ದೇವೇಗೌಡರು-ರೇವಣ್ಣರದ್ದು ಒಂದೇ ಜಾತಕ, ಕುಮಾರಸ್ವಾಮಿಯವರದ್ದು ಸ್ವತಂತ್ರ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ ಜಾತಕ ತುಂಬ ನಂಬುತ್ತಾರೆ. ಎಲ್ಲದಕ್ಕೂ ಜಾತಕವೇ ಮುಖ್ಯ ಎಂದು ಹೇಳುತ್ತಾರೆ. ಒಂದು ಸಾರಿ ನಿನಗೆ ಜಾತಕದ ಬಗ್ಗೆ ಗೊತ್ತಿಲ್ಲ ಎಂದು ನನಗೂ ಹೇಳಿದ್ದರು ಎಂದು ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಸುವಾಗ ಸಮ್ಮಿಶ್ರ ಸರ್ಕಾರಗಳ ಆಡಳಿತದ ಬಗ್ಗೆ ಉಲ್ಲೇಖಿಸಿ, ದೇವೇಗೌಡರು ನಿನಗೆ, ನಿಮ್ಮಪ್ಪಗೆ ಜಾತಕದ ಬಗ್ಗೆ ಗೊತ್ತಿಲ್ಲ ಸುಮ್ಮನಿರು ಅಂದಿದ್ದರು. ದೇವೇಗೌಡರ ಜಾತಕ, ರೇವಣ್ಣರ ಜಾತಕ ಒಟ್ಟಿಗೆ ಕೂಡಿದೆ. ಆದರೆ, ಎಚ್​​ಡಿಕೆಯದು ಸ್ವತಂತ್ರ ಜಾತಕ. ಅದೊಂದು ಬೇರೆ ಜಾತಕ. ಹೀಗಾಗಿಯೇ ದೇವೇಗೌಡರ ಜತೆಗೆ ರೇವಣ್ಣರ ಜಾತಕ ಕೂಡಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಜಾತಕ ದೇವೇಗೌಡ ಜಾತಕದ ಜತೆ ಕೂಡಲ್ಲ ಎಂದುಕೊಂಡಿದ್ದೆ. ಆದರೆ, ಸಿದ್ದರಾಮಯ್ಯ ಜೆಡಿಎಸ್ ಪಕ್ಷದಿಂದ ಹೊರ ಬಂದರು. ಅಧಿಕಾರ ಪಡೆದುಕೊಂಡರು. ಆಗ ಜಾತಕ ಕೂಡಿಲ್ಲ ಎಂದುಕೊಂಡಿದ್ದೆ. ಈಗ ಮತ್ತೆ ಒಂದಾಗಿದ್ದಾರೆ. ಹಾಗಾಗಿ ಅವರ ಜಾತಕ ಒಂದೇ ಎಂಬುದು ಸಾಬೀತಾಗಿದೆ. ‘ಸಿದ್ದರಾಮಯ್ಯ, ದೇವೇಗೌಡರ ಜಾತಕ ಒಂದೆ’ ಎಂದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಸಿ.ಟಿ.ರವಿ ಡಿ.ಕೆ.ಶಿವಕುಮಾರ್​ ಹೆಸರು ಪ್ರಸ್ತಾಪಿಸಿ ಒಂದೇ ಬೋನಿನಲ್ಲಿ ಎರಡು ಹುಲಿಗಳು ಇರಲು ಸಾಧ್ಯವೇ? ಈ ಎರಡು ಮದಗಜಗಳು ಒಂದೇ ಕಡೆ ಇರೋದು ಹೇಗೆ? ಇದನ್ನು ಸ್ವಲ್ಪ ತಿಳಿಸಿ ಎಂದರು.

ಮತ್ತೆ ಮಾತು ಆರಂಭಿಸಿದ ಬಸವರಾಜ ಬೊಮ್ಮಾಯಿ, ರವಿ ಸುಮ್ಮನಿರಪ್ಪಾ, ಡಿಕೆಶಿ ಅವರದ್ದು ದೊಡ್ಡ ಜಾತಕದ ವಿಚಾರವಿದೆ. ತಮಿಳುನಾಡಿನ ಬಾಲಾಜಿಯಿಂದ ಹಿಡಿದು ತುಮಕೂರಿನ ನೊಣವಿನಕೆರೆಯವರೆಗೂ ಇದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)