ಇಂದಿನಿಂದ ಆಲಮಟ್ಟಿ ಕಾಲುವೆಗಳಿಗೆ ನೀರು

ಬಸವನಬಾಗೇವಾಡಿ: ಹಿಂಗಾರು ಬೆಳೆಗಳ ಅನುಕೂಲಕ್ಕಾಗಿ ನ.25 ರಿಂದ ಡಿ.4ರವರೆಗೆ 10 ದಿನ 2 ಟಿಎಂಸಿ ನೀರನ್ನು ಕಾಲುವೆಗಳಿಗೆ ಹರಿಸಲಾಗುವುದು ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಹಿಂಗಾರು ಬೆಳೆಗಳು ಬೆಳೆದು ನಿಂತಿದ್ದು, ಅವುಗಳಿಗೆ ನೀರಿನ ಅವಶ್ಯವಿದೆ. ಆಲಮಟ್ಟಿ ಜಲಾಶಯದ ನೀರನ್ನು ಕಾಲುವೆಗಳ ಮುಖಾಂತರ ಹರಿಸಬೇಕೆಂದು ರೈತರ ಮನವಿ ಅನುಗುಣವಾಗಿ 10 ದಿನ ಬೆಳೆಗಳ ರಕ್ಷಣೆಗಾಗಿ ನ್ಯಾಯ ಸಮ್ಮತ ಹಾಗೂ ನೀರಿನ ಸದ್ವಿನಿಯೋಗಕ್ಕಾಗಿ 2 ಟಿಎಂಸಿ ನೀರನ್ನು ಆಲಮಟ್ಟಿ ಎಡದಂಡೆ, ಬಲದಂಡೆ ಹಾಗೂ ಮುಳವಾಡ ಏತ ನೀರಾವರಿ ಕಾಲುವೆಗಳಿಗೆ ನೀರು ಬಿಡಲು ನಿಶ್ಚಯಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಈ ಹಿಂದೆ ಆಲಮಟ್ಟಿ ಕೆಬಿಜೆಎನ್​ಎಲ್ ಕಚೇರಿಯಲ್ಲಿ ನಡೆದ ಐಸಿಸಿ ಸಭೆಯಲ್ಲಿ ಹಿಂಗಾರಿಗೆ ನೀರು ಬಿಡುವುದಿಲ್ಲ ಎಂದು ನಿರ್ಧರಿಸಿ, ನೀರು ಹರಿಸುವುದನ್ನು ನ. 14ಕ್ಕೆ ಕೊನೆಗೊಳಿಸಲಾಗಿತ್ತು. ರೈತರ ಮನವಿ ಮೇರೆಗೆ ಅವರ ಹಿತ ಕಾಪಾಡಲು ಕಾಲುವೆ ಮುಖಾಂತರ ನೀರು ಹರಿಸಲು ನಿರ್ಧರಿಸಲಾಯಿತು. ಬಾಗಲಕೋಟೆ-ವಿಜಯಪುರ ಜಿಲ್ಲೆಯ 30 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಜಮೀನುಗಳಿಗೆ ನೀರು ಉಪಯೋಗವಾಗಲಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಕೆಬಿಜೆಎನ್​ಎಲ್ ಪ್ರಭಾರ ಮುಖ್ಯ ಅಭಿಯಂತರ ಟಿ.ವೆಂಕಟೇಶ, ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ.ಪಾಟೀಲ, ಕೆಬಿಜೆಎನ್​ಎಲ್ ಅಧಿಕಾರಿ ವಿ.ಜಿ. ಕುಲಕರ್ಣಿ, ಎಸ್.ಎಂ. ಜೋಶಿ, ಶರಣಪ್ಪ ಚಲವಾದಿ, ಎನ್.ಬಿ. ಸಾಂಬಾ ಇತರರಿದ್ದರು.

ಜೂನ್​ವರೆಗೆ ನೀರು ಉಳಿಸಿಕೊಳ್ಳಲು ಪ್ರಯತ್ನ

ನಾರಾಯಣಪುರ ಜಲಾಶಯಕ್ಕೆ 5 ಟಿಎಂಸಿ ನೀರು ಬಿಡಲಾಗಿದ್ದು, ಆಲಮಟ್ಟಿ ಜಲಾಶಯದಲ್ಲಿ 515.39 ಮೀಟರ್​ನಲ್ಲಿ 50 ಟಿಎಂಸಿ ನೀರು ಸಂಗ್ರಹವಿದೆ. ಮುಂಬರುವ ಜೂನ್​ವರೆಗೆ ಜಲಾಶಯದಲ್ಲಿ ನೀರು ಉಳಿಸಿಕೊಂಡು ಕುಡಿಯುವ ನೀರನ್ನು ಒದಗಿಸಬೇಕಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಇತ್ತೀಚೆಗೆ ಚಾಲನೆ ನೀಡಿದ ವಿಜಯಪುರ ಮುಖ್ಯ ಕಾಲುವೆಯ ನೀರು 70 ಕಿ.ಮೀ.ವರೆಗೆ ಹರಿದಿದ್ದು, 12 ಕೆರೆಗಳ ಪೈಕಿ ಈಗ ಕೂಡಗಿ, ಮಸಬಿನಾಳ, ಕುಮಟಗಿ ಸೇರಿದಂತೆ ಒಟ್ಟು 8 ಕೆರೆಗಳನ್ನು ತುಂಬಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.