ಸರ್ಕಾರಿ ಶಾಲೆಯಲ್ಲಿ ಮಂಗಗಳ ಹಾವಳಿ

ಬಸವನಬಾಗೇವಾಡಿ: ಪಟ್ಟಣದ ಸಿಸಮರಡಿಯಲ್ಲಿರುವ ಶಾಸಕರ ಮಾದರಿ ಸರ್ಕಾರಿ ಗಂಡು ಮತ್ತು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಗಳ ಹಾವಳಿ ಮಿತಿ ಮೀರಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕರು, ಪಾಲಕರು ದೂರಿದ್ದಾರೆ.

15 ದಿನಗಳಿಂದ ಮಕ್ಕಳು ಶಾಲೆಗೆ ಆಗಮಿಸುವಾಗ ಇಲ್ಲವೆ ಆಟೋಟದ ಸಮಯದಲ್ಲಿ ಮಂಗಗಳು ದಾಳಿ ನಡೆಸಿ ಕೈಯಲ್ಲಿರುವ ವಸ್ತುಗಳನ್ನು ಕಸಿದುಕೊಂಡು ಮಕ್ಕಳನ್ನು ಗಾಯಗೊಳಿಸುತ್ತಿವೆ. ಇದರಿಂದ ಮಂಗಗಳ ಕಾಟದಿಂದ ಪಾಲಕರು ಆತಂಕಗೊಂಡಿದ್ದಾರೆ.

ಮಂಗಗಳಿಂದಾಗಿ ಶಾಲೆ ಅವಧಿಯಲ್ಲಿ ಮಕ್ಕಳು ಮೈದಾನದಲ್ಲಿ ಆಟವಾಡದೆ ಅಥವಾ ಊಟ-ನೀರಿಗೂ ಹೊರಗಡೆ ಬಾರದಂತಾಗಿದೆ. ಮಂಗಗಳ ಹಾವಳಿ ತಪ್ಪಿಸಲು ನಿತ್ಯ ಇಬ್ಬರು ಶಿಕ್ಷಕರು ಮಂಗಗಳನ್ನು ಕಾಯುವುದೇ ಕಾಯಕವಾಗಿದೆ.

ಒಬ್ಬ ಹುಡುಗ, ಐದಾರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಹಿಳೆ ಮೇಲೆ ಮಂಗಗಳು ದಾಳಿ ಮಾಡಿವೆ. ಮಂಗಗಳ ಹಾವಳಿಯಿಂದ ಶಾಲೆ ಕೊಠಡಿಗಳನ್ನು ಭದ್ರಪಡಿಸಿಕೊಂಡು ಪಾಠ ಮಾಡಲಾಗುತ್ತಿದೆ. ನಿತ್ಯ ಪಟಾಕಿ ಸುಡುತ್ತಿದ್ದರೂ ಮಂಗಗಳ ಹಾವಳಿ ಕಡಿಮೆಯಾಗಿಲ್ಲ. ಈ ಕುರಿತು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದರೆ ಎಷ್ಟು ಮಂಗಗಳು ಇವೆ? ಯಾವ ಸಮಯಕ್ಕೆ ಬರುತ್ತವೆ? ನೀವು ಹುಷಾರ್ ಆಗೀರಿ, ನಮ್ಮ ಸಿಬ್ಬಂದಿ ಕಳಿಸುತ್ತೇವೆ ಎಂಬ ರೆಡಿಮೇಡ್ ಉತ್ತರ ಬರುತ್ತದೆ. ರಕ್ಷಣೆ ಕೊಡಬೇಕಾದ ಅರಣ್ಯ ಇಲಾಖೆ ಸಿಬ್ಬಂದಿ ಕೈಕಟ್ಟಿ ಕುಳಿತಿರುವುದು ಶಿಕ್ಷಕರ ಹಾಗೂ ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಕರೆ ಸ್ವೀಕರಿಸದ ಅರಣ್ಯ ಅಧಿಕಾರಿ

ಮಂಗಗಳ ಹಾವಳಿ ತಪ್ಪಿಸುವಂತೆ ವಲಯ ಅರಣ್ಯಾಧಿಕಾರಿ (ಸಾಮಾಜಿಕ) ಅವರನ್ನು ಸಂರ್ಪಸಿದರೆ ಮಂಗಗಳ ಹಿಡಿಯುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಮುದ್ದೇಬಿಹಾಳ ವಲಯ ಅರಣ್ಯಾಧಿಕಾರಿ (ಪ್ರಾದೇಶಿಕ) ಸಂಪರ್ಕ ನಂಬರ್ ತಿಳಿಸುತ್ತೇನೆ ಅವರಿಗೆ ಫೋನ್ ಮಾಡಿ ಎಂದು ಹೇಳಿ ನಂಬರ್ ಕೊಡುತ್ತಾರೆ. ಆದರೆ, ಆ ನಂಬರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ ಎಂದು ಶಿಕ್ಷಕರು ದೂರಿದ್ದಾರೆ.

Leave a Reply

Your email address will not be published. Required fields are marked *