಕಾಪುರದ ಶಾಂತವ್ವ ಜಾಲಿಕಟ್ಟಿ (ಶ್ರೀಕೃಷ್ಣ ಪಾರಿಜಾತ), ಬೆಳಗಾವಿ ಜಿಲ್ಲೆಯ ಬಾಪು ತಾಸೆವಾಲೆ(ಶ್ರೀಕೃಷ್ಣ ಪಾರಿಜಾತ).
ವಾರ್ಷಿಕ ಪ್ರಶಸ್ತಿ: ದಾವಣಗೆರೆ ಜಿಲ್ಲೆಯ ಎನ್. ರಂಗನಾಥ (ದೊಡ್ಡಾಟ), ಬಳ್ಳಾರಿ ಜಿಲ್ಲೆಯ ಚಲವಾದಿ ಈರಣ್ಣ ಕೆಂಚಪ್ಪ(ದೊಡ್ಡಾಟ), ಚಿತ್ರದುರ್ಗ ಜಿಲ್ಲೆಯ ಸಣ್ಣಬೋರಯ್ಯ(ದೊಡ್ಡಾಟ), ಕೊಪ್ಪಳ ಜಿಲ್ಲೆಯ ಎಂ.ಸೋಮಶೇಖರಪ್ಪ(ದೊಡ್ಡಾಟ), ಹಾವೇರಿ ಜಿಲ್ಲೆಯ ಫಿರೋಜ ಶಿಂಧೆ(ದೊಡ್ಡಾಟ), ಬೆಳಗಾವಿ ಜಿಲ್ಲೆಯ ಭೀಮಪ್ಪ ರಾಮಪ್ಪ ಹುದ್ದಾರ(ಸಣ್ಣಾಟ), ಬಾಗಲಕೋಟೆ ಜಿಲ್ಲೆಯ ಚಿದಾನಂದ ಹಲಗಲಿ(ಶ್ರೀಕೃಷ್ಣ ಪಾರಿಜಾತ), ಬೆಳಗಾವಿ ಜಿಲ್ಲೆಯ ಯಲ್ಲವ್ವ ಮಾದರ(ಶ್ರೀಕೃಷ್ಣ ಪಾರಿಜಾತ), ವಿಜಯಪುರ ಜಿಲ್ಲೆಯ ಬಸವಂತ ಮಾಳಿ(ಸಣ್ಣಾಟ), ಬಳ್ಳಾರಿ ಜಿಲ್ಲೆಯ ಅಧಿಕಾರಿ ಬಸವಲಿಂಗಪ್ಪ(ಸೂತ್ರದ ಗೊಂಬೆ).
ಪುಸ್ತಕ ಬಹುಮಾನ ಪ್ರಶಸ್ತಿ: 2017-18ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ಮೈಸೂರಿನ ಡಾ.ಸುಜಾತಾ ಅಕ್ಕಿ ಅವರ ಸಾರಥಿ, ಬಳ್ಳಾರಿ ಜಿಲ್ಲೆಯ ಡಾ.ವೀರೇಶ ಬಡಿಗೇರ ಅವರ ನಾಡೋಜ ಯಲ್ಲವ್ವ ರೋಡಪ್ಪನವರ ಮತ್ತು 2018-19ನೇ ಸಾಲಿನ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಡಾ.ಶ್ರೀರಾಮ ಇಟ್ಟಣ್ಣವರ ಅವರ ಬಯಲಾಟ ಲೇಖನಗಳು, ಧಾರವಾಡ ಜಿಲ್ಲೆಯ ಎಂ.ಎಸ್.ಮಾಳವಾಡ ಅವರ ವೀರರಾಣಿ ಕಿತ್ತೂರು ಚನ್ನಮ್ಮ ಕೃತಿಗಳು ಆಯ್ಕೆಯಾಗಿವೆ ಎಂದು ಅಕಾಡೆಮಿ ರಜಿಸ್ಟ್ರಾರ್ ಬಸವರಾಜ ಶಿರೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಮೊತ್ತ
ಗೌರವ ಪ್ರಶಸ್ತಿ ವಿಜೇತರಿಗೆ ತಲಾ 50,000 ರೂ., ವಾರ್ಷಿಕ ಪ್ರಶಸ್ತಿಗೆ 25,000 ರೂ., ಪುಸ್ತಕ ಬಹುಮಾನ ಪಡೆದವರಿಗೆ 25,000 ರೂಪಾಯಿ ನಗದು ನೀಡಿ ಗೌರವಿಸಲಾಗುತ್ತದೆ.