ಪಟ್ಟಣ ಪಂಚಾಯಿತಿಗಿಲ್ಲ ಸ್ವಂತ ಕಟ್ಟಡ ಭಾಗ್ಯ

 

ಹನೂರು: ಇಲ್ಲಿನ ಪಟ್ಟಣ ಪಂಚಾಯಿತಿಗೆ ಸ್ವಂತ ಕಟ್ಟಡವಿಲ್ಲದೇ ಬಸ್ ನಿಲ್ದಾಣದ ಬಳಿ ಇರುವ ವಾಣಿಜ್ಯ ಸಂಕೀರ್ಣದ ಸಭಾಂಗಣದಲ್ಲಿ ಕಚೇರಿ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಇಲ್ಲಿಯೂ ಮೂಲ ಸೌಕರ್ಯಗಳಿಲ್ಲದ ಕಾರಣ ಪಟ್ಟಣದ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ.


ಹನೂರು ಪಟ್ಟಣವು ಈ ಹಿಂದೆ ಗ್ರಾಮ ಪಂಚಾಯಿತಿ ಕೇಂದ್ರವಾಗಿತ್ತು. ನಂತರ ಜನಸಂಖ್ಯೆಯ ಹೆಚ್ಚಳದಿಂದ 2002ರಲ್ಲಿ ಪಟ್ಟಣ ಪಂಚಾಯಿತಿಯಾಗಿ ರಚನೆಯಾಯಿತು. ಈ ವೇಳೆ ಪಟ್ಟಣ ಪಂಚಾಯಿತಿಯು ಲೋಕೋಪಯೋಗಿ ಇಲಾಖೆಯ ವಸತಿ ಗೃಹದ ಆವರಣದಲ್ಲಿರುವ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿತ್ತು.

ಆದರೆ, ಈ ಕಟ್ಟಡವು ಕಿರಿದಾಗಿದ್ದರಿಂದ ಕಚೇರಿಯ ಕೆಲಸ ಕಾರ್ಯಗಳನ್ನು ನಿರ್ವಹಿಸಲು ನೌಕರರಿಗೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಪಪಂ ಆಡಳಿತ ಬಸ್ ನಿಲ್ದಾಣದಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣದಲ್ಲಿರುವ ದೊಡ್ಡ ಹಾಲ್‌ಗೆ 2016ರಲ್ಲಿ ಪಟ್ಟಣ ಪಂಚಾಯಿತಿ ಕಚೇರಿಯನ್ನು ಸ್ಥಳಾಂತರಿಸಿತು.

ವಾಣಿಜ್ಯ ಸಂಕೀರ್ಣದ ಕಟ್ಟಡದಲ್ಲಿ ಮೂಲ ಸೌಕರ್ಯಗಳಿಲ್ಲದಿರುವುದರಿಂದ ನೌಕರರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಜತೆಗೆ ನೌಕರರಿಗೆ ಪ್ರತ್ಯೇಕ ಕೌಂಟರ್ ಇಲ್ಲದ ಕಾರಣ ಕೆಲಸ ನಿರ್ವಹಿಸಲು ತೊಡಕಾಗಿದೆ. ಇದನ್ನು ಮನಗಂಡು ಪಟ್ಟಣ ಪಂಚಾಯಿತಿ ಆಡಳಿತವು ಸ್ವಂತ ಕಟ್ಟಡವನ್ನು ಹೊಂದುವ ನಿಟ್ಟಿನಲ್ಲಿ ಕಳೆದ ವರ್ಷ ಸ್ಥಳವನ್ನು ಗುರುತಿಸಿದ್ದು, ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನವೂ ಬಿಡುಗಡೆಯಾಗಿದೆ. ಆದರೆ, ಇಲ್ಲಿಯ ತನಕ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿಲ್ಲದಿರುವುದು ವಿಪರ್ಯಾಸ.

ಮೂಲ ಸೌಕರ್ಯ ಮರೀಚಿಕೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 13 ವಾರ್ಡ್‌ಗಳಿದ್ದು, ಸುಮಾರು 12 ಸಾವಿರ ಜನಸಂಖ್ಯೆ ಒಳಗೊಂಡಿದೆ. ನಿತ್ಯ ಪಟ್ಟಣದ ವಿವಿಧ ವಾರ್ಡ್‌ಗಳ ನಾಗರಿಕರು ಕಟ್ಟಡ ಪರವಾನಗಿ, ಖಾತೆ ಬದಲಾವಣೆ, ಪ್ರಮಾಣಪತ್ರಗಳ ಪಡೆಯುವಿಕೆ, ತೆರಿಗೆ ಪಾವತಿ, ಸರ್ಕಾರದ ಸವಲತ್ತುಗಳು ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಆಗಮಿಸುತ್ತಾರೆ. ಕಚೇರಿಯು ವಾಣಿಜ್ಯ ಸಂಕೀರ್ಣದ ಮೇಲಂತಸ್ತಿನಲ್ಲಿರುವ ಪರಿಣಾಮ ಅಂಗವಿಕಲರು ಹಾಗೂ ವಯೋವೃದ್ಧರಿಗೆ ಹತ್ತಿ, ಇಳಿಯಲು ತೊಂದರೆಯಾಗುತ್ತಿದೆ. ಜತೆಗೆ ಕಚೇರಿಗೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಮಾಹಿತಿ ಕೇಂದ್ರ ಸೇರಿದಂತೆ ಇತರೆ ಸೌಲಭ್ಯಗಳಿಲ್ಲ.

ಕೂರಲು ಕುರ್ಚಿಗಳಿಲ್ಲ: ಕಚೇರಿಯಲ್ಲಿ ಕಂದಾಯ, ಆರೋಗ್ಯ, ತಾಂತ್ರಿಕ, ಸಮುದಾಯ ಸಂಘಟನೆಯ ಶಾಖೆ ಸೇರಿದಂತೆ ಇತರೆ ಶಾಖೆಗಳಿವೆ. ಮುಖ್ಯಾಧಿಕಾರಿಯನ್ನು ಹೊರತುಪಡಿಸಿದರೆ ಉಳಿದ ಅಧಿಕಾರಿಗಳಿಗಾಗಲಿ, ನೌಕರರಿಗಾಗಲೀ ಪ್ರತ್ಯೇಕ ಕೌಂಟರ್ ವ್ಯವಸ್ಥೆಯಿಲ್ಲದ ಕಾರಣ ಅಧಿಕಾರಿಗಳು ಹಾಲ್‌ನ ಅಲ್ಲಲ್ಲಿ ಟೇಬಲ್ ಹಾಕಿಕೊಂಡು ಕಾರ್ಯನಿರ್ವಹಿಸುತ್ತಾರೆ.

ತಮ್ಮ ಕೆಲಸ ಕಾರ್ಯಗಳಿಗೆ ಹಾಗೂ ಅಧಿಕಾರಿಗಳ ಭೇಟಿಗೆ ಕಚೇರಿಗೆ ಬರುವ ಸಾರ್ವಜನಿಕರು ಕುರ್ಚಿಗಳಿಲ್ಲದ ಕಾರಣ ತಮ್ಮ ಕೆಲಸ ಕಾರ್ಯಗಳು ಆಗುವ ತನಕ ನಿಂತುಕೊಳ್ಳಬೇಕಾಗುತ್ತದೆ. ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಅಧಿಕಾರಿಗಳು ಮಾತ್ರ ಕಂಡೂ ಕಾಣದಂತೆ ಸುಮ್ಮನಿದ್ದಾರೆ.

ಸಿಬ್ಬಂದಿ ಕೊರತೆ: ಮುಖ್ಯಾಧಿಕಾರಿ ಸೇರಿದಂತೆ ಕಂದಾಯ, ಆರೋಗ್ಯ, ತಾಂತ್ರಿಕ ಶಾಖೆ ಹಾಗೂ ಇನ್ನಿತರ ಘಟಕಗಳಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು 31 ಹುದ್ದೆಗಳಿರಬೇಕು. ಆದರೆ ಮುಖ್ಯಾಧಿಕಾರಿ, ಸಂಘಟನಾಧಿಕಾರಿ, ಇಂಜಿನಿಯರ್ ಅನ್ನು ಹೊರತುಪಡಿಸಿದರೆ ಉಳಿದಂತೆ ಆರೋಗ್ಯ, ಕಂದಾಯ ಸೇರಿದಂತೆ ಕಚೇರಿಯ ಕಾಯಂ ಸಿಬ್ಬಂದಿ ಇಲ್ಲ. ಇದರಿಂದ ಗುತ್ತಿಗೆ ಆಧಾರದ ಮೇಲೆ ನೌಕರರನ್ನು ನಿಯೋಜಿಸಿಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ.

ಸ್ವಂತ ಕಟ್ಟಡ ಬೇಕಿದೆ:  ಪಟ್ಟಣ ಪಂಚಾಯಿತಿಯ ಸಾಮಾನ್ಯ, ವಿಶೇಷ ಹಾಗೂ ಇತರೆ ಸಭೆ, ಸಮಾರಂಭಗಳನ್ನು ಆಯೋಜಿಸಲು ಪ್ರತ್ಯೇಕವಾದ ಸಭಾಂಗಣವಿಲ್ಲ. ಇದರಿಂದ ಕಚೇರಿಯ ಆವರಣದಲ್ಲಿಯೇ ಸಭೆ, ಸಮಾರಂಭಗಳನ್ನು ಬಾಗಿಲು ಮುಚ್ಚಿಕೊಂಡು ನಡೆಸಲಾಗುತ್ತಿದೆ. ಜತೆಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೂ ಸಹ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇಲ್ಲದ ಕಾರಣ ಕಚೇರಿಯ ಒಂದು ಮೂಲೆಯಲ್ಲಿ ಕೂರುವಂತಹ ಸನ್ನಿವೇಶವಿದೆ.

ಇಷ್ಟೆಲ್ಲಾ ಸಮಸ್ಯೆಗಳಿಂದ ಬಳಲುತ್ತಿರುವ ಕಚೇರಿಗೆ ಸ್ವಂತ ಕಟ್ಟಡವನ್ನು ನಿರ್ಮಿಸುವ ಮೂಲಕ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮ ವಹಿಸಬೇಕಿದೆ.

ಪಟ್ಟಣ ಪಂಚಾಯಿತಿ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸಲು ಪಟ್ಟಣದ ಕಂದಾಯ ಇಲಾಖೆ ಕಚೇರಿಯ ಬಳಿ ಜಾಗ ಗುರುತಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ 3.5 ಕೋಟಿ ರೂ. ಕ್ರಿಯಾ ಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಮೊದಲನೇ ಹಂತದಲ್ಲಿ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಕಂದಾಯ ಇಲಾಖೆಯು ಜಾಗವನ್ನು ಪಟ್ಟಣ ಪಂಚಾಯಿತಿಗೆ ವರ್ಗಾಯಿಸಿದ ನಂತರ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು.
ಮೋಹನ್‌ಕೃಷ್ಣ, ಪಪಂ ಮುಖ್ಯಾಧಿಕಾರಿ.

 

Leave a Reply

Your email address will not be published. Required fields are marked *