ಬಾಗಲಕೋಟೆ: ಪ್ರತಿಷ್ಠಿತ ಬಸವೇಶ್ವರ ಸಹಕಾರಿ ಬ್ಯಾಂಕ್ನ ನಗರದ ಬಿವಿವಿ ಸಂಘದ ಕಾಲೇಜು ಶಾಖೆಯ ನೂತನ ಎಟಿಎಂ ಹಾಗೂ ನವೀಕರಣಗೊಂಡ ಶಾಖೆ ಉದ್ಘಾಟನೆ ಸಮಾರಂಭವು ಬುಧವಾರ ಅದ್ಧೂರಿಯಾಗಿ ನಡೆಯಿತು.
ಚರಂತಿಮಠದ ಪ್ರಭು ಸ್ವಾಮೀಜಿ ನವೀಕರಣಗೊಂಡ ಶಾಖೆ ಮತ್ತು ಎಟಿಎಂ ಸೌಲಭ್ಯವನ್ನು ಶಾಸಕ ವೀರಣ್ಣ ಚರಂತಿಮಠ ಉದ್ಘಾಟಿಸಿದರು.
ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿ, ಬಸವೇಶ್ವರ ಸಹಕಾರಿ ಬ್ಯಾಂಕ್ ಸಹಕಾರಿ ಕ್ಷೇತ್ರದಲ್ಲಿ ತನ್ನದೇಯಾದ ಛಾಪು ಮೂಡಿಸಿದೆ. ಕಾಲ ಕಾಲಕ್ಕೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಬಸವೇಶ್ವರ ಬ್ಯಾಂಕ್ ಅಳವಡಿಸಿಕೊಂಡಿದೆ. ಆರ್ಟಿಜಿಎಸ್, ಎನ್ಇಎಫ್ಟಿ, ಎಟಿಎಂ ಸೌಲಭ್ಯಗಳನ್ನು ಕಲ್ಪಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.
ಸೆ. 16 ರಂದು ಬ್ಯಾಂಕಿನ ಜನರಲ್ ಬಾಡಿ ಮಿಟಿಂಗ್ ಇದೆ. ನಂತರ ವಿಜಯಪುರ ಜಿಲ್ಲೆಯ ಕೊಲ್ಹಾರ, ಮುದ್ದೇಬಿಹಾಳ, ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ನೂತನ ಮೂರು ಶಾಖೆಗಳನ್ನು ಆರಂಭಿಸಲಾಗುವುದು. ಆರ್.ಬಿ.ಐ 10 ಹೊಸ ಶಾಖೆ ಆರಂಭಿಸಲು ಅನುಮತಿ ನೀಡಿತ್ತು. ಈಗಾಗಲೇ ಏಳು ಶಾಖೆಗಳಿಗೆ ಚಾಲನೆ ದೊರೆತಿದೆ. ಒಟ್ಟು 27 ಶಾಖೆಗಳಿದ್ದು, ಇದರಲ್ಲಿ 12 ಶಾಖೆಗಳಿಗೆ ಸ್ವಂತ ಕಟ್ಟಡ ಹೊಂದಿವೆ. ಬಸವೇಶ್ವರ ಬ್ಯಾಂಕ್ ಶಾಖೆಗಳನ್ನು ಬರೀ ಉತ್ತರ ಕರ್ನಾಟಕ ಭಾಗಕ್ಕಷ್ಟೇ ಅಲ್ಲದೆ ದಕ್ಷಿಣ ಕರ್ನಾಟಕಕ್ಕೂ ವಿಸ್ತರಿಸುವ ಗುರಿ ಇದೆ. ಆರ್.ಬಿ.ಐ ಅನುಮತಿ ನೀಡಿದಲ್ಲಿ ಮುಂದಿನ ದಿನಗಳಲ್ಲಿ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಗೂ ನಮ್ಮ ಶಾಖೆಗಳನ್ನು ಆರಂಭಿಸಲಾಗುವುದು. ನಿಡಗುಂದಿ ಶಾಖೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ನಲವತ್ತು ವರ್ಷಗಳಿಂದ ಬಸವೇಶ್ವರ ಬ್ಯಾಂಕಿನ ಕಾಲೇಜ್ನ ಶಾಖೆ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಬಸವೇಶ್ವರ ಬ್ಯಾಂಕಿನ ಮೊದಲ ಶಾಖೆ ಎನ್ನುವ ಹೆಗ್ಗಳಿಕೆಗೆ ಕಾಲೇಜ್ ಶಾಖೆ ಪಾತ್ರವಾಗಿದೆ. ಆಧುನಿಕ ಸೌಲಭ್ಯ ಒದಗಿಸಿ ಶಾಖೆ ನವೀಕರಣಗೊಳಿಸಿ ಇದೀಗ ಗ್ರಾಹಕರ ಸೇವೆಗೆ ಅರ್ಪಿಸಲಾಗಿದೆ. ನಮ್ಮ ಬ್ಯಾಂಕ್ ಸಾಧನೆಯ ಹಿಂದೆ ಗ್ರಾಹಕರು, ನಿರ್ದೇಶಕ ಮಂಡಳಿ ಸಹಕಾರವಿದೆ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಬಾಂಡಗೆ, ಬಸವೇಶ್ವರ ಬ್ಯಾಂಕ್ ಉಪಾಧ್ಯಕ್ಷ ಎಂ.ಜಿ. ವಾಲಿ, ನಿರ್ದೇಶಕರಾದ ಮುತ್ತು ಜೋಳದ, ಸಂಗಪ್ಪ ಕಂಕಣಮೇಲಿ, ರವಿ ಪಟ್ನಣ, ಮನೋಹರ ಏಳಮ್ಮಿ, ರಂಗನಗೌಡ ದಂಡನ್ನವರ ಮತ್ತಿತರರಿದ್ದರು.