ಬೆಟ್ಟದಪುರ: ಭಕ್ತರ ಇಷ್ಟಾರ್ಥವನ್ನು ಕರುಣಿಸಿ, ಲೋಕಕಲ್ಯಾಣಕ್ಕಾಗಿ ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಗ್ರಾಮದಲ್ಲಿ ನೆಲೆಸಿರುವ ಶ್ರೀ ಬಸವೇಶ್ವರ ಸ್ವಾಮಿ ಸರ್ವಭಕ್ತರ ಆರಾಧ್ಯ ದೈವವಾಗಿದೆ.
ಶತಮಾನದಿಂದಲ್ಲೂ ಭಕ್ತಾದಿಗಳ ರಕ್ಷಣೆಗಾಗಿ ಹಾಗೂ ಭಕ್ತರ ನಿಷ್ಕಲ್ಮಶ ಮನಸ್ಸಿನಿಂದ ಬೇಡಿಕೊಳ್ಳುವ ಇಷ್ಟಾರ್ಥವನ್ನು ಈಡೇರಿಸುವ ಬಸವೇಶ್ವರ ಸ್ವಾಮಿ ಭಕ್ತರ ರಕ್ಷಕನಾಗಿ, ನಂಬಿಕೆಯ ದೈವವಾಗಿದೆ. ದೇವಸ್ಥಾನದಲ್ಲಿ ವಾರದ ಪ್ರತಿ ಸೋಮವಾರ ಹಾಗೂ ಶುಕ್ರವಾರ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಪೂಜೆ ನಡೆಯುತ್ತೆ. ವರ್ಷದಲ್ಲಿ ಬರುವ ಸಂಕ್ರಾತಿ, ಶಿವರಾತ್ರಿ, ಯುಗಾದಿ, ಗೌರಿ- ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ ಸೇರಿದಂತೆ ವಿವಿಧ ಹಬ್ಬಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರಗುತ್ತವೆ. ಇದಲ್ಲದೆ ಕಡೇ ಕಾರ್ತಿಕ ಮಾಸದಲ್ಲಿ ಪ್ರತಿದಿನ ಪೂಜೆಗಳು ನಡೆಯುತ್ತವೆ. ಭಕ್ತರು ತಮ್ಮ ಸಮಸ್ಯೆಗಳನ್ನು ಹೊತ್ತು ತಂದು ಶ್ರೀ ಬಸವೇಶ್ವರನ ಮುಂದೆ ಇಟ್ಟು ನಿವಾರಣೆಗೆ ಆರಾಧಿಸಿ ಹರಕೆ ಮಾಡಿಕೊಳ್ಳುತ್ತಾರೆ. ಅಂದುಕೊಂಡಂತೆ ಈಡೇರಿದರೆ ಹಲವು ರೀತಿಯಲ್ಲಿ ಹರಕೆಯನ್ನು ತಿರಿಸುತ್ತಾರೆ.
ದೇಗುಲಕ್ಕೆ ಸಮೀಪದ ಬೆಟ್ಟದಪುರ, ರಾವಂದೂರು, ಹಾರನಹಳ್ಳಿ, ಪಿರಿಯಾಪಟ್ಟಣ ವ್ಯಾಪ್ತಿಯ ಭಕ್ತಾದಿಗಳು ಅಲ್ಲದೆ ದೂರದ ಕೊಡಗು, ಮೈಸೂರು, ಬೆಂಗಳೂರು, ಹಾಸನ, ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ವಿಶೇಷ ಪೂಜಾ ದಿನಗಳಲ್ಲಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.
ಐತಿಹಾಸಿಕ ಕುಡುಕೂರು ದೀವಟಿಗೆ ಜಾತ್ರೆ
ಕುಡುಕೂರು ದೀವಟಿಗೆ(ಪಂಚಿನ) ಜಾತ್ರೆಗೆ ತನ್ನದೆ ಐತಿಹಾಸಿಕ ಮಹತ್ವ ಹೊಂದಿದೆ. ಪ್ರತಿ ವರ್ಷ ದೀಪಾವಳಿಯ ಬಲಿಪಾಡ್ಯಮಿ ದಿನದಂದು ನಡೆಯುವ ಈ ಉತ್ಸವಕ್ಕೆ ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಬಲಿಪಾಡ್ಯಮಿ ದಿನದಂದು ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ದೇವಾಲಯದಿಂದ ಬೆಳ್ಳಿ ಬಸಪ್ಪ ಹಾಗೂ ಶ್ರೀ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಉತ್ಸವ ಮೂರ್ತಿಗಳನ್ನು ಹೊರಡಿಸಲಾಗುತ್ತದೆ. ಇಲ್ಲಿಂದ ಮೂರ್ತಿಗಳನ್ನು ಹೊತ್ತು ಬೆಟ್ಟದಪುರದ ಸುತ್ತಮುತ್ತ ಗ್ರಾಮಗಳಲ್ಲಿ ಪೂಜೆ ಸಲ್ಲಿಸಲಾಗುತ್ತದೆ.
ಈ ವೇಳೆ ಸುತ್ತಮುತ್ತಲ ಸಾವಿರಾರು ಹಳ್ಳಿಯ ಜನರು ದೀವಟಿಗೆಗಳನ್ನು (ಪಂಜು) ಹಿಡಿದು ದೇವರ ಹಾಡುಗಳನ್ನು ಹಾಡುತ್ತ, ಬೆಟ್ಟದ ಸುತ್ತಲೂ ಇರುವ ಗ್ರಾಮಗಳಿಗೆ ಭೇಟಿ ನೀಡುತ್ತಾರೆ. ಈ ವೇಳೆ ಪ್ರತಿ ಗ್ರಾಮದಲ್ಲೂ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಂದು ರಾತ್ರಿ ಎಂಟರಿಂದ ಒಂಬತ್ತು ಗಂಟೆ ಸುಮಾರಿಗೆ ಕುಡುಕೂರು ಶ್ರೀ ಬಸವೇಶ್ವರ ದೇವರ ದೇವಾಲಯಕ್ಕೆ ಆಗಮಿಸಿದ ಪಂಜಿನ ಮೆರವಣಿಗೆ ದೇವಾಲಯದ ಸುತ್ತಲೂ ಮೂರು ಪ್ರದಕ್ಷಿಣೆ ಹಾಕುತ್ತಾರೆ.
ಈ ದೀವಟಿಗೆ ಸೇವೆ ಸಲ್ಲಿಸುವ ಎಲ್ಲ ಭಕ್ತರು ಒಂದಲ್ಲ ಒಂದು ಕಾರಣಕ್ಕಾಗಿ ದೇವರಿಗೆ ಹರಕೆ ಹೊತ್ತವರಾಗಿರುತ್ತಾರೆ. ಅವರಲ್ಲದೆ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಈ ಸೇವೆಯಲ್ಲಿ ಪಾಲ್ಗೊಳ್ಳುವ ಯುವಕರಿಗಂತೂ ಕೊರತೆ ಇಲ್ಲ. ಈ ಹರಕೆಯನ್ನು ಮಾಡಿಕೊಂಡವರು ಆ ದಿನ ಬೆಳಗ್ಗೆಯಿಂದ ಸಂಜೆಯವರೆಗೆ ಉಪವಾಸವಿದ್ದು ಸೇವೆ ಸಲ್ಲಿಸುತ್ತಾರೆ.
ಮಹಿಮೆಯ ಗೋಗಲ್ಲು
ಇಲ್ಲಿನ ಅರಸರೊಬ್ಬರ ಮನೆಯಲ್ಲಿ ಇದ್ದಂತ ಹಸು(ಗೋವು), ತಾನೇ ಹೋಗಿ ಸಮೀಪದ ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಶಿವಲಿಂಗಕ್ಕೆ ಕ್ಷೀರಾಭಿಷೇಕದಿಂದ ಪೂಜಿಸುತ್ತಿತ್ತು. ಆದರೆ, ಮನೆಯಲ್ಲಿ ಹಾಲು ನೀಡುತ್ತಿರಲಿಲ್ಲ ಎಂಬುದನ್ನು ಅರಿತ ಗೋಪಾಲಕ ಕೊಡಲಿಯಿಂದ ಹಸುವಿಗೆ ಹೊಡೆದಾಗ ಸಂಪೂರ್ಣ ರಕ್ತಮಯವಾಗುತ್ತದೆ. ಈ ವೇಳೆ ಆಶರೀರವಾಣಿಯೊಂದು ಕೇಳಿಸುತ್ತದೆ. ತಾನು ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಎನ್ನುತ್ತ, ತನ್ನನ್ನು ಆರಾಧಿಸುವಂತೆ ಹೇಳುತ್ತದೆ. ಬಳಿಕ ಅರಸನು ಸಂಪ್ರದಾಯದಂತೆ ಹಸುವಿನ ಸಮಾಧಿ ಮಾಡಿ, ಗೋಗಲ್ಲು ಪ್ರತಿಷ್ಠಾಪಿಸಿದ್ದಾರೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗ್ರಾಮದ ಪ್ರತಿಯೊಂದು ಮನೆಯವರು ಗೋಗಲ್ಲಿಗೆ ನೈವೇದ್ಯ ಮಾಡಿ, ಪೂಜೆ ಸಲ್ಲಿಸುವುದು ಅಂದಿನಿಂದಲ್ಲೂ ವಾಡಿಕೆ ಇದೆ ಎಂದು ಹೇಳುತ್ತಾರೆ ಗ್ರಾಮದ ಹಿರಿಯರು. ಅಲ್ಲದೆ ಶ್ರೀ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಜೋಳರ ಕಾಲದ ಹಲವು ಶಾಸನಗಳನ್ನು ಪ್ರತಿಷ್ಠಾಪಿಸಲಾಗಿದೆ. ಅವರ ಆಳ್ವಿಕೆಯಲ್ಲಿ ಬರೆದ ಚಿತ್ರಗಳು, ಬರಹಗಳನ್ನು ಈ ಶಾಸನ ಮೂಲಕ ಕಾಣಬಹುದಾಗಿದೆ.