ದಾವಣಗೆರೆ: ಸಮೀಪದ ಬಾತಿ ಗುಡ್ಡದ ಪ್ರದೇಶದಲ್ಲಿ ಗಿಡಮರಗಳನ್ನು ತೆರವುಗೊಳಿಸಿ ನಿವೇಶನ ನಿರ್ಮಿಸಲು ಅವಕಾಶ ನೀಡಬಾರದು ಎಂದು ಪರಿಸರ ಪ್ರೇಮಿ ಎಂ.ಜಿ. ಶ್ರೀಕಾಂತ್ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ದೊಡ್ಡಬಾತಿ ಗ್ರಾಪಂನ ಗ್ರಾಮದ ಸ.ನಂ.300 ರಲ್ಲಿ 5 ಎಕರೆ ಹಾಗೂ ಸ.ನಂ.301ರಲ್ಲಿ 1 ಎಕರೆ ಜಮೀನಿನಲ್ಲಿ ಬಡ ಜನರಿಗೆ ನಿವೇಶನ ನಿರ್ಮಿಸಲು ಯೋಜಿಸಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಗ್ರಾಪಂ ಅಧ್ಯಕ್ಷರು ಈ ಕುರಿತು 2024 ರ ಫೆಬ್ರವರಿ 13 ರಂದು ದಾವಣಗೆರೆ ತಹಸೀಲ್ದಾರ್‌ಗೆ ಪತ್ರ ಬರೆದಿದ್ದು, ಅವರು ದಾವಣಗೆರೆ ವಲಯ ಅರಣ್ಯಾಧಿಕಾರಿ ಹಾಗೂ ಭೂಮಾಪನ ಇಲಾಖೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.
ಪ್ರಸ್ತುತ ನಿವೇಶನ ನಿರ್ಮಿಸಲು ಹೊರಟಿರುವ ಪ್ರದೇಶವು ಸುಮಾರು 50 ಎಕರೆ ಅರಣ್ಯ ಜಮೀನಿಗೆ ಹೊಂದಿಕೊಂಡಿದೆ. ಈ ಪ್ರದೇಶದಲ್ಲಿ ಸುಮಾರು 30 ವರ್ಷಗಳ ಮರಗಿಡಗಳಿದ್ದು, ವಿವಿಧ ಪ್ರಭೇದಗಳ ಪಕ್ಷಿ ಸಂಕುಲ ವಾಸವಾಗಿವೆ. ಇಲ್ಲಿ ನಿವೇಶನ ಮಾಡಲು ಮರಗಳನ್ನು ಕಡಿಯುವುದು ಹಾಗೂ ಮಣ್ಣು ತೆಗೆಯುವುದರಿಂದ ಗುಡ್ಡ ಕುಸಿಯುತ್ತದೆ ಎಂದು ಹೇಳಿದರು.
ಅಲ್ಲದೇ ಅರಣ್ಯ ಇಲಾಖೆ ವರದಿ ನೀಡುವಾಗ ಎಷ್ಟು ಜಾತಿ ಮರಗಳಿವೆ ಹಾಗೂ ಅವುಗಳ ಸಂರಕ್ಷಣೆ ಬಗ್ಗೆ ವರದಿ ನೀಡಿಲ್ಲ. ಏಕಾಏಕಿ ಅಮೂಲ್ಯ ಮರ ಕಡಿದು ನಿವೇಶನ ನಿರ್ಮಿಸಲು ಹೊರಟಿರುವ ಹಿಂದೆ ಭೂ ಮಾಫಿಯಾ ಕೈವಾಡದ ಶಂಕೆ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.
ಬಾತಿ ಗುಡ್ಡವು ನಗರಕ್ಕೆ ಹೊಂದಿಕೊಂಡಿರುವ ಏಕೈಕ ಗುಡ್ಡವಾಗಿದ್ದು, ಯಾವುದೇ ವೃಕ್ಷಗಳನ್ನು ತೆರವುಗೊಳಿಸದೆ ಜೀವಸಂಕುಲ ಉಳಿಸುವಂತೆ ಮುಖ್ಯಮಂತ್ರಿ, ಕಂದಾಯ ಸಚಿವರು, ಅರಣ್ಯ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಇ- ಮೇಲ್ ಮೂಲಕ ಮನವಿ ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಈ ಬಗ್ಗೆ ಗಮನ ಹರಿಸಬೇಕು ಎಂದರು.
ಒಂದು ವೇಳೆ ಮರಗಳನ್ನು ತೆರವುಗೊಳಿಸಿ ನಿವೇಶನ ಮಾಡಲು ಹೊರಟರೆ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗಿರೀಶ್ ಎಸ್. ದೇವರಮನೆ ಮಾತನಾಡಿ, ಈಗಾಗಲೇ ಬಾತಿ ಗುಡ್ಡದ ತುದಿಯಲ್ಲಿ ಮನೆ ನಿರ್ಮಿಸಲಾಗಿದೆ. ಇದಕ್ಕೆ ಯಾವ ರೀತಿ ಅನುಮತಿ, ಹಕ್ಕುಪತ್ರ ಹಾಗೂ ವಿದ್ಯುತ್ ಸೌಲಭ್ಯ ನೀಡಲಾಗಿದೆ ಎಂದು ಪ್ರಶ್ನಿಸಿದರು. ಯಾವುದೇ ಅರಣ್ಯ ಹಾಗೂ ಗುಡ್ಡ ಪ್ರದೇಶ ಪರಿವರ್ತಿಸಲು ಆಗುವುದಿಲ್ಲ ಎಂದರು.
ಕೆ.ಟಿ. ಗೋಪಾಲಗೌಡ್ರು, ಕೆ.ಎನ್. ರವಿಕುಮಾರ್, ಇ. ಬಸವರಾಜ್, ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿದ್ದರು.