ಬಸವನಬಾಗೇವಾಡಿ: ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ಬಸವೇಶ್ವರ (ನಂದಿ) ಮೂರ್ತಿಗೆ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ರಾಷ್ಟ್ರೀಯ ಬಸವ ಸೈನ್ಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಎಂ.ಎಂ.ಅತ್ತಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಬಸವ ಸೈನ್ಯದ ತಾಲೂಕಾಧ್ಯಕ್ಷ ರಾಜು ಪಟ್ಟಣಶೆಟ್ಟಿ ಮಾತನಾಡಿ, ಬಸವೇಶ್ವರ (ನಂದೀಶ್ವರ) ಮೂರ್ತಿಗೆ ದುಷ್ಕರ್ಮಿಗಳು ಅವಮಾನ ಮಾಡಿ ಸಮಾಜದಲ್ಲಿ ಗಲಭೆ ಸೃಷ್ಟಿಸಿದ್ದಾರೆ. ಅವರನ್ನು ಇನ್ನೆರಡು ದಿನದಲ್ಲಿ ಬಂಧಿಸಿ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ಬಸವನಬಾಗೇವಾಡಿ ಪಟ್ಟಣ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವಿ ರಾಠೋಡ, ಮುಖಂಡರಾದ ಸುರೇಶ ಪಾಟೀಲ, ಸುರೇಶ ಮಣ್ಣೂರ, ಸಂಜಯ ಬಿರಾದಾರ, ಸಂಗಮೇಶ ಜಾಲಗೇರಿ, ಮಂಜುನಾಥ ಜಾಲಗೇರಿ, ಮುತ್ತು ಪತ್ತಾರ, ಅರವಿಂದ ಜಾಲಗೇರಿ, ವೀರೇಶ ಹಿರೇಮಠ, ವಿರೇಶ ಪಟ್ಟಣಶೆಟ್ಟಿ, ಕಿರಣ ಜನಗೊಂಡ, ವಾಸೀಂ ಮಕಾನದಾರ, ಸೋಮಶೇಖರ ಪಟ್ಟಣಶೆಟ್ಟಿ ಇತರರು ಇದ್ದರು.