More

    ಇಂಡೋನೇಷ್ಯಾದ ಸಮುದ್ರದಾಳದಿಂದ ಮೇಲೆದ್ದಿದೆ ರಾಕ್ಷಸ ಜಿರಲೆ!

    ನವದೆಹಲಿ: ಕೋವಿಡ್​-19 ಪಿಡುಗನ್ನೇ ತಡೆದುಕೊಳ್ಳಲು ಆಗುತ್ತಿಲ್ಲ, 2020ನೇ ಸಾಲಿನಲ್ಲಿ ಇದೇನಪ್ಪಾ ಬಂತು ಮತ್ತೊಂದು ವಿಪತ್ತು, ಇದು ಇನ್ನಾವ ಬಗೆಯ ಸಮಸ್ಯೆ ತಂದೊಡ್ಡುತ್ತದೆಯೋ ಎಂದು ಹೌಹಾರಬೇಡಿ. ಇಂಡೋನೇಷ್ಯಾದ ಸಮುದ್ರಾಳದಿಂದ ಮೇಲೆದ್ದಿರುವ ಹೊಸ ಜೀವಿ ರಾಕ್ಷಸ ಜಿರಲೆ ಎಂಬುದೇನೋ ನಿಜ. ಆದರೆ, ಅದು ಸಮುದ್ರದಾಳದಲ್ಲಿ ಸತ್ತಿರುವ ಪ್ರಾಣಿಗಳ ಮಾಂಸವನ್ನು ಭಕ್ಷಿಸಿ ಜೀವಿಸುವಂಥ ಜಿರಲೆ. ಇದರಿಂದ ಯಾವುದೇ ಅಪಾಯವಿಲ್ಲ.

    ಇಂಡೋನೇಷ್ಯಾದ ಜಾವಾದಲ್ಲಿರುವ ಹಿಂದೂ ಮಹಾಸಾಗರದ ಪಶ್ಚಿಮ ಕರಾವಳಿ ಪ್ರದೇಶದ ದಕ್ಷಿಣ ಭಾಗದಲ್ಲಿರುವ ಬಂಟನ್​ ಎಂಬಲ್ಲಿ 2018ರಲ್ಲಿ ಮೊದಲ ಬಾರಿಗೆ ಈ ಜೀವಿಯನ್ನು ಪತ್ತೆ ಮಾಡಲಾಗಿತ್ತು. ಸಿಂಗಾಪುರದ ಸಂಶೋಧಕರು ಈ ಜೀವಿಯನ್ನು ಪತ್ತೆ ಮಾಡಿದ್ದರು.

    ಇದಕ್ಕೆ ಬ್ಯಾಥಿನಾಮಸ್​ ರಾಕ್ಷಸ ಅಥವಾ ಸೂಪರ್​ಗೇಂಟ್​ ಬ್ಯಾಥಿನಾಮಸ್​ ಎಂಬ ಹೆಸರಿನ್ನಿಟ್ಟು ಇದರ ಅಧ್ಯಯನಕ್ಕೆ ಮುಂದಾಗಿದ್ದರು. ಸತತ ಎರಡು ವರ್ಷಗಳ ಅಧ್ಯಯನದ ಬಳಿಕ ಬ್ಯಾಥಿನಾಮಸ್​ ರಾಕ್ಷಸ ಅಥವಾ ಸಮುದ್ರದ ಬೃಹದಾಕಾರದ ಜಿರಲೆ ಪತ್ತೆಯಾಗಿರುವುದನ್ನು ಸಂಶೋಧಕರು ಖಚಿತಪಡಿಸಿದ್ದಾರೆ.

    ಜೈವಿಕವೈವಿಧ್ಯತೆಯ ಸಂಶೋಧನಾ ಜರ್ನಲ್​ ಝೂಕೀಸ್​ನಲ್ಲಿ ಜು.8ರಂದು ಈ ಬಗ್ಗೆ ಪ್ರಕಟಿಸಿದ್ದ ವಿಜ್ಞಾನಿಗಳು, ಇದೊಂದು ರಾಕ್ಷಸ ಗಾತ್ರದ ಸಮಪಾದಿ ಎಂದು ಬಣ್ಣಿಸಿದ್ದಾರೆ. ಇಂಡೋನೇಷ್ಯಾದಲ್ಲಿ ಪತ್ತೆಯಾಗಿರುವ ಮೊದಲ ಸಂಕುಲ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಲಾಕ್​ಡೌನ್ ಟೈಮಲ್ಲಿ ಖರ್ಚಿಲ್ಲದೇ ಹೆಣ್ಣುಮಕ್ಕಳ ಮದುವೆ ಮಾಡೋಕೆ ಹೊರಟ ತಂದೆಗೆ ಅಡ್ಡಿಯಾಗಿದ್ದೇನು…?

    ಈ ಪ್ರಬಂಧವನ್ನು ಬರೆದಿರುವ ವಿಜ್ಞಾನಿಗಳಾದ ಕೋನ್ನಿ ಎಂ ಸಿಡಬಾಲಕ್​, ಹೆಲೆನ್​ ಪಿಎಸ್​ ವಾಂಗ್​ ಮತ್ತು ಪೀಟರ್​ ಕೆ.ಎಲ್​. ನಂಗ್​, ಇಂಡೋನೇಷ್ಯಾದ ರಾಕ್ಷಸ ಎಂಬ ಪದವನ್ನು ವೈಜ್ಞಾನಿಕ ಹೆಸರಿಗೆ ಸೇರಿಸಲಾಗಿದೆ. ಅದರ ಬೃಹತ್​ ಗಾತ್ರವನ್ನು ಗಮನಿಸಿ ಈ ಅನ್ವರ್ಥಕವನ್ನು ಕೊಟ್ಟಿರುವುದಾಗಿ ಹೇಳಿದ್ದಾರೆ.
    ಬ್ಯಾಥಿನಾಮಸ್​ ರಾಕ್ಷಸ್​ ಬೃಹದಾಕಾರದ ಸಮಪಾದಿಯಾಗಿದ್ದು, ಬ್ಯಾಥಿನಾಮಸ್​ ಕುಲಕ್ಕೆ ಸೇರಿದೆ. ಇದು ಏಡಿ, ಕಡಲೇಡಿ ಮತ್ತು ಸೀಗಡಿ ಜಾತಿಗೆ ಸೇರಿದ್ದು. ಪೆಸಿಫಿಕ್​, ಅಟ್ಲಾಂಟಿಕ್​ ಮತ್ತು ಹಿಂದೂ ಮಹಾಸಾಗರಗಳಲ್ಲಿನ ತಂಪಾದ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

    ರಾಕ್ಷಸ ಜಿರಲೆಗೆ 14 ಪಾದಗಳಿವೆ. ಆದರೆ, ಆಹಾರವನ್ನು ಅರಸಿಕೊಂಡು ಸಮುದ್ರದ ತಳಭಾಗದಲ್ಲಿ ಓಡಾಡಲು ಮಾತ್ರವೇ ಈ ಕಾಲುಗಳನ್ನು ಬಳಸುತ್ತದೆ. ಇದು 50 ಸೆಂಟಿಮೀಟರ್​ (1.6 ಅಡಿ) ಉದ್ದ ಇದ್ದು, ಸಮಪಾದಿಗಳಲ್ಲೇ ಅತಿ ದೊಡ್ಡ ಗಾತ್ರದ ಜೀವಿ ಎನಿಸಿಕೊಂಡಿದೆ. ಸಾಮಾನ್ಯವಾಗಿ ಸಮಪಾದಿಗಳು 33 ಸೆಂಟಿಮೀಟರ್​ಗಿಂತ ಹೆಚ್ಚು ಉದ್ದ (ಅಂದಾಜು ಒಂದು ಅಡಿಗಿಂತ ಸ್ವಲ್ಪ ಹೆಚ್ಚು) ಬೆಳೆಯುವುದಿಲ್ಲ. ಒಂದು ವೇಳೆ 50 ಸೆಂಟಿಮೀಟರ್​ ಉದ್ದವಿದ್ದರೂ ಅವನ್ನು ಬೃಹದಾಕಾರದ ಸಮಪಾದಿಗಳು ಎಂದು ವರ್ಗೀಕರಿಸಲಾಗುತ್ತದೆ.

    ಇಂಥ ಎಷ್ಟು ಜೀವಿಗಳಿವೆ?: ಇದುವರೆಗೂ ಬೃಹತ್​ಗಾತ್ರದ ಸಮುದ್ರಜೀವಿಗಳು ಎಂದು ಐದು ಜೀವಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಎರಡು ಅಟ್ಲಾಂಟಿಕ್​ ಮಹಾಸಾಗರದ ಪಶ್ಚಿಮ ಭಾಗದಲ್ಲಿವೆ. ಬ್ಯಾಥಿನೊಮಸ್​ ರಾಕ್ಷಸ ಈ ವರ್ಗಕ್ಕೆ ಸೇರಿದ 6ನೇ ಜೀವಿಯಾಗಿದೆ.

    ಸಮುದ್ರದ ಜಿರಲೆಗಳು ಸತ್ತಿರುವ ಸಮುದ್ರಜೀವಿಗಳ ದೇಹವನ್ನು ತಿಂದು ಬದುಕುತ್ತವೆ. ಕೆಲವೊಮ್ಮೆ ಆಹಾರವಿಲ್ಲದೆ ದೀರ್ಘಾವಧಿವರೆಗೂ ಬದುಕಬಲ್ಲವು. ಸಮುದ್ರದ ಜೀವಿಗಳ ಇತರರ ಕೆಲಸಗಳಲ್ಲಿ ಇದು ತಲೆತೂರಿಸುವುದಿಲ್ಲ. ಬದಲಿಗೆ ತನ್ನ ಪಾಡಿಗೆ ತಾನು ಇರುತ್ತದೆ. ಇವುಗಳ ಮೈ ಗಟ್ಟಿಯಾದ ಚಿಪ್ಪಿನಿಂದ ಮಾಡಲ್ಪಟ್ಟಿದ್ದು, ಹೆಚ್ಚು ಮಾಂಸ ಇರುವುದಿಲ್ಲ. ಹಾಗಾಗಿ ಜನರು ಕೂಡ ಇವನ್ನು ತಿನ್ನುವುದಿಲ್ಲ. ಆದ್ದರಿಂದ ಸಮುದ್ರದಾಳದಲ್ಲಿ ಇವು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ ಎಂದು ಸಂಶೋಧಕರು ವಿವರಿಸಿದ್ದಾರೆ.

    ಸುಶಾಂತ್​ ಪ್ರೇಯಸಿ ರಿಯಾಗೆ ಅತ್ಯಾಚಾರ ಬೆದರಿಕೆ ಹಾಕಿದ ಇಬ್ಬರ ಸ್ಥಿತಿ ಏನಾಗಿದೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts