ಕಾಲುವೆಗೆ ಹರಿದ ನೀರು, ರೈತರಲ್ಲಿ ಸಂತಸ

ವಿಜಯಪುರ: ಬರದ ನಾಡು ಎಂದೇ ಖ್ಯಾತಿ ಪಡೆದ ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ಹನಿ ನೀರಿಗೂ ಹಾಹಾಕಾರ ಉಲ್ಬಣಿಸಿದ್ದು, ಕುಡಿಯಲು ನೀರಿಲ್ಲದೆ ಜನ, ಜಾನುವಾರು ಪರಿತಪಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಬಸವನ ಬಾಗೇವಾಡಿ ತಾಲೂಕಿನ ಕೂಡಗಿ ಬಳಿ ಮುಳವಾಡ ನೀರಾವರಿ ಯೋಜನೆಯಡಿ ವಿಜಯಪುರ ಮುಖ್ಯ ಕಾಲುವೆ ಮೂಲಕ ಬುಧವಾರ ಪ್ರಾಯೋಗಿಕ ನೀರು ಹರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಲುವೆಗೆ ನೀರು ಹರಿಸುವ ಯೋಜನೆಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಚಾಲನೆ ನೀಡಿದ ಹಿನ್ನೆಲೆಯಲ್ಲಿ ಕಾಲುವೆಗೆ ನೀರು ಹರಿಯುವುದನ್ನು ಕಂಡು ರೈತರು ಸಂತಸಗೊಂಡರು.

ಈ ವೇಳೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ, ಅನೇಕ ತೊಡಕುಗಳಿಂದ ಮುಳವಾಡ ನೀರಾವರಿ ಯೋಜನೆಯಡಿ ವಿಜಯಪುರ ಮುಖ್ಯ ಕಾಲುವೆಗೆ ನೀರು ಹರಿಸಲಾಗಿರಲಿಲ್ಲ. ಇದೀಗ ಈ ಭಾಗದ ಜನರ, ರೈತರ ಬೇಡಿಕೆ ಈಡೇರಿದೆ. ಈ ಯೋಜನೆಯಡಿ ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 690 ಕೋಟಿ ರೂ. ವೆಚ್ಚ ಮಾಡಿದೆ. ಅದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆ ಕಾರಣ. ಈ ಜಿಲ್ಲೆಗೆ ನೀರಾವರಿ ಖಾತೆ ನೀಡಿ, ಬರದ ಜಿಲ್ಲೆ ಎನ್ನುವ ಹಣೆಪಟ್ಟಿಯನ್ನು ಹೋಗಲಾಡಿಸಲು ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಶ್ರಮಿಸಿದ್ದಾರೆ ಎಂದರು.

ಕಳೆದ ಸರ್ಕಾರದ ಅವಧಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಅಭಿವೃದ್ಧಿಗೆ 52 ಸಾವಿರ ಕೋಟಿ ರೂ. ವೆಚ್ಚ ಮಾಡಿದೆ. ಈ ರೀತಿ ಯಾವ ಸರ್ಕಾರವೂ ನೀರಾವರಿ ಯೋಜನೆಗಳಿಗೆ ಒತ್ತು ನೀಡಿರಲಿಲ್ಲ. ಈಗಾಗಲೇ ಕಾಲುವೆಗಳು ನಿರ್ವಣವಾಗಿವೆ. ಆದರೆ ಕಾಲುವೆಗೆ ನೀರು ಹರಿಯದೇ ಇರುವುದರಿಂದ ರೈತರು ನಿರಾಸಕ್ತರಾಗಿದ್ದರೂ, ಈಗ ಮತ್ತೆ ಯೋಜನೆಗಳಿಗೆ ಮರುಜೀವ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಸಿ.ಪಿ.ಪಾಟೀಲ, ಚಂದ್ರಶೇಖರಗೌಡ ಪಾಟೀಲ, ಹಸನ್ ಕೊಲ್ಹಾರ, ವೆಂಕಟೇಶ್, ಶೇಖರ ದಳವಾಯಿ, ಈಶ್ವರ ಜಾಧವ, ಬಿ.ಎಸ್.ಪಾಟೀಲ ಹಾಗೂ ರೈತರು ಉಪಸ್ಥಿತರಿದ್ದರು.

32 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಬಸವನ ಬಾಗೇವಾಡಿ, ಮುದ್ದೇಬಿಹಾಳ, ವಿಜಯಪುರ ಮೂರು ತಾಲೂಕುಗಳಿಗೆ ಕುಡಿಯುವ ನೀರು ಪೂರೈಸಲು ಆಲಮಟ್ಟಿ ಜಲಾಶಯದಿಂದ 32 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬರ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತಿದೆ. ಜೂನ್, ಜುಲೈ ವರೆಗೆ ಅವಳಿ ಜಿಲ್ಲೆಗೆ ಕುಡಿಯುವ ನೀರು ಪೂರೈಕೆ ಹಿನ್ನೆಲೆಯಲ್ಲಿ ಈಗಿನಿಂದಲೇ ನೀರಿನ ನಿರ್ವಹಣೆಗೆ ಕ್ರಮ ವಹಿಸಲಾಗಿದೆ. ಅದಕ್ಕಾಗಿ ಹಿಂಗಾರಿನ ಬೆಳೆಗಳಿಗೆ ನೀರು ಪೂರೈಕೆ ಮಾಡುವುದನ್ನು ಕೂಡ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಎಲ್ಲರೂ ನಿರ್ಣಯ ಕೈಗೊಂಡಿದ್ದಾರೆ. ಮತ್ತೊಮ್ಮೆ ಸಭೆ ಕರೆದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಭೀಕರ ಬರಗಾಲ ಸಚಿವ ಬಣ್ಣನೆ

1991ರಲ್ಲಿ ಬಂದ ಬರಗಾಲದ ನಂತರ ಇದೀಗ ಎರಡು ದಶಕ ಕಳೆದ ಮೇಲೆ ಮತ್ತೊಮ್ಮೆ ಮರುಕಳಿಸಿದೆ. ಇಂತಹ ಭೀಕರ ಬರಗಾಲದ ದವಡೆಯಿಂದ ತಪ್ಪಿಸಿಕೊಳ್ಳಲು ಅವಳಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ ಎಂದರು. ಆಲಮಟ್ಟಿ ಜಲಾಶಯ ಎತ್ತರಿಸಿದರೆ ಅವಳಿ ಜಿಲ್ಲೆಯಲ್ಲಿ ಶಾಶ್ವತ ಬರಗಾಲ ದೂರವಾಗಲಿದೆ. ಈ ಹಿಂದೆ ಆಲಮಟ್ಟಿಗೆ ಹರಿಯುತ್ತಿದ್ದ ನೀರು ಬೇರೆಯವರ ಪಾಲಾಗುತ್ತಿತ್ತು. ಇದೀಗ ಜಿಲ್ಲೆಯ ಜನಪ್ರತಿನಿಧಿಗಳ ಆಶಯದಂತೆ ಜಿಲ್ಲೆಯ ರೈತರಿಗೆ ನೀರು ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.