ಪೇಪರ್​ ಬ್ಯಾಗ್​ಗೆ 3 ರೂಪಾಯಿ ಪಡೆದು 9000 ರೂಪಾಯಿ ದಂಡ ತುಂಬಿದ ಬಾಟಾ

ಚಂಡೀಗಢ​: ಇಲ್ಲಿನ ಗ್ರಾಹಕರ ವೇದಿಕೆ ಬಾಟಾ ಇಂಡಿಯಾ ಲಿಮಿಟೆಡ್​ಗೆ 9000 ರೂಪಾಯಿ ದಂಡ ವಿಧಿಸಿದೆ. ಶೋ ರೂಂಗೆ ಆಗಮಿಸಿದ ಗ್ರಾಹಕರ ಬಳಿ ಪೇಪರ್​ ಬ್ಯಾಗ್​ಗೆ ಮೂರು ರೂಪಾಯಿ ನೀಡುವಂತೆ ಹೇಳಿದ್ದಕ್ಕೆ ವೇದಿಕೆ ಈ ಕ್ರಮ ತೆಗೆದುಕೊಂಡಿದೆ.

ಚಂಡೀಗಢ ನಿವಾಸಿಯಾಗಿರುವ ದಿನೇಶ್​ ಪ್ರಸಾದ್​ ರಾತುರಿ ಎಂಬುವರು ಸ್ಥಳೀಯ ಬಾಟಾ ಅಂಗಡಿಯ ವಿರುದ್ಧ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ಬಾಟಾ ಅಂಗಡಿಯಲ್ಲಿ 399 ರೂಪಾಯಿಗೆ ಶೂ ಕೊಂಡರೆ ಅವರು 402 ರೂಪಾಯಿ ಚಾರ್ಜ್​ ಮಾಡಿದರು. ಮೂರು ರೂಪಾಯಿ ಪೇಪರ್​ ಬ್ಯಾಗ್​ಗೆ ಎಂದರು. ಆ ಮೂರು ರೂಪಾಯಿಯನ್ನು ವಾಪಸ್​ ಕೊಡಿಸಬೇಕು ಹಾಗೂ ಸರಿಯಾಗಿ ಸೇವೆ ಒದಗಿಸದ ಕಾರಣ ಪರಿಹಾರ ನೀಡಬೇಕು ಎಂದು ದೂರಿನಲ್ಲಿ ತಿಳಿಸಿದ್ದರು.

ಆದರೆ ಬಾಟಾ ಇಂಡಿಯಾ ಈ ಆರೋಪವನ್ನು ನಿರಾಕರಿಸಿತ್ತು. ನಾವು ಸೇವೆ ನೀಡುವಲ್ಲಿ ಎಲ್ಲಿಯೂ ಎಡವಿಲ್ಲ ಎಂದು ಹೇಳಿತ್ತು. ನಂತರ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ, ಗ್ರಾಹಕರ ಬಳಿ ಬ್ಯಾಗ್​ಗೆ ಹಣ ಕೇಳಿದ್ದು ಸರಿಯಲ್ಲ. ಯಾರು ತಮ್ಮ ಅಂಗಡಿಯ ವಸ್ತುಗಳನ್ನು ತೆಗೆದುಕೊಳ್ಳುತ್ತಾರೋ, ಅವರಿಗೆ ಉಚಿತವಾಗಿ ಚೀಲ ನೀಡಬೇಕು ಎಂದು ಹೇಳಿದೆ.

ದೂರು ನೀಡಿದ ಗ್ರಾಹಕನಿಗೆ 3000 ರೂಪಾಯಿ ಪರಿಹಾರ ನೀಡಬೇಕು ಹಾಗೂ ಗ್ರಾಹಕರಿಗೆ ಸಂಬಂಧಪಟ್ಟ ಕಾನೂನು ನೆರವು ನೀಡುವ ಸಲುವಾಗಿ ರಾಜ್ಯ ಗ್ರಾಹಕರ ವಿವಾದ ಪರಿಹಾರ ಆಯೋಗದಲ್ಲಿ 5000 ರೂಪಾಯಿ ಡಿಪೋಸಿಟ್​ ಇಡಲು ಗ್ರಾಹಕರ ವೇದಿಕೆ ಬಾಟಾಕ್ಕೆ ಸೂಚನೆ ನೀಡಿದೆ.