ಟೈಗರ್ಸ್ ಗೆಲುವಿನ ಗರ್ಜನೆ

|ಸಂತೋಷ ವೈದ್ಯ

ಹುಬ್ಬಳ್ಳಿ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಉತ್ತಮ ನಿರ್ವಹಣೆ ನೀಡಿದ ಹುಬ್ಬಳ್ಳಿ ಟೈಗರ್ಸ್ ತಂಡ ಕೆಪಿಎಲ್-7ರಲ್ಲಿ ಸತತ 2ನೇ ಜಯ ದಾಖಲಿಸಿದೆ. ಶಿವಮೊಗ್ಗ ಲಯನ್ಸ್ ತಂಡ ಟೂರ್ನಿಯ ಮೊದಲ ಪಂದ್ಯದಲ್ಲೇ 25 ರನ್ ಸೋಲಿನ ಸೋಲಿನ ಕಹಿ ಕಂಡಿದೆ.

ರಾಜನಗರದಲ್ಲಿರುವ ಕೆಎಸ್​ಸಿಎ ಮೈದಾನದಲ್ಲಿ ಆರಂಭಗೊಂಡ ಲೀಗ್​ನ 2ನೇ ಚರಣದ ಮೊದಲ ದಿನವಾದ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಹುಬ್ಬಳ್ಳಿ ತಂಡ ಪ್ರವೀಣ್ ದುಬೇ (43ರನ್, 32 ಎಸೆತ, 1 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ವಿನಯ್ ಕುಮಾರ್ (35 ರನ್, 13 ಎಸೆತ, 5 ಸಿಕ್ಸರ್) ಜೋಡಿಯ ಅಬ್ಬರದ ಬ್ಯಾಟಿಂಗ್ ಫಲವಾಗಿ 7 ವಿಕೆಟ್​ಗೆ 160 ರನ್​ಗಳಿಸಿತು. ಬಳಿಕ ಶಿವಮೊಗ್ಗ ತಂಡ 17.4 ಓವರ್​ಗಳಲ್ಲಿ 9 ವಿಕೆಟ್​ಗೆ 118 ರನ್​ಗಳಿಸಿದ್ದ ವೇಳೆ ಬಿದ್ದ ಮಳೆಯಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಬಳಿಕ ಶಿವಮೊಗ್ಗ ತಂಡ 9 ವಿಕೆಟ್​ಗೆ 135 ರನ್ ಗಳಿಸಲಷ್ಟೇ ಶಕ್ತವಾಯಿತು.

ಹುಬ್ಬಳ್ಳಿ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಶಿವಮೊಗ್ಗ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರ್. ಜೋನಾಥನ್ (29ರನ್, 23 ಎಸೆತ, 1 ಬೌಂಡರಿ, 1 ಸಿಕ್ಸರ್) ಹಾಗೂ ಪೃಥ್ವಿ ಶೇಖಾವತ್ (25 ರನ್, 18 ಎಸೆತ, 2ಬೌಂಡರಿ, 1ಸಿಕ್ಸರ್) ಹೊರತುಪಡಿಸಿ ಉಳಿದ ಬ್ಯಾಟ್ಸ್ ಮನ್​ಗಳು ವೈಫಲ್ಯ ಅನುಭವಿಸಿದರು. ಹುಬ್ಬಳ್ಳಿ ಪರ ಕ್ರಾಂತಿ ಕುಮಾರ್, ದರ್ಶನ್ ಹಾಗೂ ಮಹೇಶ್ ಪಟೇಲ್ ತಲಾ 2 ವಿಕೆಟ್ ಪಡೆದರು.

ಟೈಗರ್ಸ್​ಗೆ ಪ್ರವೀಣ್ ದುಬೇ-ವಿನಯ್ ಆಸರೆ

ಶಿವಮೊಗ್ಗ ಲಯನ್ಸ್ ದಾಳಿ ತತ್ತರಿಸಿ ಸಾಧಾರಣ ಮೊತ್ತದತ್ತ ಮುಖಮಾಡಿದ್ದ ಹುಬ್ಬಳ್ಳಿ ಟೈಗರ್ಸ್ ಪ್ರವೀಣ್ ದುಬೇ ಹಾಗೂ ವಿನಯ್ ಕುಮಾರ್ ಜೋಡಿ ಬಿರುಸಿನ ಬ್ಯಾಟಿಂಗ್​ನಿಂದ ತಂಡದ ಮೊತ್ತ ಹಿಗ್ಗಿಸಿತು. ಈ ಜೋಡಿ ಎದುರಿಸಿದ 25 ಎಸೆತಗಳಲ್ಲಿ 46 ರನ್ ಕಲೆಹಾಕಿದ ಈ ಜೋಡಿ ತಂಡ ಸಾಧಾರಣ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿತು.