ಡಾ. ಚಂಪಾಗೆ ಬಸವಶ್ರೀ ಪ್ರಶಸ್ತಿ ಪ್ರಕಟಿಸಿದ ಡಾ. ಶಿವಮೂರ್ತಿ ಮುರುಘಾ ಶರಣರು: ಮೇ 7ರಂದು ಚಿತ್ರದುರ್ಗದಲ್ಲಿ ಪ್ರಧಾನ

ಚಿತ್ರದುರ್ಗ: ಶ್ರೀ ಮುರುಘಾ ಮಠದ ಬಸವ ಕೇಂದ್ರ ಬಸವ ಜಯಂತಿ ಅಂಗವಾಗಿ ಕೊಡಮಾಡುವ 2018ನೇ ಸಾಲಿನ ಬಸವಶ್ರೀ ಪ್ರಶಸ್ತಿಗೆ ಸಾಹಿತಿ ಡಾ. ಚಂದ್ರಶೇಖರ ಪಾಟೀಲ ಅವರನ್ನು ಆಯ್ಕೆ ಮಾಡಿರುವುದಾಗಿ ಶ್ರೀ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮೇ 7ರ ಬೆಳಗ್ಗೆ 11ಕ್ಕೆ ಶ್ರೀ ಮಠದ ಅನುಭವ ಮಂಟಪದಲ್ಲಿ ಬಸವ ಜಯಂತಿ ಅಂಗವಾಗಿ ಆಯೋಜನೆಗೊಳ್ಳಲಿರುವ ಸರ್ವ ಶರಣ, ಸಂತ ಮತ್ತು ದಾರ್ಶನಿಕರ ಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದರು. 5 ಲಕ್ಷ ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುವ ಈ ಪ್ರಶಸ್ತಿಯನ್ನು 1997ರಿಂದಲೂ ನೀಡಲಾಗುತ್ತಿದೆ.

ಮಾತೆ ಗಂಗಾದೇವಿ ಸಮಾರಂಭದ ಸಾನ್ನಿಧ್ಯ ವಹಿಸಲಿದ್ದಾರೆ. ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ರೆವರೆಂಡ್ ಟಿ.ಡಿ. ಥಾಮಸ್, ಜುನೈದ್ ಸಖಾಫಿ, ವೆಂಕಟೇಶ್ ಲಾಡ್ ಉಪಸ್ಥಿತರಿರುತ್ತಾರೆ.