ನನಸಾಗುತ್ತಿದೆ ಎರಡು ವರ್ಷದ ಕನಸು

ಶಿವಮೊಗ್ಗದ ಡಿವಿಎಸ್ ವೃತ್ತಕ್ಕೆ ಬಸವೇಶ್ವರ ವೃತ್ತ ಎಂದು ನಾಮಕರಣ ಮಾಡಿ, ಬಸವ ಪುತ್ಥಳಿ ಪ್ರತಿಷ್ಠಾಪನೆ ಮಾಡಬೇಕೆಂದು ಈ ಹಿಂದೆಯೇ ನಗರಸಭೆಯಲ್ಲಿ ತೀರ್ವನಿಸಲಾಗಿತ್ತು. ಆ ಕಾರ್ಯ ಈಗ ಕೈಗೂಡುವ ಸಮಯ ಬಂದಿದೆ. ಲಂಡನ್​ನಿಂದ ಬಸವೇಶ್ವರ ಪುತ್ಥಳಿ ಬಂದಿದ್ದು, ನ 22ರಂದು ಶಿವಮೊಗ್ಗಕ್ಕೆ ಆಗಮಿಸಲಿದೆ. 22ರ ಮಧ್ಯಾಹ್ನ 3ಕ್ಕೆ ಬೆಕ್ಕಿನ ಕಲ್ಮಠದ ಎದುರು ಪ್ರತಿಮೆಯನ್ನು ಬರ ಮಾಡಿಕೊಳ್ಳಲಾಗುತ್ತದೆ. ಅಲ್ಲಿಂದ ಪ್ರಮುಖ ರಸ್ತೆಗಳಲ್ಲಿ ಅದ್ದೂರಿ ಮೆರವಣಿಗೆ ಮೂಲಕ ನಗರ ಪಾಲಿಕೆ ಆವರಣಕ್ಕೆ ತರಲಾಗುತ್ತದೆ.

ಪ್ರತಿಷ್ಠಾಪನೆಗೆ ದಿನ ನಿಗದಿಯಾಗಿಲ್ಲ: ಬಸವ ಪುತ್ಥಳಿ ಪ್ರತಿಷ್ಠಾಪನೆಗೆ ಇನ್ನಷ್ಟೇ ದಿನಾಂಕ ನಿಗದಿಯಾಗಬೇಕು. ಈಗಾಗಲೇ ಡಿವಿಎಸ್ ವೃತ್ತದಲ್ಲಿ ಪುತ್ಥಳಿ ಪ್ರತಿಷ್ಠಾಪಿಸಬೇಕೆಂಬ ಅಂದಿನ ನಗರಸಭೆ ಪ್ರಸ್ತಾವನೆಗೆ ಸರ್ಕಾರದ ಮಟ್ಟದಲ್ಲಿ ಅನುಮೋದನೆ ದೊರೆತಿರುವ ಬಗ್ಗೆಯೂ ಸಂದೇಹಗಳಿವೆ. ಈ ನಿಟ್ಟಿನಲ್ಲೂ ಕೆಲಸವಾಗಬೇಕಿದೆ. ಇನ್ನು ಗಾಂಧಿ ಪಾರ್ಕ್ ಆವರಣದಲ್ಲಿ ಪುತ್ಥಳಿ ಪ್ರತಿಷ್ಠಾಪಿಸುವ ಬಗ್ಗೆಯೂ ಚರ್ಚೆಗಳು ಜಾರಿಯಲ್ಲಿವೆ. ಜಾಗ ಗುರುತಿಸುವ ಜತೆಗೆ ಅಲ್ಲಿ ಪುತ್ಥಳಿ ಪ್ರತಿಷ್ಠಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈಗಿನಿಂದಲೇ ಪ್ರಯತ್ನಗಳು ನಡೆದರೆ ಮುಂದಿನ ವರ್ಷದ ಬಸವೇಶ್ವರ ಜಯಂತಿ ಸಂದರ್ಭದಲ್ಲಿ ನೂತನ ಪುತ್ಥಳಿ ಅನಾವರಣಗೊಳ್ಳುವ ಸಾಧ್ಯತೆಗಳಿವೆ.

ಎರಡು ವರ್ಷಗಳ ಕನಸೊಂದು ಈಡೇರುವ ಸಮಯ ಕೂಡಿ ಬಂದಿದೆ. ವಿಶ್ವ ಗುರು ಬಸವಣ್ಣನ ಪುತ್ಥಳಿಯನ್ನು ಶಿವಮೊಗ್ಗದಲ್ಲಿ ಪ್ರತಿಷ್ಠಾಪಿಸಬೇಕೆಂಬ ಪ್ರಯತ್ನ ಕೈಗೂಡುತ್ತಿದೆ. ನ 22ರಂದು ಬಸವ ಪುತ್ಥಳಿಯ ಮೆರವಣಿಗೆ ಶಿವಮೊಗ್ಗದಲ್ಲಿ ನಡೆಯಲಿದೆ. ಈ ಬಸವ ಪುತ್ಥಳಿಯ ವಿಶೇಷತೆ, ಇದರ ಹಿಂದಿನ ಪ್ರಯತ್ನಗಳ ಕುರಿತ ಸಮಗ್ರ ಸುದ್ದಿ ಇಲ್ಲಿದೆ.

ಆಗ ಈಡೇರದ ಬಯಕೆ

ಕಳೆದ ವರ್ಷ ಬಸವೇಶ್ವರ ಪುತ್ಥಳಿ ಸ್ವೀಕರಿಸಿದ್ದ ಸಂದರ್ಭದಲ್ಲಿ ಏ.18ರ ಬಸವೇಶ್ವರ ಜಯಂತಿ ಸಂದರ್ಭದಲ್ಲಿ ಅದನ್ನು ಶಿವಮೊಗ್ಗದ ಡಿವಿಎಸ್ ವೃತ್ತದಲ್ಲಿ ಸ್ಥಾಪಿಸಲು ಉದ್ಧೇಶಿಸಲಾಗಿತ್ತು. ಆದರೆ ಪುತ್ಥಳಿಯನ್ನು ಲಂಡನ್​ನಿಂದ ತರುವುದು ಸುಲಭದ ಮಾತಾಗಿರಲಿಲ್ಲ. ಅನೇಕ ರಾಜತಾಂತ್ರಿಕ ಹಾಗೂ ವ್ಯವಹಾರಿಕ ಸಮಸ್ಯೆಗಳು ಎದುರಾಗಿದ್ದವು. ಈ ಕಾರಣದಿಂದ ಬಸವೇಶ್ವರ ಜಯಂತಿ ಸಂದರ್ಭದಲ್ಲಿ ಪುತ್ಥಳಿ ಸ್ಥಾಪಿಸಬೇಕೆಂಬ ನಗರ ಪಾಲಿಕೆ ಸದಸ್ಯರ ಬಯಕೆ ಈಡೇರಿರಲಿಲ್ಲ.

ನೀರಜ್ ಪಾಟೀಲ್ ಕೊಡುಗೆ

ಲಂಡನ್​ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ನೀರಜ್ ಪಾಟೀಲ್, ಲ್ಯಾಂಬೆತ್​ನ ಬಸವೇಶ್ವರ ಫೌಂಡೇಶನ್​ನಿಂದ ಕೊಡುಗೆಯಾಗಿ ಶಿವಮೊಗ್ಗ ನಗರ ಪಾಲಿಕೆಗೆ ವಿಶ್ವಗುರು ಬಸವೇಶ್ವರರ ಪುತ್ಥಳಿಯನ್ನು ನೀಡಿದ್ದಾರೆ. 2017ರಲ್ಲಿ ಅ 8ರಂದು ಅಂದಿನ ಮೇಯರ್ ಏಳುಮಲೈ ಹಾಗೂ ಪಾಲಿಕೆ ಸದಸ್ಯ ಎಚ್.ಸಿ.ಯೋಗೀಶ್, ಲಂಡನ್​ಗೆ ತೆರಳಿ ನೀರಜ್ ಪಾಟೀಲ್ ಅವರಿಂದ ಬಸವೇಶ್ವರ ಪುತ್ಥಳಿ ಸ್ವೀಕರಿಸಿದ್ದರು. 2016ರಲ್ಲಿ ವೀರಶೈವ ಮಹಾಸಭಾ ಶಿವಮೊಗ್ಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯ ನೀರಜ್ ಪಾಟೀಲ್ ಅವರನ್ನು ಸನ್ಮಾನಿಸಲಾಗಿತ್ತು. ಅದೇ ಸಂದರ್ಭದಲ್ಲಿ ಶಿವಮೊಗ್ಗ ನಗರ ಪಾಲಿಕೆಯಿಂದಲೂ ಅವರನ್ನು ಗೌರವಿಸಿ, ಸಂವಾದ ಏರ್ಪಡಿಸಲಾಗಿತ್ತು. ಶಿವಮೊಗ್ಗದಲ್ಲಿ ಪ್ರತಿಷ್ಠಾಪನೆ ಮಾಡಲು ಲಂಡನ್​ನಲ್ಲಿ ಪ್ರತಿಷ್ಠಾಪಿಸಿರುವ ಮಾದರಿಯ ಬಸವೇಶ್ವರರ ಪುತ್ಥಳಿಯನ್ನು ಕೊಡುಗೆಯಾಗಿ ನೀಡುವುದಾಗಿ ನೀರಜ್ ಪಾಟೀಲ್ ಆಗ ಭರವಸೆ ನೀಡಿದ್ದರು.

ಬೆಂಗಳೂರಿಗೆ ಆಗಮಿಸಿದ ಪುತ್ಥಳಿ

ಲಂಡನ್​ನಿಂದ ಸರಕು ಸಾಗಣೆ ವಿಮಾನದ ಮೂಲಕ ಬಸವೇಶ್ವರ ಪುತ್ಥಳಿ ಕೆಲ ತಿಂಗಳ ಹಿಂದೆಯೇ ಬೆಂಗಳೂರಿಗೆ ಆಗಮಿಸಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅದನ್ನು ಇಲ್ಲಿಗೆ ತರುವುದು ಸಾಧ್ಯವಾಗಿರಲಿಲ್ಲ. ಈಗ ಎಲ್ಲವೂ ಸುಗಮವಾಗಿದೆ. ನಗರಕ್ಕೆ ಪುತ್ಥಳಿ ಆಗಮಿಸಲಿದೆ.

ಪುತ್ಥಳಿ ವಿಶೇಷತೆ

  • 3 ಅಡಿ ಎತ್ತರ
  • 25 ಲಕ್ಷ ರೂ. ಮೌಲ್ಯ
  • ಬ್ರಿಟನ್​ನ ಹೆಸರಾಂತ ಫೌಂಡ್ರಿ ಬ್ರಾಂಜ್ ಏಜ್ ಯುಕೆಯಿಂದ ನಿರ್ಮಾಣ

 

ಖರ್ಚು ವೆಚ್ಚದ ಮಾಹಿತಿ

ಸುಮಾರು 25 ಲಕ್ಷ ರೂ. ವೆಚ್ಚದ ಬಸವೇಶ್ವರ ಪುತ್ಥಳಿಯನ್ನು ಅನಿವಾಸಿ ಭಾರತೀಯ ನೀರಜ್ ಪಾಟೀಲ್ ಶಿವಮೊಗ್ಗ ನಗರ ಪಾಲಿಕೆಗೆ ಕೊಡುಗೆಯಾಗಿ ನೀಡಿದ್ದಾರೆ. ಲಂಡನ್​ನಿಂದ ಬೆಂಗಳೂರಿಗೆ ತರಲು ಸಾಗಣೆ ವೆಚ್ಚ, ಕಸ್ಟಮ್್ಸ ಡ್ಯೂಟಿ ಎಲ್ಲಾ ಸೇರಿ 4.22 ಲಕ್ಷ ರೂ. ಖರ್ಚಾಗಿದೆ.