ಮಹಿಳೆಯರು ಆರ್ಥಿಕ ಸಬಲರಾಗಿ

ವಿಜಯಪುರ: ಮಹಿಳೆಯರು ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡೆದು, ಆರ್ಥಿಕ ಅಭಿವೃದ್ಧಿ ಹೊಂದಬೇಕು ಹಾಗೂ ಸಮಸ್ಯೆಗಳು ಎದುರಾದಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆದುಕೊಳ್ಳಬೇಕು ಎಂದು ಡಿವೈಎಸ್ಪಿ ಲಕ್ಷ್ಮಿನಾರಾಯಣ ಹೇಳಿದರು.
ಬಸನಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದ ಕೆಂಗನಾಳ ಕಲ್ಯಾಣ ಮಂಟಪದಲ್ಲಿ ಸಬಲ ಸಂಸ್ಥೆ ಹಾಗೂ ಚೆನ್ನೈನ ಸೀಮನ್‌ಗಮೇಶಾ ಸಂಸ್ಥೆ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಗ್ರಾಮ ಸಮೃದ್ಧಿ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಸೋಮನಗೌಡ ಐನಾಪುರ ಮಾತನಾಡಿ, ಮಹಿಳೆೆಯರು ಹಾಗೂ ರೈತರು ತಯಾರಿಸಿದ ವಸ್ತುಗಳಿಗೆ ರೂರಲ್ ಮಾರ್ಟ್‌ಗಳನ್ನು ಹೊಂದುವುದು ಬಹಳ ಮುಖ್ಯವಾಗಿದೆ ಎಂದರು.
ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಅನಸೂಯಾ ದೊಡ್ಡಣ್ಣವರ ಮಾತನಾಡಿ, ಜಮೀನು ಹೊಂದಿರುವ ಮಹಿಳೆಯರು ತೋಟಗಾರಿಕೆ ಇಲಾಖೆಯಿಂದ ಶೇ.75ರಷ್ಟು ಸಬ್ಸಿಡಿ ಪಡೆಯಬಹುದು. ಅದಕ್ಕಾಗಿ ಮಹಿಳೆಯರು ತಮ್ಮ ಗಂಡಂದಿರ ಹೆಸರಿನಲ್ಲಿರುವ ಸ್ವಲ್ಪ ಜಮೀನನ್ನು ನಿಮ್ಮ ಹೆಸರಿಗೆ ನೋಂದಾಯಿಸಿಕೊಳ್ಳಿ ಎಂದು ಹೇಳಿದರು.
ನಬಾರ್ಡ್ ಬ್ಯಾಂಕಿನ ವಿದ್ಯಾಗಣೇಶನ್ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ನಿರ್ದೇಶಕ ಟಿ.ಸಿದ್ದಪ್ಪ ಮಾತನಾಡಿ, ಕೈಗಾರಿಕೆ ಆರಂಭಿಸಲು ಮಹಿಳೆಯರು ಮುಂದಾದರೆ, ಇಲಾಖೆ ಎಲ್ಲ ತಾಂತ್ರಿಕ ಸಹಾಯ ನೀಡಲು ಸಿದ್ಧವಿದೆ ಎಂದು ಹೇಳಿದರು. ಜಿಪಂ ಸದಸ್ಯೆ ಶ್ರೀದೇವಿ ಐಹೊಳೆ ಮಾತನಾಡಿದರು. ಮಲ್ಲಮ್ಮ ಯಾಳವಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸಬಲ ಸಂಸ್ಥೆ ಸಮೃದ್ಧಿ ಯೋಜನೆಯಡಿ 2 ಸಾವಿರ ಮಹಿಳೆರಿಯರಿಗೆ ಸ್ವಯಂ ಉದ್ಯೋಗ ಸೃಷ್ಟಿಸಲು 5 ಗ್ರಾಮಗಳನ್ನು ಆಯ್ಕೆಮಾಡಿದೆ. ಅವುಗಳಲ್ಲಿ ಕಾರಜೋಳ, ತೊನಶ್ಯಾಳ, ಕಾಖಂಡಕಿ, ಮುಳವಾಡ ಹಾಗೂ ಬಬಲೇಶ್ವರ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಸಿದ್ದು ಭೂಸರೆಡ್ಡಿ ವಂದಿಸಿದರು.