ಶಿಶು ಅಭಿವೃದ್ಧಿ ಅಧಿಕಾರಿ ಆರ್.ನಿರ್ಮಲಾ ಅನಿಸಿಕೆ I ಬಸವಾಪಟ್ಟಣದಲ್ಲಿ ಪೋಷಣ್ ಅಭಿಯಾನ
ಬಸವಾಪಟ್ಟಣ: ಯಾವುದೇ ರಾಷ್ಟ್ರದ ಅಭಿವೃದ್ಧಿಯಲ್ಲಿ ಆರೋಗ್ಯವಂತ ಸಮಾಜ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಚನ್ನಗಿರಿ ಶಿಶು ಅಭಿವೃದ್ಧಿ ಅಧಿಕಾರಿ ಆರ್.ನಿರ್ಮಲಾ ಹೇಳಿದರು.
ಸಮೀಪದ ಚಿರಡೋಣಿಯ ಶ್ರೀ ಕಾಳಿಕಾ ದೇವಿ ಸಮುದಾಯ ಭವನದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಪೋಷಣ್ ಅಭಿಯಾನದಲ್ಲಿ ಮಾತನಾಡಿದರು.
ಅಪೌಷ್ಟಿಕ ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಮಕ್ಕಳಲ್ಲಿ ಅಪೌಷ್ಟಿಕತೆ, ಮಕ್ಕಳ ಕುಂಠಿತ ಬೆಳವಣಿಗೆ, ರಕ್ತಹೀನತೆಯಂಥ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಮುದಾಯದ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದರು.
ಮಕ್ಕಳು, ಮಹಿಳೆಯರು, ಗರ್ಭಿಣಿಯರು, ಬಾಣಂತಿಯರಲ್ಲಿ ಅಪೌಷ್ಟಿಕ ಮಟ್ಟ ಕಡಿಮೆ ಮಾಡಿ, ಅವರ ಪೌಷ್ಟಿಕ ಮಟ್ಟ ಹೆಚ್ಚಿಸುವುದು ಮತ್ತವರ ಆರೋಗ್ಯವನ್ನು ಸುಧಾರಿಸುವುದು ಪೋಷಣ್ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನವ್ಯ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಹಣ ಗಳಿಸಬೇಕೆಂಬ ದುರಾಸೆಯಲ್ಲಿ ಮನುಷ್ಯ ಆರೋಗ್ಯವನ್ನು ಕಡೆಗಣಿಸಿ, ಅಶಾಂತಿ ಬದುಕನ್ನು ಸಾಗಿಸುತ್ತಿದ್ದಾನೆ ಎಂದರು.
ಪ್ರತಿಯೊಬ್ಬರೂ ಆರೋಗ್ಯದತ್ತ ಗಮನ ಹರಿಸಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ಕೈತೋಟಗಳಲ್ಲಿ ಆಹಾರ ಬೆಳೆಗಳನ್ನು ನಾವೇ ಬೆಳೆದುಕೊಂಡು ಬಳಸುವುದು ಅತಿ ಹೆಚ್ಚು ಸೂಕ್ತ ಎಂದು ಹೇಳಿದರು.
ಶಿಕ್ಷಕಿ ವೀಣಾ, ಗ್ರಾಮ ಪಂಚಾಯಿತಿ ಸದಸ್ಯ ಜಿ.ಎಸ್.ಶೇಖರಪ್ಪ ಗೌಡ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕಮಲಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಗರ್ಭಿಣಿಯರಿಗೆ ಉಡಿ ತುಂಬಿ ಸೀಮಂತ ಕಾರ್ಯ ಹಾಗೂ ಮಕ್ಕಳಿಗೆ ಅನ್ನ ಪ್ರಾಶನ ಮಾಡಿಸಲಾಯಿತು.
ಎಸಿಡಿಪಿಒ ಬಿ.ಎಸ್.ಶೈಲಾ, ಗ್ರಾಪಂ ಮಾಜಿ ಅಧ್ಯಕ್ಷೆ ಜ್ಯೋತಿ ಸದಾಶಿವಪ್ಪ, ಕಾರ್ಯಕರ್ತೆಯರಾದ ಪಿ.ಬಿ.ಕುಸುಮಾ, ಎಸ್.ನೇತ್ರಾವತಿ, ಸಿ.ಬಿ.ವಸಂತಕುಮಾರಿ, ಎಸ್.ಆಶಾ, ಶಾಲಿನಿ, ಎಚ್.ಎಸ್.ಸುನೀತಾ, ವಿಜಯಲಕ್ಷ್ಮಿ ಉಕ್ಕುಂದ್ ಇತರರಿದ್ದರು.