ಗ್ರೀನ್ ಪರಿಸರ ತಾಲೂಕು ನಿರ್ಮಾಣ ನನ್ನ ಅಭಿಲಾಷೆ

ಬಸವನಬಾಗೇವಾಡಿ: ಬಸವನಬಾಗೇವಾಡಿ ಗ್ರೀನ್(ಹಸಿರು) ಪರಿಸರ ತಾಲೂಕನ್ನಾಗಿ ನಿರ್ಮಿಸುವುದೇ ನನ್ನ ಅಭಿಲಾಷೆಯಾಗಿದ್ದು, ಎಲ್ಲರ ಸಹಕಾರ ಅವಶ್ಯವಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಯರನಾಳದ ಶ್ರೀ ಜಗದ್ಗುರು ಪಂಪಾಪತಿ ಶಿವಯೋಗೇಶ್ವರ ಪ್ರೌಢಶಾಲೆಯಲ್ಲಿ ಜಿಪಂ, ತಾಪಂ, ಗ್ರಾಪಂ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಚ್ಛ ಮೇವ ಜಯತೆ- ಜಲಾಮೃತ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಚ್ಛತೆ ಜಾಗೃತಿ ಕೊರತೆಯಿಂದಾಗಿ ಕಾಲರಾ-ಮಲೇರಿಯಾ ವಿವಿಧ ರೋಗಗಳ ಮಧ್ಯೆ ಜೀವನ ಸಾಗಿಸುತ್ತಿರುವುದು ವಿಷಾದನೀಯವಾಗಿದೆ. ಬಸವನಬಾಗೇವಾಡಿ ತಾಲೂಕಿನಲ್ಲಿ ಹಸಿರು ಪರಿಸರ ನಿರ್ಮಾಣಕ್ಕೆ ಮುಂದಾಗಿದ್ದು, ಈಗಾಗಲೇ ಹಡಗಲಿ- ಯಂಭತ್ನಾಳ, ಬಿಜ್ಜಳ ಹೆದ್ದಾರಿ, ನಿಡಗುಂದಿ-ಬಸವನಬಾಗೇವಾಡಿ, ಹತ್ತರಕಿಹಾಳ-ಯರನಾಳ ಮಾರ್ಗದ ಪಕ್ಕದಲ್ಲಿ ಸಸಿಗಳನ್ನು ನೆಡಲಾಗಿದೆ ಎಂದು ತಿಳಿಸಿದರು.
ಗಂಗಾ ನದಿಯೂ ಅಸ್ವಚ್ಛವಾಗಿದ್ದು, 36 ಸಾವಿರ ಕೋಟಿ ರೂಗಳನ್ನು ಖರ್ಚು ಮಾಡಿದ್ದರೂ ನದಿ ನೀರು ಕುಡಿಯಲು ಯೋಗ್ಯವಾಗುತ್ತಿಲ್ಲ, ಸರ್ಕಾರ ಕೈಗೊಂಡ ಸ್ವಚ್ಛಮೇವ ಜಯತೆ ಕಾರ್ಯಕ್ರಮವೂ ಅರಣ್ಯ ಬೆಳೆಸುವ ಅಭಿಯಾನವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಒಂದು ಅಂಕ ನೀಡುವ ನಿಟ್ಟಿನಲ್ಲಿ ಮುಂದಾಗಿ ಪಠ್ಯೇತರ ಚಟುವಟಿಕೆ ಅವಧಿಯಲ್ಲಿ ಸಸಿಗಳನ್ನು ನೆಡಲು ಮುಂದಾಗಬೇಕು. ಶಿಕ್ಷಣ ಇಲಾಖೆ ಪ್ರಾಯೋಗಿಕ ಯೋಜನೆ ರೂಪಿಸಿ ಅನುಷ್ಠಾನಕ್ಕೆ ಮುಂದಾದರೆ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡುಗೆ ನೀಡಲು ಸಾಧ್ಯವಿದೆ ಎಂದರು.
ವಿರಕ್ತಮಠದ ಗುರು ಸಂಗನಬಸವ ಮಹಾಸ್ವಾಮೀಜಿ ಮಾತನಾಡಿ, ಜಿಲ್ಲೆಯ ಕಾಲಜ್ಞಾನಿ ಚಿಕ್ಕಯ್ಯ ಅಜ್ಜನವರು ಭೂಮಿಯು ಬರಡಾಗುತ್ತದೆ ಎಂದು ಹೇಳಿದ್ದರು. ಅವರ ಮಾತಿನಂತೆ ಜನತೆ ಪರಿಸರ ಕಾಳಜಿಯಿಂದ ನುಣುಚಿಕೊಂಡಿದ್ದರಿಂದಾಗಿ ಭೂಮಿ ಬರಡಾಗಿದೆ. ನೀರು-ಉತ್ತಮ ಪರಿಸರ ಹುಡುಕಾಡಬೇಕಿದೆ. ಜಗತ್ತಿನಲ್ಲಿ ವಿಶಿಷ್ಟವಾಗಿ ಭೂಮಿ-ಪ್ರಕೃತಿ ಮಾತೃಸ್ವರೂಪದಲ್ಲಿ ಕಂಡು ಪೂಜಿಸುವ ಭಾರತೀಯ ಹಿಂದು ಸಂಸ್ಕೃತಿಯಲ್ಲಿ ನಿರ್ಲಕ್ಷಿಸಿದ್ದರಿಂದಾಗಿ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದರು.
ಗ್ರಾಪಂ ಅಧ್ಯಕ್ಷೆ ರುಕ್ಮವ್ವ ಕರಭಂಟನಾಳ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಕಾಂಗ್ರೆಸ್ ಮುಖಂಡ ಅಣ್ಯಾಸಾಹೇಬಗೌಡ ಪಾಟೀಲ, ವಲಯ ಅರಣ್ಯ ಅಧಿಕಾರಿ ಹರೀಶ ದೇವಜಿ, ಜಿಪಂ ಎಇ ಎಸ್.ಜಿ. ಭೋಸಲೆ ಮತ್ತಿತರರಿದ್ದರು. ತಾಪಂ ಇಒ ಬಿ.ಜೆ. ಇಂಡಿ ಸ್ವಾಗತಿಸಿ, ಪ್ರತಿಜ್ಞಾವಿಧಿ ಬೋಧಿಸಿದರು. ಮಲ್ಲು ರಾಜನಾಳ ನಿರೂಪಿಸಿದರು. ರಮೇಶ ಜೋಗೂರ ವಂದಿಸಿದರು.

Leave a Reply

Your email address will not be published. Required fields are marked *