‘ಮೈಸೂರು ರೇಸ್‌ಕೋರ್ಸ್’ ಜಾಗದಲ್ಲಿ ಬಟಾನಿಕಲ್ ಗಾರ್ಡನ್ ನಿರ್ಮಾಣ

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿಕೆ

ಮೈಸೂರು: ‘ಮೈಸೂರು ರೇಸ್‌ಕೋರ್ಸ್’(ಎಂಆರ್‌ಸಿ)ಅನ್ನು ನಗರದ ಹೊರ ವಲಯಕ್ಕೆ ಸ್ಥಳಾಂತರಿಸಿ ಸದರಿ ಜಾಗದಲ್ಲಿ ಬಟಾನಿಕಲ್ ಗಾರ್ಡನ್ ನಿರ್ಮಾಣ ಮಾಡುವ ಉದ್ದೇಶ ಸರ್ಕಾರದ ಮುಂದಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದರು.
ನಾನು ನಡೆಸಿದ ನಿರಂತರ ಹೋರಾಟದ ಫಲವಾಗಿ ಹಿಂದಿನ ಸರ್ಕಾರ ರೇಸ್‌ಕೋರ್ಸ್ ಜಾಗದ ನವೀಕರಣ ಮಾಡಲಿಲ್ಲ. ನಮ್ಮ ಸಕಾ ರರ್ ಕೂಡ ಎಷ್ಟೇ ಒತ್ತಡ ಬಂದರೂ ಜಾಗದ ನವೀಕರಣ ಮಾಡಿಕೊಡುವುದಿಲ್ಲ. ಜಾಗದ ನವೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೇಸ್‌ಕೋರ್ಸ್ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರದಿಂದ 20 ಕಿ.ಮೀ. ದೂರದಲ್ಲಿ ರೇಸ್‌ಕೋರ್ಸ್‌ಗೆ ಜಾಗದ ಒದಗಿಸಲು ಸರ್ಕಾರ ಸಿದ್ಧವಿದೆ. ಈ ಕುರಿತು ರೇಸ್‌ಕೋರ್ಸ್ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಲಾಗುವುದು. ವಿವಾದವನ್ನು ನ್ಯಾಯಾಲಯದಲ್ಲಿ ಬಗೆಹರಿಸುಕೊಳ್ಳುವುದಕ್ಕಿಂತ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ. ರೇಸ್‌ಕೋರ್ಸ್ ಜಾಗವನ್ನು ಬಿಟ್ಟುಕೊಟ್ಟು ನಗರದ ಹೊರವಲಯದಲ್ಲಿ ಜಾಗ ಪಡೆಯುವಂತೆ ರೇಸ್‌ಕೋರ್ಸ್ ಆಡಳಿತ ಮಂಡಳಿ ಮನವೊಲಿಸುತ್ತೇನೆ ಎಂದರು.

ಮೈಸೂರು ರೇಸ್‌ಕೋರ್ಸ್‌ನವರ ಸ್ವಾಧೀನದಲ್ಲಿರುವ 139 ಎಕರೆ ಜಾಗ ಸರ್ಕಾರಕ್ಕೆ ಸೇರಿದ ಆಸ್ತಿಯಾಗಿದೆ. ಈ ಆಸ್ತಿ ಸಾರ್ವಜನಿಕರ ಉದ್ದೇಶಕ್ಕೆ ಬಳೆಯಾಗಬೇಕೆಂಬುದು ನಮ್ಮ ಉದ್ದೇಶ. ರೇಸ್‌ಕೋರ್ಸ್‌ನವರು ಕೂಡ ದೊಡ್ಡ ಮನಸ್ಸು ಮಾಡಿ ಜಾಗವನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟುಕೊಡಬೇಕೆಂದು ಮನವಿ ಮಾಡಿದರು.

ಪ್ರವಾಸೋದ್ಯಮ ಸಭೆ: ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಗುರುವಾರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಅದಾದ ನಂತರ ನಗರದಲ್ಲಿ ಮುಂದಿನ ವಾರ ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸಾರ್ವಜನಿಕರನ್ನು ಆಹ್ವಾನಿಸಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಚರ್ಚೆ ನಡೆಸಲಾಗುವುದು. ಅಲ್ಲದೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿಯೂ ಪ್ರವಾಸೋದ್ಯಮ ಅಭಿವೃದ್ಧಿಗೆ ಕುರಿತು ಸಭೆ ನಡೆಸಲಾಗುವುದು ಎಂದರು.

ನಗರ ದಸರಾ ವಸ್ತುಪ್ರದರ್ಶನ ಪ್ರಾಧಿಕಾರವನ್ನು ವರ್ಷದ 365 ದಿನವೂ ಚಟುವಟಿಕೆಯ ತಾಣವನ್ನಾಗಿ ಮಾಡುವ ಉದ್ದೇಶ ಇದೆ. ಅದೇ ರೀತಿ ಚುಂಚನಕಟ್ಟೆ ಜಲಪಾತವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಮಾಡಲಾಗುವುದು. ಜಲಪಾತದಲ್ಲಿ ಇನ್ನು ಮುಂದೆ ಯಾವುದೇ ದುರ್ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದರು.

ಪ್ರವಾಸಿ ಭೂಪಟದಲ್ಲಿ ಸುತ್ತೂರು
ರಾಜ್ಯದ ಪ್ರವಾಸೋದ್ಯಮ ಭೂಪಟದಲ್ಲಿ ಸುತ್ತೂರು ಮಠವನ್ನು ಸೇರಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೇಳಿದರು.

ಸುತ್ತೂರು ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದ್ದು, ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಸುತ್ತೂರು ಮಠಕ್ಕೂ ಭೇಟಿ ನೀಡಲಿ ಎಂಬ ಹಿನ್ನೆಲೆಯಲ್ಲಿ ಮಠವನ್ನು ಪ್ರವಾಸೋದ್ಯಮ ಭೂಪಟದಲ್ಲಿ ಸೇರಿಸಲು ಉದ್ದೇಶಿಸಲಾಗಿದೆ. ನಗರದ ರೇಷ್ಮೆ ನೇಯ್ಗೆ ಕಾರ್ಖಾನೆ ಈಗಾಗಲೇ ಪ್ರವಾಸೋದ್ಯಮ ಭೂಪಟದಲ್ಲಿ ಇದ್ದು, ಇಲ್ಲಿಗೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲು ಕ್ರಮ ವಹಿಸಲಾಗುವುದು ಎಂದರು.

Leave a Reply

Your email address will not be published. Required fields are marked *