ತತ್ತ್ವ ಸಿದ್ಧಾಂತ, ಅನುಭವಕ್ಕೆ ಬೆಲೆ ಇಲ್ಲ

ಮುಧೋಳ:ನಾನು 38 ವರ್ಷದಿಂದ ಸದನದಲ್ಲಿ ದ್ದೇನೆ. 16 ಜನ ಮುಖ್ಯಮಂತ್ರಿ, 12 ಜನ ಸಭಾಧ್ಯಕ್ಷರನ್ನು ಕಂಡಿದ್ದೇನೆ. ಆದರೆ ಇಂದಿನ ಸ್ವಾರ್ಥ, ಸಿದ್ಧಾಂತ ರಹಿತ ಸರ್ಕಾರವನ್ನು ನಾನು ನೋಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೋವು ತೋಡಿಕೊಂಡರು. ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇರದ ನನಗೆ ಮಂತ್ರಿ ಸ್ಥಾನ ನೀಡಿದಾಗ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗದಂತೆ ನೋಡಿಕೊಂಡಿದ್ದೇನೆ. ಶಿಕ್ಷಣ ಸಚಿವನಾಗಿದ್ದಾಗ ರಾಜ್ಯದಲ್ಲಿ ಪ್ರೌಢ ಹಾಗೂ ಪಿಯು ಕಾಲೇಜುಗಳ ಸ್ಥಾಪನೆ, ಶಿಕ್ಷಕರ ನೇಮಕಾತಿ ಸೇರಿ ನೂರಾರು ಅಭಿವೃದ್ಧಿಪರ ಕಾರ್ಯ ಮಾಡಿದ್ದರ ಬಗ್ಗೆ ತೃಪ್ತಿ ಇದೆ. ಮೇಲ್ಮನೆ ಸಭಾಪತಿಯಾಗಿದ್ದಾಗ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ದುಂದು, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿದ್ದೆ ಎಂದರು. ನನಗೆ ಸಚಿವ ಸ್ಥಾನ ಹಾಗೂ ಸಭಾಪತಿ ಸ್ಥಾನ ಯಾಕೆ ನೀಡಿಲ್ಲ ಎಂಬುದು ನನಗೂ ತಿಳಿಯು ತ್ತಿಲ್ಲ. ನಾನು ಅದಕ್ಕಾಗಿ ಲಾಬಿ ಮಾಡಿಲ್ಲ. ಸಚಿವ ಸ್ಥಾನ ನೀಡಿದ್ದರೆ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿ ಮಾಡುವ ಹಂಬಲವಿತ್ತು. ಈಗ ಪ್ರತಿಭೆ, ಅನುಭವ, ಪ್ರಾಮಾಣಿಕತೆಗೆ ಬೆಲೆ ಸಿಗು ತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಸುಭದ್ರವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೂ ರಾಜೀನಾಮೆ ನೀಡುವುದಿಲ್ಲ. ಅವರು ಬಟ್ಟೆ ಹಾವು ತೋರಿಸಿ ಬೆದರಿಸುತ್ತಿದ್ದಾರೆ. ಯಾರಿಗೂ ಚುನಾವಣೆಗೆ ಹೋಗುವ ಧೈರ್ಯವಿಲ್ಲ. ಬಿಜೆಪಿಯವರು ಎಂಎಲ್​ಎಗಳ ಮನೆಗಳಿಗೆ ಹೋಗಿ ಪಕ್ಷಕ್ಕೆ ಸೇರಲು ದುಂಬಾಲು ಬೀಳುತ್ತಿರುವುದು ನೋಡಿದರೆ ಬಿಜೆಪಿಯು ತನಗಿದ್ದ ಮರ್ಯಾದೆ ಕಳೆದುಕೊಳ್ಳುತ್ತಿದೆ ಎಂದರು.