ಬಸವನಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಮಂಡಳಿಗೆ ಯತ್ನ

ಬಸವನಬಾಗೇವಾಡಿ: ಬಸವನಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ಅಥವಾ ಮಂಡಳಿ ರಚನೆಯಾದರೆ ಬಸವನಬಾಗೇವಾಡಿ ಅಭಿವೃದ್ಧಿಗೆ ಪೂರಕವಾಗಲಿದ್ದು, ತತ್ಸಂಬಂಧ ಮುಖ್ಯಮಂತ್ರಿಗಳ ಮನವೊಲಿಸುವ ಜೊತೆಗೆ ಮುಂಬರುವ ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಹೇಳಿದರು.

ಪಟ್ಟಣದಲ್ಲಿ ಬಸವ ಜಯಂತಿ ನಿಮಿತ್ತ ಬಸವೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದ ಶಾಸಕರಾದ ಶಿವಾನಂದ ಪಾಟೀಲರು ಸಚಿವರಾಗಿದ್ದು ಅವರೂ ಕ್ಯಾಬಿನೆಟ್‌ನಲ್ಲಿ ವಿಷಯ ತರುವ ನಿಟ್ಟಿನಲ್ಲಿ ಮುಂದಾದರೆ ತಾವೂ ಅದಕ್ಕೆ ಬೆಂಬಲವಾಗಿ ನಿಂತು ಮುಖ್ಯಮಂತ್ರಿಗಳ ಮನವೊಲಿಸಲು ಶ್ರಮಿಸುವುದಾಗಿ ಹೇಳಿದರು.

ಪಟ್ಟಣದಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳ ಆರಂಭದ ಬಗ್ಗೆ ಮಾತನಾಡಿದ ಅವರು, ಪಟ್ಟಣದ ಯಾವುದೇ ಅಭಿವೃದ್ಧಿ ಕೆಲಸಗಳ ಬಗ್ಗೆ ಪಕ್ಷಬೇಧ ಮರೆದು ಶಿವಾನಂದ ಪಾಟೀಲರ ಜೊತೆ ಇರುವುದಾಗಿ ಹೇಳಿದ ಅವರು, ರಿಂಗ್ ರಸ್ತೆ ನಿರ್ಮಾಣದ ಕುರಿತಾಗಿ ತಾಂತ್ರಿಕ ಅನುಭವಿಗಳ ವರದಿ ಪಡೆದು ರಸ್ತೆ ನಿರ್ಮಿಸಬಹುದಾಗಿದೆ ಎಂದರು.

Leave a Reply

Your email address will not be published. Required fields are marked *